ವಿದ್ಯಾರ್ಥಿಗಳಿಗೆ ಭಾಷೆ, ಸಂಸ್ಕೃತಿಯ ಪರಿಚಯ ಅವಶ್ಯ : ಶಕುಂತಳಾ ಟಿ.ಶೆಟ್ಟಿ

ವಿದ್ಯಾಲಯ

ವಿದ್ಯಾರ್ಥಿಗಳಿಗೆ ಭಾಷೆ, ಸಂಸ್ಕೃತಿಯ ಪರಿಚಯ ಅವಶ್ಯ. ಉದಿಪು ಕಾರ್ಯಕ್ರಮದ ಮೂಲಕ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ, ತುಳುನಾಡಿನ ವಿವಿಧ ಮಜಲುಗಳನ್ನು ಉತ್ತಮವಾಗಿ ಬಿಂಬಿಸುವ ಅವಕಾಶ ಕಲ್ಪಿಸಲಾಯಿತು. ಆ ಮೂಲಕ ವಿದ್ಯಾರ್ಥಿ ಜೀವನದಲ್ಲೇ ಭಾಷೆ, ಸಂಸ್ಕೃತಿಯನ್ನು ಉಳಿಸಲು ಪ್ರೇರೇಪಣೆ ಸಿಕ್ಕಿದಂತಾಗಿದೆ. ತುಳು ಭಾಷೆಯ ಬಗ್ಗೆ ಗೌರವವಿರಬೇಕು ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದರು.

ಅವರು ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ರಂಗ ಮಂದಿರದಲ್ಲಿ ಉದಿಪು ೨೦೨೦ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ, ಹಲವು ಸ್ಪರ್ಧೆಗಳಲ್ಲಿ ೨೫ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿರುವುದು ತುಳುನಾಡಿನ ಮೇಲಿನ ಪ್ರೀತಿಯನ್ನು ಸಾಬೀತುಪಡಿಸುತ್ತದೆ. ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸಿ, ಭಾಷೆಯ ಸೊಗಡನ್ನು ಅರಿತುಕೊಳ್ಳುವುದು ಮುಖ್ಯ. ಸಂಸ್ಥೆಯು ಈ ವೇದಿಕೆಯನ್ನು ಒದಗಿಸುವ ಮೂಲಕ ತುಳುನಾಡಿಗೆ ಗೌರವ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಶ್ರೀ ಭಾರತೀ ಸಮೂಹ ಸಂಸ್ಥೆಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಎರಡನೇ ವರ್ಷ ಉದಿಪು ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂಬ ಉದ್ದೇಶವಿದೆ. ಕೇವಲ ಪಠ್ಯ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಯೂ ಮುಖ್ಯ ಎಂಬ ಕಲ್ಪನೆಯಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಮಂಗಳೂರು ಕುಡ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಹಾಸ ರೈ, ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಪ್ರಾಂಶುಪಾಲ ಪ್ರೊ.ಜೀವನ್‌ದಾಸ್, ಕಲಾಭಾರತಿ ಸಂಯೋಜಕ ಪ್ರವೀಣ್ ಪಿ. ಉಪಸ್ಥಿತರಿದ್ದರು. ಇದೇ ಸಂದರ್ಭ ಸುಂದರ ಬೆಳ್ಳಿಪ್ಪಾಡಿ ಮತ್ತು ವಿಜಯ ಶೆಣೈ ಅವರನ್ನು ಗೌರವಿಸಲಾಯಿತು.

ಶ್ರೀ ಭಾರತೀ ಪದವಿ ಕಾಲೇಜಿನ ಉಪನ್ಯಾಸಕ ಅಶೋಕ್ ಎಸ್. ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ನಿರೂಪಿಸಿದರು. ಸಿಬಂದಿ ಜಯರಾಮ ಆಚಾರ್ಯ ವಂದಿಸಿದರು.

Author Details


Srimukha

Leave a Reply

Your email address will not be published. Required fields are marked *