ನಿರಂತರ ಮಠದ ಸಂಪರ್ಕವೇ ಗೋ ಸೇವೆಗೆ ಪ್ರೇರಣೆ: ಜ್ಯೋತಿಲಕ್ಷ್ಮಿ ಅಮೈ

ಮಾತೃತ್ವಮ್

“ಸುಮಾರು ಎರಡು ದಶಕಗಳಿಂದ ಶ್ರೀ ಮಠದ ನಿರಂತರ ಸಂಪರ್ಕವಿದೆ ಮಾತ್ರವಲ್ಲದೆ ಮಹಿಳಾ ಪರಿಷತ್ ಇರುವಾಗಲೇ ವಿವಿಧ ಸೇವಾ ಪ್ರಧಾನೆಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇರುವುದರಿಂದ ಶ್ರೀ ಮಠದ ಗೋ ಸೇವಾ ಯೋಜನೆಯಾದ ಮಾತೃತ್ವಮ್ ಮೂಲಕ ಮಾಸದ ಮಾತೆಯಾಗಿ ಸ್ವಯಂ ಇಚ್ಛೆಯಿಂದ ಸೇರಿದೆ” ಎನ್ನುವ ಜ್ಯೋತಿಲಕ್ಷ್ಮಿ ಅಮೈ ಅವರು ಪ್ರಸ್ತುತ ಮಂಗಳೂರು ಮಂಡಲದ ಮಾತೃ ಪ್ರಧಾನೆಯಾಗಿದ್ದಾರೆ.

ಮುದ್ರಜೆ ಗೋವಿಂದ ಭಟ್, ಪಾರ್ವತಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಕೇಪು ವಲಯದ ಅಡ್ಯನಡ್ಕ ಸಮೀಪದ ಅಮೈ ಯಲ್ಲಿರುವ ಡಾ. ಕೃಷ್ಣಮೂರ್ತಿ ಅವರನ್ನು ವಿವಾಹವಾಗಿ ಈಗ ಬಾಯಾರು ವಲಯದ ಕಾಯರ್ ಕಟ್ಟೆ ಎಂಬಲ್ಲಿ ವಾಸವಾಗಿದ್ದಾರೆ.

ರಾಮಾಯಣ ಮಹಾಸತ್ರ, ಗೋ ಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಇವರಿಗೆ ಸಂಗೀತ, ಪಿಟೀಲು ವಾದನಗಳಲ್ಲಿ ಅತ್ಯಂತ ಆಸಕ್ತಿಯಿದೆ. ವಿವಾಹದ ನಂತರ ಪಿಟೀಲು ಕಲಿತ ಜ್ಯೋತಿಲಕ್ಷ್ಮಿ ಹಲವಾರು ಕಡೆಗಳಲ್ಲಿ ಕಾರ್ಯಕ್ರಮಗಳನ್ನೂ ನೀಡಿದವರು. ಕಾಯರ್ ಕಟ್ಟೆ ಹಾಗೂ ಮೂರ್ಕಜೆ ಗುರುಕುಲಗಳಲ್ಲಿ ಪಿಟೀಲು ತರಗತಿ ನಡೆಸುವ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಹೊಲಿಗೆಯೂ ಇವರ ಇನ್ನೊಂದು ಹವ್ಯಾಸ.

ಮಾಸದ ಮಾತೆಯಾಗಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದ ಇವರಿಗೆ ಒಂದು ಹಸುವಿನ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಸೋದರನೇ ನೀಡಿದ್ದು ಗುರು ಕಾರುಣ್ಯದಿಂದ ಎಂಬ ಭಾವನೆಯಿದೆ. ಆದುದರಿಂದಲೇ ಮತ್ತೊಂದು ಹಸುವಿನ ಜವಾಬ್ದಾರಿ ಪೂರ್ತಿ ತಾವೇ ವಹಿಸಿಕೊಂಡು ಎರಡು ಹಸುಗಳ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಹೊತ್ತು ಇತರ ಮಾಸದ ಮಾತೆಯರಿಗೆ ಮಾದರಿಯಾಗಿದ್ದಾರೆ ಜ್ಯೋತಿಲಕ್ಷ್ಮಿ ಅಮೈ.

ಮಂಗಳೂರು ಮಂಡಲದ ಮಾತೃಪ್ರಧಾನೆಯಾಗಿ ಸೇವೆ ಗೈಯುತ್ತಿರುವ ಜ್ಯೋತಿಲಕ್ಷ್ಮಿ ಅವರು ಈಗ ಸಮಾಜದ ಇತರ ಮಾತೆಯರನ್ನು ಗೋಸೇವೆಯತ್ತ ಪ್ರೇರೇಪಿಸಿ ಮಾಸದ ಮಾತೆಯಾಗಿ ಕರ್ತವ್ಯ ನಿರ್ವಹಿಸುವಂತಹ ಪ್ರೇರೆಪಣಾ ಕಾರ್ಯವನ್ನು ಮಾಡುತ್ತಿದ್ದಾರೆ.

“ಸಮಾಜದಲ್ಲಿ ಹಸು ಸಾಕಣೆಯ ಬಗ್ಗೆ ಉತ್ತಮ ಸ್ಪಂದನೆಯಿದೆ. ಜನರು ಶ್ರೀ ಮಠದ ವಿವಿಧ ಸೇವಾ ಯೋಜನೆಗಳತ್ತ ಆಕರ್ಷಿತರಾಗಿ ಸ್ವಯಂ ಪ್ರೇರಣೆಯಿಂದ ಗೋ ಸಂರಕ್ಷಣಾ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ ಎಂಬುದು ನೆಮ್ಮದಿ ವಿಚಾರ ” ಎನ್ನುವ ಅವರಿಗೆ ಮುಂದಿನ ವರ್ಷವೂ ಎರಡು ಹಸುಗಳ ನಿರ್ವಹಣಾ ವೆಚ್ಚವನ್ನು ವಹಿಸುವ ಬಗ್ಗೆ ಆತ್ಮವಿಶ್ವಾಸವಿದೆ. ಜೊತೆಗೆ ಸಾಕಷ್ಟು ಮಂದಿ ಮಾತೆಯರನ್ನು ಗೋಸೇವೆಗೆ ನಿಯೋಜಿಸಿ ಅವರನ್ನು ಗುರಿ ತಲುಪಿಸ ಬೇಕೆಂಬ ಅಪೇಕ್ಷೆಯಿದೆ.

ತಮ್ಮ ಮಗಳು ಸಹಾ ಗೋ ಮಾತೆಗಾಗಿ ಪ್ರತಿ ತಿಂಗಳು ಒಂದು ಮೊತ್ತವನ್ನು ನೀಡುವಾಗ ಮುಂದಿನ ಜನಾಂಗವೂ ಗೋ ಸೇವೆಗೆ ಸಹಾಯ ಹಸ್ತ ಚಾಚುತ್ತಿದೆ ಎಂಬ ವಿಚಾರದಲ್ಲಿ ನೆಮ್ಮದಿಯಿದೆ ಎನ್ನುತ್ತಾರೆ.
“ಹಿಂದೆ ಮನೆಯಲ್ಲಿ ಹಸು ಸಾಕುತ್ತಿದ್ದೆವು. ಇಂದಿನ ಒತ್ತಡದ ಬದುಕಿನಲ್ಲಿ ಮನೆಯಲ್ಲಿ ಹಸು ಸಾಕಣೆ ಕಷ್ಟವಾಗುವ ಕಾರಣ ಗೋಶಾಲೆಯ ಹಸು ಸಾಕಣೆಗೆ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ನೀಡುತ್ತಿದ್ದೇವೆ . ಬಿಡುವಿನ ವೇಳೆಗಳಲ್ಲಿ ಗೋವುಗಳ ಜೊತೆಗಿನ ಒಡನಾಟ ಮಾನಸಿಕ ಸಂತೃಪ್ತಿ ನೀಡುತ್ತಿದೆ ಎಂಬುದು ಜ್ಯೋತಿಲಕ್ಷ್ಮಿ ಅವರ ಅನುಭವ.

Leave a Reply

Your email address will not be published. Required fields are marked *