ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ~ ಸಂಚಿಕೆ – ೬

ಅರಿವು-ಹರಿವು
ಮಹಾತೇಜಸ್ವಿ ಬಾಲಕ, ಯಮುನಾ ನದಿಯ ದ್ವೀಪದಲ್ಲಿ ಜನಿಸಿ ಹುಟ್ಟಿದೊಡನೆಯೇ ತಾಯಿಗೆ ಸಾಷ್ಟಾಂಗ ಪ್ರಣಾಮ ಮಾಡಿ ತಾಯಿಯ ಅನುಜ್ಞೆಯನ್ನು ಪಡೆದು ಸ್ಮರಿಸಿದಾಗ ಬರುವೆನೆಂದು ಆ ತಾಯಿಗೆ ಹೇಳಿ ತಪಸ್ಸನ್ನಾಚರಿಸಲು ನಡೆದ ಬಾಲಕ. ಅವನೇ ಮುಂದೆ ಲೋಕಪ್ರಸಿದ್ಧನಾದ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನ.
ಅವಿಚ್ಛಿನ್ನ ಗುರುಪರಂಪರೆಯ ಅರಿವಿನ ಹರಿವು ಪರಾಶರರ ನಂತರ ಹೀಗೆ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನರ ರೂಪದಿಂದ ಮುಂದುವರೆಯಿತು.
ಬ್ರಹ್ಮರ್ಷಿ ಪರಾಶರ ಮತ್ತು ಸತ್ಯವತಿಯ ಸಮಾಗಮದಿಂದ ನದಿಯ ಮಧ್ಯದ ದ್ವೀಪದಲ್ಲಿ ಹುಟ್ಟಿದ್ದರಿಂದ ಶ್ರೀಕೃಷ್ಣದ್ವೈಪಾಯನರಿಗೆ ಅನ್ವರ್ಥವಾಗಿ ದ್ವೈಪಾಯನನೆಂದು ಮತ್ತು ಕಪ್ಪು ಬಣ್ಣ ಹೊಂದಿದ್ದರಿಂದ ಕೃಷ್ಣ ವಿಶೇಷಣವು ಸೇರಿ ಶ್ರೀಕೃಷ್ಣದ್ವೈಪಾಯನನೆಂಬ ಹೆಸರು ಬಂದಿತು.   (” न्यस्तो द्वीपे स यद्बालस्तस्माद्वैपायनः स्मृतः।” )   ನಾಲ್ಕು ಪಾದಗಳುಳ್ಳ ಧರ್ಮವು ಒಂದೊಂದು ಯುಗಕ್ಕೂ ಒಂದೊಂದು ಪಾದವನ್ನು ಕಳೆದುಕೊಳ್ಳುತ್ತಿರುವುದನ್ನು, ಮನುಷ್ಯರ  ಆಯುಷ್ಯವನ್ನು ಮತ್ತು ಅವರ ಶಕ್ತಿಯನ್ನು, ಯುಗದವೈಪರೀತ್ಯವನ್ನೂ ದಿವ್ಯವಾದ ಅಂತಶ್ಚಕ್ಷುವಿನಿಂದ ನೋಡಿದ ಕೃಷ್ಣದ್ವೈಪಾಯನರು ಸರ್ವಸಕಲಕ್ಕೂ ಒಳ್ಳೆಯದನ್ನು ಮಾಡುವ ಆಕಾಂಕ್ಷೆಯಿಂದ ಅಖಂಡವಾದ ವೇದವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದರು. ಇದರಿಂದ ವೇದವ್ಯಾಸರೆಂದೇ ಪ್ರಸಿದ್ಧಿಗೊಂಡರು. ( “विव्यास वेदान्यस्मात्स तस्माद्व्यास इति स्मृतः”। ) ಜೀವನದ ಪರಮೋದ್ದೇಶವಾದ ಚತುರ್ವಿಧ ಪುರುಷಾರ್ಥಗಳನ್ನೂ ದ್ವಾಪರದಲ್ಲಿ ನಡೆದ ನೈಜ ಘಟನೆಗಳಿಗೆ ಪಾತ್ರವಾದ ಪಾತ್ರಗಳ ಮೂಲಕ ಸ್ಪಷ್ಟವಾಗಿ ನಿರೂಪಿಸಿ ಶ್ರೇಷ್ಠ ಜೀವನವೆಂದರೇನು ಅದು ಹೇಗಿರುತ್ತದೆ ಎನ್ನುವುದಕ್ಕೆ ಪ್ರಮಾಣೀಭೂತವಾಗಿ ಇದನ್ನು ಪ್ರತಿ ವ್ಯಕ್ತಿಯೂ ಅರಿಯುವಂತೆ, ಹಾಗೆಯೇ ಜೀವನ ರೂಪಿಸಿಕೊಳ್ಳಲು ಮಾದರಿಯಾಗುವಂತೆ ಮಹತ್ತರವಾಗಿ ಕಾವ್ಯ ರೂಪದಲ್ಲಿ ರಚಿಸಿಕೊಟ್ಟರು. ಆ ಮಹಾಕಾವ್ಯದ ರಚನೆಗೆ ಲಿಪಿಕಾರನಾಗಿ ಸಾಕ್ಷಾತ್ ಮಹಾಗಣಪತಿಯೇ ಬಂದು ಮಹಾಭಾರತ ಕಾವ್ಯ ಸೃಷ್ಟಿಯಾಯಿತು. “यदिहास्ति तदन्यत्र यन्नेहास्ति न तत् क्वचित् “। ಎಂದೆನಿಸಿದ ಈ ಕಾವ್ಯವು ಪಂಚಮವೇದವೆಂದೇ ಪರಿಗಣಿಸಲ್ಪಟ್ಟಿತು. ಇಂತಹ ಮಹಾಭಾರತದ ರಚನೆಯ ಪೂರ್ವ ವೃತ್ತಾಂತ ಇಂತಿದೆ.
ಶಿವಪುತ್ರ ಮಹಾಗಣಪತಿ ಲಿಪಿಕಾರನಾಗುವುದಕ್ಕೆ ಒಪ್ಪಿದ. ಆದರೆ ಜೊತೆಯಲ್ಲೊಂದು ಶರತ್ತನ್ನು ಹೇರಿದ್ದ. ನಾನು ಬರೆಯುವಾಗ ಮಧ್ಯವೆಲ್ಲೂ ಬಿಡುವಿಲ್ಲದೇ ಸತತವಾಗಿ ಶ್ಲೋಕಗಳನ್ನು ಹೇಳಬೇಕು ತಡವಾದರೆ ಮಧ್ಯದಲ್ಲಿಯೇ ಬರೆಯುವುದನ್ನು ನಿಲ್ಲಿಸಿಬಿಡುವೆನೆಂದು. ಇದಕ್ಕೆ ಪ್ರತಿಯಾಗಿ ಬಹುಚಾತುರ್ಯದಿಂದ ವೇದವ್ಯಾಸರು ಸಹ ಒಂದು ನಿಬಂಧನೆಯನ್ನು ಹಾಕಿದ್ದರು. ತಮ್ಮ ಶ್ಲೋಕ ರಚನೆಯನ್ನು ಸಂಪೂರ್ಣ ಅರ್ಥೈಸಿಕೊಂಡೇ ಬರೆಯಬೇಕೆಂದು. ಮಹಾಗಣಪತಿಯ ಬರವಣಿಗೆಯ ವೇಗ ಹೆಚ್ಚಿದಾಗ ತಮ್ಮ ಕ್ಲಿಷ್ಟ ರಚನೆಗಳನ್ನು ಪ್ರಯೋಗಿಸಿ ಆ ಮಹಾದೇವನ ಬರವಣಿಗೆಯ ವೇಗವನ್ನು ಕ್ಷೀಣಗೊಳಿಸಿ ತಮ್ಮ ಮುಂದಿನ ಶ್ಲೋಕಗಳ ರಚನೆಗೆ ಸಮಯ ಸಾಧಿಸಿಕೊಂಡು ಅದ್ಭುತವಾಗಿ ಮಹಾಕಾವ್ಯ ಮಹಾಭಾರತದ ರಚನೆಯನ್ನು ಪೂರ್ಣಗೊಳಿಸಿದ್ದರು. ವೇದವ್ಯಾಸರು ಮಹಾಭಾರತಕಾರರು ಮಾತ್ರವಲ್ಲದೆ ಮಹಾಭಾರತದ ಒಂದು ಪಾತ್ರವೂ ಆಗಿದ್ದಾರೆ. ಆದುದರಿಂದ ಮ‌ಹಾಭಾರತವು ಸ್ವಲ್ಪಮಟ್ಟಿಗೆ ವ್ಯಾಸರ ಆತ್ಮಕಥೆಯೂ ಆಗಿದೆ. ಆತ್ಮಕಥೆಯನ್ನು ಬರೆಯುವವನಿಗೆ ಇರಬೇಕಾದ ಸತ್ಯಪ್ರಿಯತೆ ನಿರ್ಭಯತೆ ಇವರಲ್ಲಿ ಎದ್ದುಕಾಣುತ್ತದೆ. ತನ್ನನ್ನು ದಾಶಕನ್ಯೆಯ ಪುತ್ರ ಎಂಬುದಾಗಿಯೇ ಅವರು ಹೇಳಿಕೊಂಡಿದ್ದಾರೆ. ಬ್ರಹ್ಮಜ್ಞಾನಿಗಳಾದ ಭಗವದವತಾರಪುರುಷರೂ ಆದ ಈ ಮಹಾನುಭಾವರಿಗೆ ಯಾವ ಪಾಪಲೇಪವೂ ಇಲ್ಲ. ಸತ್ಯವನ್ನು ಮರೆಮಾಚದೆ ಹೇಳುವ ಇವರ ಧೈರ್ಯ ಎಲ್ಲರಿಗೂ ಆದರ್ಶವಾದುದು.
ವೇದವ್ಯಾಸರು  ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿದ್ದು ಆಗಾಗ್ಗೆ ಭಕ್ತರಿಗೆ ದರ್ಶನವಿತ್ತು  ವರಗಳನ್ನು ಕರುಣಿಸುವ ಮಹಾತ್ಮರಲ್ಲಿ ಪರಿಗಣಿತರಾಗಿದ್ದಾರೆ. “मुनिनां अप्यहं व्यासः” ಎಂದು ಗೀತಾಚಾರ್ಯನಾದ ಶ್ರೀಕೃಷ್ಣಪರಮಾತ್ಮನೇ ಘೋಷಿಸಿದ್ದಾನೆ. ಲೋಕಕ್ಕೆ ಜ್ಞಾನಪ್ರಕಾಶವನ್ನು ನೀಡಲು ನಾರಾಯಣನ ಆಜ್ಞೆಯಂತೆ ಕಲಿದ್ವಾಪರ ಸಂಧಿಯಲ್ಲಿ ಅವತರಿಸಿದ “ಅಪರಂತಮಾಃ” ಎಂಬ ಬ್ರಹ್ಮರ್ಷಿಯೇ ಅಥವಾ ಸಾಕ್ಷಾನ್ನಾರಾಯಣನ ರೂಪವೇ ಇವರೆಂದು ಸ್ತುತಿಸಲ್ಪಟ್ಟಿರುವ ಅವತಾರಪುರುಷರೆಂದು  ಶಂಕರರ ಬ್ರಹ್ಮಸೂತ್ರದಲ್ಲಿ ಉಲ್ಲೇಖವಿದೆ. ಇಂತಹ ವ್ಯಾಸರ ಮಹಾಭಾರತದಲ್ಲಿನ ಪಾತ್ರವನ್ನು ಮತ್ತು ಅವರ ಇನ್ನೂ ಹಿರಿಮೆ ಗರಿಮೆಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ ಎನ್ನುತ್ತಾ ಅವರಿಗೆ ಪ್ರಣಾಮಗಳನ್ನು ಅರ್ಪಿಸೋಣ. ” व्यासाय विष्णुरूपाय व्यासरूपाय विष्णवे। नमो वै ब्रह्मनिधये वासिष्ठाय नमो नमः।।”

Author Details


Srimukha

Leave a Reply

Your email address will not be published. Required fields are marked *