ಶ್ರೀರಾಮಚಂದ್ರಾಪುರ ಮಠದಿಂದ ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿವಿ: ರಾಘವೇಶ್ವರ ಶ್ರೀ

ದೇವಾಲಯ ಶ್ರೀಗೋಕರ್ಣ ಸುದ್ದಿ

ಗೋಕರ್ಣ: ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ. ತಕ್ಷಶಿಲೆ ವಿವಿ ಮಾದರಿಯಲ್ಲಿ ಇದು ಬೃಹದಾಕಾರವಾಗಿ ಬೆಳೆಯಲಿದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿದರು. ಇಂಥ ವಿದ್ಯಾಸಂಸ್ಥೆ ಕಟ್ಟುವ ಮುನ್ನ ಭದ್ರಕಾಳಿ ಶಿಕ್ಷಣ ಸಂಸ್ಥೆಯಂಥ ಉತ್ತಮ ಸಂಸ್ಥೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ಭಾರತೀಯ ಪ್ರಾಚೀನ ಶಿಕ್ಷಣ, ಕಲೆಗಳ ಪುನರುತ್ಥಾನ ನೂತನ ವಿದ್ಯಾಪೀಠದ ಉದ್ದೇಶ ಎಂದು ಹೇಳಿದರು.

ಪುರಾತನ ಸಂಸ್ಥೆಗೆ ಸನಾತನ ಸಂಸ್ಥೆಯಿಂದ ಸನ್ಮಾನ ಪ್ರದಾನ ನಡೆದಿದೆ. ಇದು ದೈವೇಚ್ಛೆ. ಮಣ್ಣಿನಲ್ಲಿ ಬೆಳೆದ ವೃಕ್ಷ ಮಣ್ಣಿಗೆ ನೆರಳಾಗುತ್ತದೆ. ಆಧಾರವಾಗುತ್ತದೆ ಮತ್ತು ಆ ಮಣ್ಣಿಗೆ ಅಲಂಕಾರವಾಗುತ್ತದೆ. ಅಂತೆಯೇ ಮಹಾಬಲನ ಸನ್ನಿಧಿಯಲ್ಲಿ ಬೆಳೆದ ಭದ್ರಕಾಳಿ ಶಿಕ್ಷಣ ಸಂಸ್ಥೆ ಈ ಭಾಗಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿದೆ ಎಂದು ಬಣ್ಣಿಸಿದರು. ಭದ್ರಕಾಳಿ ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ, ಪರೀಕ್ಷೆ ಬರೆದ ನೆನಪನ್ನು ಸ್ವಾಮೀಜಿ ಹಂಚಿಕೊಂಡರು. ಲಕ್ಷಾಂತರ ಮಕ್ಕಳ ಬದುಕನ್ನು ಬೆಳಗಿಸಿದ ಸಂಸ್ಥೆಯ ಸೇವೆ ಅವರ್ಣನೀಯ ಎಂದು ಹೇಳಿದರು. ಸಂಸ್ಥೆಗೆ ಅಗತ್ಯ ಸೇವೆ ಸಲ್ಲಿಸಲು ದೇವಾಲಯ, ಶ್ರೀರಾಮಚಂದ್ರಾಪುರ ಮಠ ಸಿದ್ಧವಿದೆ ಎಂದರು.

ಭದ್ರಕಾಳಿ ವಿದ್ಯಾಸಂಸ್ಥೆಗೆ ಇದೇ ಸಂದರ್ಭದಲ್ಲಿ ಸಾರ್ವಭೌಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1927ರಲ್ಲಿ ಆರಂಭವಾಗಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ವಿ.ಆರ್. ಮಲ್ಲನ್ ಮತ್ತು ಜಿ.ಎನ್.ನಾಯಕ ಪ್ರಶಸ್ತಿ ಸ್ವೀಕರಿಸಿದರು. ಕುಮಟಾ ಶಾಸಕ ದಿನಕರ ಶೆಟ್ಟಿ, ಹಿರಿಯ ಪತ್ರಕರ್ತ ವಿನಾಯಕ ಭಟ್ ಮುರೂರು ಭಾಗವಹಿಸಿದ್ದರು. ತಾಲೂಕು ಪಂಚಾಯ್ತಿ ಸದಸ್ಯ ಮಹೇಶ್ ಶೆಟ್ಟಿ ಅವಲೋಕನ ನೆರವೇರಿಸಿದರು.

ಶಿವರಾತ್ರಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷೆ ಡಾ.ಶೀಲಾ ಹೊಸಮನೆ ಸನ್ಮಾನಪತ್ರ ವಾಚಿಸಿದರು. ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಸಭಾಪೂಜೆ ನೆರವೇರಿಸಿದರು. ಶಿರಸಿಯ ಗಣಪತಿ ಶಿವರಾಮ ಯಾಜಿ ಸಂಕಲನ ಮಾಡಿದ ಗೋಮಾತ್ರಷ್ಟೋತ್ತರ ಶತನಾಮ ಸ್ತೋತ್ರ ಮತ್ತು ನಾಮಾವಳಿ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಮಲ್ಲನ್ ಮಾತನಾಡಿ, “1927ರಲ್ಲೇ ಈ ಭಾಗದ ಜನತೆಗೆ ಇಂಗ್ಲಿಷ್ ಕಲಿಕೆಗೆ ಅವಕಾಶ ಮಾಡಿಕೊಡಬೇಕು ಎಂಬ ದೃಷ್ಟಿಯಿಂದ ಆರಂಭಿಸಿದ ಸಂಸ್ಥೆ ಜನಸೇವೆ ಮಾಡುತ್ತಾ ಬಂದಿದೆ” ಎಂದು ಹೇಳಿದರು. ಗಣೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *