ಗೋಮಾತೆಯ ಸೇವೆಯಿಂದ ಸಾರ್ಥಕ ಭಾವ ಮೂಡಿದೆ: ಕಂಜಾಕ್ಷಿ ನಾಗಭೂಷಣ

ಮಾತೃತ್ವಮ್

ಸಾಗರ ಸಮೀಪದ ಹುಕ್ಲು ಮೂಲದವರಾದ ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ಕಂಜಾಕ್ಷಿ ನಾಗಭೂಷಣ ಅವರು ಶ್ರೀಮಠದ ಸೇವೆ, ಗೋಸೇವೆಯಲ್ಲಿ ಸಾರ್ಥಕತೆ ಕಂಡವರು.

“ಶ್ರೀಗುರುಗಳ ಮಾತುಗಳಿಂದ ಪ್ರೇರಣೆಗೊಂಡು ಮಾಸದ ಮಾತೆಯಾದೆ. ಇದರಲ್ಲಿ ವೈವಿಧ್ಯಮಯ ಅನುಭವಗಳನ್ನು ಗಳಿಸಿಕೊಂಡು ಮಾತೃತ್ವಮ್ ಗುರಿಯನ್ನು ತಲುಪಿದೆ. ನನ್ನ ಕೈಲಾದ ಮಟ್ಟಿಗೆ ಗೋಸೇವೆ, ಗುರುಸೇವೆ ಮಾಡಿದ ನೆಮ್ಮದಿ, ಸಂತೃಪ್ತಿ ಮನದಲ್ಲಿದೆ” ಎನ್ನುವ ಇವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು.

ಈ ಅನುಭವವೇ ಅವರಿಗೆ ಮಾತೃತ್ವಮ್ ಗುರಿ ತಲುಪಲು ಸಹಾಯಕವಾಯಿತು. ಸಾವಿರದ ಸುರಭಿ ಸಂಗ್ರಹಕ್ಕಾಗಿ ಹಲವಾರು ಮನೆಗಳಿಗೆ ತೆರಳಬೇಕಾಗಿ ಬಂದಿತ್ತು. ಆದರೆ ವಿಶೇಷವೆಂದರೆ ಮಾತೃತ್ವಮ್ ಗೆ ಅನೇಕ ಜನರು ಮನೆಗೆ ಬಂದು ತಮ್ಮ ಕೈಲಾದ ಸಹಾಯ ಮಾಡಿದ್ದು ದೈವಕೃಪೆ ಎಂಬ ಭಾವ ಇವರದ್ದು.

“ಅನೇಕ ಜನರು ನಮ್ಮ ಮಠದ ಕಾರ್ಯವಿಧಾನದ ಬಗ್ಗೆ ಕೇಳಿ ತಿಳಿದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರೆ ಬೆರಳೆಣಿಕೆಯಷ್ಟು ಮಂದಿ ನಿರುತ್ಸಾಹದ ನುಡಿಗಳನ್ನಾಡಿ ಎದೆಗುಂದಿಸಿದ್ದಾರೆ. ಆದರೆ ಅಂತಹ ಮಾತುಗಳನ್ನು ಕಡೆಗಣಿಸಿ ಆತ್ಮಸ್ಥೈರ್ಯದಿಂದ ಮುಂದೆ ನಡೆದು ಗುರಿ ತಲುಪಿದವಳು ನಾನು” ಎನ್ನುವ ಇವರಿಗೆ ಸಮಾಜದ ಎಲ್ಲಾ ವಿಭಾಗದ ಜನರು ಸಹಕಾರ ನೀಡಿದ್ದಾರೆ ಎಂಬ ಹರ್ಷವಿದೆ.

“ಗೋಸ್ವರ್ಗದ ಬಗ್ಗೆ ಅನೇಕ ಜನರಿಗೆ ವಿಶೇಷ ಕುತೂಹಲವಿದೆ.ಇನ್ನು ಕೆಲವರಿಗೆ ಸಂಗ್ರಹವಾದ ಹಣ ಯಾವ ರೀತಿಯಲ್ಲಿ ವಿನಿಯೋಗವಾಗುತ್ತದೆ ಎಂಬುದರ ವಿವರಗಳನ್ನು ತಿಳಿಯಲು ಆಸಕ್ತಿ. ಅಂಥವರಿಗೆ ಶ್ರೀಮಠದ ಯೋಜನೆಗಳ ಬಗ್ಗೆ, ಹಣ ಸಂಗ್ರಹ, ಅದರ ವಿನಿಯೋಗದ ವಿವರಗಳನ್ನೆಲ್ಲ ಸರಿಯಾಗಿ ಮನವರಿಕೆ ಮಾಡಿಸಿದಾಗ ಅವರು ಸಂತಸದಿಂದಲೇ ನಮ್ಮ ಕಾರ್ಯಕ್ಕೆ ಕೈ ಜೋಡಿಸುತ್ತಾರೆ.ಯಾರಲ್ಲೂ ಇಂತಿಷ್ಟೇ ಹಣ ನೀಡಿ ಎಂದು ಒತ್ತಾಯಿಸಿಲ್ಲ. ಸಂಕೋಚ ಪಟ್ಟುಕೊಳ್ಳದೆ ಗೋಸೇವೆಗಾಗಿ ಎಂದು ಕಂಡವರಲ್ಲೆಲ್ಲ ಕೇಳಿದೆ” ಎನ್ನುವ ಕಂಜಾಕ್ಷಿಯವರ ಸೇವಾ ಕಾರ್ಯದಲ್ಲಿ ಮನೆಯವರ ಸಂಪೂರ್ಣ ಬೆಂಬಲವಿದೆ.

ತೃಪ್ತಿ ಮತ್ತು ಕಾರ್ಯತತ್ಪರತೆಯಿಂದ ಸೇವೆಗೈಯುವ ಇವರಿಗೆ ಅಭಯಾಕ್ಷರ ಅಭಿಯಾನ ಹಾಲುಹಬ್ಬಗಳಲ್ಲಿ ಭಾಗವಹಿಸಿದ ಅನುಭವವೂ ಇದೆ. ಬೆಂಗಳೂರು ನಗರದಲ್ಲಿ ಇರುವುದರಿಂದ ಗಿರಿನಗರ ರಾಮಾಶ್ರಮಕ್ಕೂ ಬಿಡುವಿನ ವೇಳೆಗಳಲ್ಲಿ ಭೇಟಿ ನೀಡುವ ಇವರಿಗೆ ತಮಗೆ ಸಾಧ್ಯವಿರುವಷ್ಟು ಕಾಲ,ಸಾಧ್ಯವಾದ ರೀತಿಯಲ್ಲಿ ಗೋಸೇವೆ, ಶ್ರೀಮಠದ ಸೇವೆ ಮಾಡುವ ಹಂಬಲವಿದೆ.

Author Details


Srimukha

Leave a Reply

Your email address will not be published. Required fields are marked *