ಸಮರ್ಥ್ ರಾವ್ ಎಂಬ ಚೆಸ್ ರಂಗದ ಅದ್ಭುತ!

ಅಂಕುರ

ಹುಟ್ಟುವ ಸಂದsದಲ್ಲೇ ಸೆಲೆಬ್ರಲ್ ಪಾಲ್ಸಿ ಎಂಬ ಅಂಗವೈಕಲ್ಯತೆಗೆ ತುತ್ತಾದ ಪರಿಣಾಮ ಸ್ವತಂತ್ರವಾಗಿ ನಿಲ್ಲಲು ಅಥವಾ ನಡೆಯಲು ಸಾಧ್ಯವಿಲ್ಲ. ದೇಹದ ಸಮತೋಲನ ಇಲ್ಲದ ಇವರಿಗೆ ೭೫% ಕ್ಕಿಂತಲೂ ಅಧಿಕ ಅಂಗವೈಕಲ್ಯತೆ ಆವರಿಸಿದೆ. ದೈನಂದಿನ ಚಟುವಟಿಕೆ ನಡೆಸಲು ಕೂಡ ಬೇರೆಯವರನ್ನು ಅವಲಂಬಿಸಿದ್ದಾರೆ. ಆದರೆ ಈ ಎಲ್ಲದರ ನಡುವೆಯೂ ತನ್ನ ಅವಿರತ ಪರಿಶ್ರಮದಿಂದ ಇಂದು ಚದುರಂಗ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.
ಅಂದಹಾಗೆ ಇವರ ಹೆಸರು ಸಮರ್ಥ್ ಜೆ. ರಾವ್. ಮೂಲತಃ ಕುಂದಾಪುರದ ಬಸ್ರೂರಿನ ಸದ್ಯ ಹೊನ್ನಾವರದಲ್ಲಿ ನೆಲೆಸಿರುವ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ್ ರಾವ್ ಬಿ.ಎಸ್ ಹಾಗೂ ವಿನುತಾ ಭಟ್ ದಂಪತಿ ಪುತ್ರ. ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಅಧ್ಯಯನ ನಡೆಸುತ್ತಿರುವ ಈತ ಈಗಾಗಲೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾನೆ.
ಅಪರಿಮಿತ ಜ್ಞಾಪಕ ಶಕ್ತಿ:
ಸಮರ್ಥ್ ಅವರಿಗೆ ನಾಲ್ಕು ವರ್ಷ ತುಂಬುತ್ತಿದ್ದಂತೆ ಪಾಲಕರು ಅಂಗನವಾಡಿ (ಇಂಗ್ಲಿಷ್ ಮೀಡಿಯಂನ ಎಲ್‌ಕೆಜಿ) ಗೆ ಸೇರಿಸಿದರು. ಇಲ್ಲಿ ಈತನಿಗೆ ಬರೆಯಲು ಕಷ್ಟವಾಯಿತು. ಆದರೆ ಇವರ ಜ್ಞಾಪಕ ಶಕ್ತಿ ಉತ್ತಮವಾಗಿತ್ತು. ಇದೇ ಸಂದರ್ಭದಲ್ಲಿ ತಮ್ಮ ಸ್ಮರಣ ಶಕ್ತಿಯ ಪ್ರತಿಭೆಯನ್ನು ತೋರ್ಪಡಿಸಿದರು. ಕ್ಯಾಲೆಂಡರ್‌ನಲ್ಲಿನ ೧೨ ತಿಂಗಳುಗಳ ದಿನಾಂಕ, ದಿನ, ರಜಾದಿನಗಳನ್ನು ಗಮನಿಸಿದ ಬಳಿಕ ಯಾವುದೇ ದಿನಾಂಕವನ್ನು ಕೇಳಿದರೆ ವಾರವನ್ನು ಹೇಳುವ ಚಾಕಚಕ್ಯತೆಯನ್ನೂ ಹೊಂದಿದ್ದಾರೆ!
ಮಗನ ಪ್ರತಿಭೆಯನ್ನು ಗುರುತಿಸಿದ ತಾಯಿ:
೬ನೇ ವಯಸ್ಸಿಗೆ ಬಂದ ನಂತರ ಹೊನ್ನಾವರದ ಪ್ರಭಾತನಗರದ ಸರ್ಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲೆಗೆ ೧ನೇ ತರಗತಿಗೆ ಸೇರಿದರು. ಹೀಗೆ ಕಲಿಯುತ್ತಿರುವ ಸಂದರ್ಭದಲ್ಲಿ ೭ನೇ ತರಗತಿಯಲ್ಲಿದ್ದಾಗ ಒಮ್ಮೆ ಈತನ ತಾಯಿ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ತನ್ನ ಸ್ನೇಹಿತರು ಮೈದಾನದಲ್ಲಿ ಆಡುತ್ತಿರುವುದನ್ನು ಬಾಗಿಲಿನ ಎದುರು ನಿಂತು ವೀಕ್ಷಿಸುತ್ತಿರುವ ದೃಶ್ಯವನ್ನು ತಾಯಿ ವಿನುತಾ ಭಟ್ ಗಮನಿಸಿದರು. ಅದೇ ದಿನ ತನ್ನ ಮಗ ಯಾಕೆ ಚೆಸ್, ಕ್ಯಾರಮ್‌ನಂತಹ ಒಳಾಂಗಣ ಆಟದಲ್ಲಿ ತೊಡಗಿಸಿಕೊಳ್ಳಬಾರದು ಎಂದು ಯೋಚಿಸಿದರು. ಅಷ್ಟೇ ಅಲ್ಲ ಅಂದೇ ಕಾರ್ಯಪ್ರವೃತ್ತರಾದರು. ಕ್ಯಾರಮ್ ಮತ್ತು ಚೆಸ್ ಎರಡನ್ನೂ ಮುಂದಿಟ್ಟಾಗ ಸಮರ್ಥ್ ಆಯ್ಕೆ ಮಾಡಿಕೊಂಡಿದ್ದು ಚೆಸ್!
ಬಳಿಕ ಸಮರ್ಥ್ ಎಸ್‌ಜಿಎಫ್‌ಐನ ಕ್ಲಸ್ಟರ್ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದರು. ದುರದೃಷ್ಟವಶಾತ್ ಇಲ್ಲಿ ಸೋಲುಂಡರು. ಆದರೆ ‘ಸೋಲೇ ಗೆಲುವಿನ ಸೋಪಾನ ಎಂದು ತಿಳಿದುಕೊಂಡು ಎದೆಗುಂದದೆ ಮುನ್ನುಗ್ಗಿದರು. ಚೆಸ್‌ನಲ್ಲಿನ ಆತನ ಆಸಕ್ತಿಯನ್ನು ಗಮನಿಸಿ ಪೋಷಕರು ಎಸ್‌ಡಿಎಂ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ದಿ. ವಿ.ಆರ್.ಶಾಸ್ತ್ರಿ ಅವರಿಂದ ಮಾರ್ಗದರ್ಶನ ಕೊಡಿಸಿದರು. ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ಪಡೆದರು. ಬಳಿಕ ವಿ.ಕೆ.ಕಾಮತ್, ಪ್ರಸಾದ್ ಹೆಗಡೆ, ವಿನಯ್‌ಕುಮಾರ್ ಹಿರೇಮಠ ಮುಂತಾದವರಲ್ಲಿ ಚದುರಂಗದ ಕುರಿತು ಹೆಚ್ಚಿನ ಅಧ್ಯಯನ ನಡೆಸಿದ್ದಾರೆ.
ಬೆಂಗಳೂರಿನ ಸಿಲಿಕಾನ್ ನಗರದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದಾಗ ಇವರಿಗೆ ಮಧುರೈನ ಚೆಸ್ ತರಬೇತುದಾರ ಜ್ಯೊತಿಪ್ರಕಾಸಂ ಅವರು ಮಾರ್ಗದರ್ಶಕರಾಗಿ ದೊರೆತರು. ಅಲ್ಲದೇ ಶ್ರೀನಿಧಿ ಶ್ರೀಪತಿ, ಆರ್.ನಾರಾಯಣ, ಸ್ವರಾಜ್ ಪಾಲಿತ್, ಶಶಿಕಾಮತ್ ಕುಟ್ವಾಲ್ ಅವರ ಬಳಿಯೂ ಕಠಿಣ ಅಭ್ಯಾಸ ನಡೆಸಿದ್ದಾರೆ ಸಮರ್ಥ್.


ವಿಶ್ವಮಟ್ಟದಲ್ಲಿ ಸಾಧನೆ:
೨೦೧೭ರಲ್ಲಿ ಸ್ಲೋವಾಕಿಯಾ ಆಯೋಜಿಸಿದ್ದ ಒಎಂಡಿ ಡಿಸ್ಟ್ರೋ ಒಪೆ-ನೆಟ್ ವಿಶ್ವಮಟ್ಟದ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ೨೦೧೮ರಲ್ಲಿ ಸ್ಲೋವಾಕಿಯಾ ಆಯೋಜಿಸಿದ್ದ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಇತರ ಇಬ್ಬರು ಅಂಗವಿಕಲರೊಂದಿಗೆ ಭಾಗವಹಿಸಿ ಪಂದ್ಯಾವಳಿಯ ಚಾಂಪಿಯನ್ ಆಗಿದ್ದಲ್ಲದೇ ಭಾರತೀಯ ತಂಡ ಪ್ರಥಮ ಬಹುಮಾನ ಪಡೆಯಿತು. ಈವರೆಗೆ ಸಮರ್ಥ್ ೮೦ಕ್ಕೂ ಅಧಿಕ ಚೆಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ೩೦ ತಾಲೂಕು, ಜಿಲ್ಲಾ ಮತ್ತು ಅಂತರಜಿಲ್ಲಾ ಮಟ್ಟ, ೨೬ ರಾಜ್ಯಮಟ್ಟ, ೮ ರಾಷ್ಟ್ರೀಯ ಮಟ್ಟ, ೨ ಅಂತರಾಷ್ಟ್ರೀಯ ಮಟ್ಟ, ೪ ಐಪಿಸಿಎ ವಿಶ್ವ ಚೆಸ್, ಯುಎಸ್‌ಎಯಲ್ಲಿ ನಡೆದ ಅಂಗವಿಕಲರಿಗಾಗಿ ಚಾಂಪಿಯನ್‌ಶಿಪ್ ಮತ್ತು ೧ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ.


ಹುದ್ದೆಯ ಭಡ್ತಿಯನ್ನು ತ್ಯಜಿಸಿದ ತಂದೆ:
ವೃತ್ತಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ತಂದೆ ಜಗದೀಶರಾವ್ ಬಿ.ಎಸ್. ಮಗನ ಸಾಧನೆಯ ಹಿಂದೆ ಪೂರ್ಣ ತ್ಯಾಗ ಮಾಡಿದ್ದಾರೆ. ತನ್ನ ಮಗನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಬ್ಯಾಂಕಿನಲ್ಲಿ ಉನ್ನತ ಹುದ್ದೆಗೆ ಭಡ್ತಿ ದೊರೆತರೂ ಭಡ್ತಿ ಪಡೆಯದೆ ಮಗನಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿ ಕೊಡಿಸುತ್ತಾ ಹಲವಾರು ಪಂದ್ಯಾವಳಿಗಳಿಗೆ ತಾವೇ ಸ್ವತಃ ಕರೆದೊಯ್ಯುತ್ತಿದ್ದಾರೆ.

ಸಾಧನೆಗೆ ಸಂದಿತು ನೂರಾರು ಪ್ರಶಸ್ತಿಗಳು:

-ಶ್ರೀರಾಮಚಂದ್ರಾಪುರ ಮಠದ ಛಾತ್ರ ಚಾತುರ್ಮಾಸ್ಯದಲ್ಲಿ ಛಾತ್ರ ಪುರಸ್ಕಾರ

– ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಂದರ್ಭದಲ್ಲಿ ಎರಡು ಬಾರಿ ಪ.ಪೂ.ಶ್ರೀ.ಶ್ರೀ. ರಾಘವೇಶ್ವರಭಾರತೀ ಮಹಾಸ್ವಾಮಿಗಳಿಂದ ಪ್ರತಿಭಾ ಪುರಸ್ಕಾರ ದೊರೆತಿದೆ.

ಅಮೆರಿಕಾದ ಫ್ಲೋರಿಡಾದಲ್ಲಿ ಅಂಗವಿಕಲರಿಗಾಗಿ ನಡೆದ ೧ನೇ ಈIಆಇ ವರ್ಲ್ಡ್ ಜೂನಿಯರ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಾಗಿ ಕ್ಯಾಂಡಿಡೇಟ್ ಮಾಸ್ಟರ್ ಪ್ರಶಸ್ತಿ.
ಅರೆನಾ ಆನ್‌ಲೈನ್ ಚೆಸ್‌ನಲ್ಲಿ ಅರೆನಾ ಇಂಟರ್‌ನ್ಯಾಶನಲ್ ಪ್ರಶಸ್ತಿ.
ಬಂಗಾರಮಕ್ಕಿಯ ಮಲೆನಾಡ ಉತ್ಸವದಲ್ಲಿ ವೀರಾಂಜನೇಯ ಜಾಸಪದಶ್ರೀ ಪ್ರಶಸ್ತಿ.
ಬೆಂಗಳೂರಿನ ವಿಶ್ವಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ.
ಸೋಮೇಶ್ವರ ಚಾರಿಟೇಬಲ್ ಟ್ರಸ್ಟ್ ಶಿರಸಿಯಿಂದ ‘ಕರ್ನಾಟಕ ಸಿಸ್ಟರ್ ಆಫ್ ಸೋಷಿಯಲ್ ಸರ್ವೀಸಸ್ ಬಿರುದು.
೨೦೧೫ರಲ್ಲಿ ತಿರುಚ್ಚಿಯಲ್ಲಿ ನಡೆದ ೧ನೇ ದೈಹಿಕ ಅಂಗವಿಕಲ ರಾಷ್ಟ್ರೀಯ ವೈಯಕ್ತಿಕ ಚೆಸ್ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ.
೧೫ನೇ ಐಪಿಸಿಎ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ೨೦೧೫ರ ಜೂನ್‌ನಲ್ಲಿ ಸ್ಲೊವಾಕಿಯಾದ ಬ್ರಾಟಿಸ್ಲಾವಾದಲ್ಲಿ ನಡೆದ ಜೂನಿಯರ್ ಬಾಲಕರ ವಿಭಾಗದಲ್ಲಿ ಕಂಚಿನ ಪದಕ.
ಫೆಬ್ರವರಿ ೨೦೧೯ರಲ್ಲಿ ಬೆಲ್ಜಿಯಂನಲ್ಲಿ ೧೫೦೦ ರೇಟಿಂಗ್ ಓಪನ್ ಚೆಸ್ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್….. ಮುಂತಾದ ನೂರಾರು ಪ್ರಶಸ್ತಿ, ಪದಕ ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ.
ವಿಶ್ವನಾಥನ್ ಆನಂದ್ ಜೊತೆ ಆಡುವಾಸೆ:
ಐದು ಬಾರಿ ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ ಆನಂದ ಅವರು ನನಗೆ ಆದರ್ಶ. ಒಂದು ದಿನ ಅವರ ಜೊತೆ ಆಡುವುದಲ್ಲದೇ ಅವರಂತೆಯೇ ಆಗಬೇಕೆಂಬ ಆಸೆ ಇದೆ ಎನ್ನುತ್ತಾರೆ ಸಮರ್ಥ್.

Leave a Reply

Your email address will not be published. Required fields are marked *