ಈತನ ವಯಸ್ಸು ೧೯. ಆದರೆ ಈತನ ಸಾಧನೆ ಮಾತ್ರ ನೂರೆಂಟು. ಹೆಸರು ಸ್ವಸ್ತಿಕ ಪದ್ಮ. ದಕ್ಷಿಣ ಕನ್ನಡದ ಬಂಟ್ವಾಳದ ಮುರ್ಗಜೆಯ ಶ್ರೀರಾಮ ಭಟ್ ಎಂ. ಮತ್ತು ಮಲ್ಲಿಕಾ ದಂಪತಿಯ ಪುತ್ರನಾದ ಈ ಪೋರ ಇಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಬಾಲ್ಯದ ದಿನಗಳಿಂದಲೂ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಆರಂಭಿಸಿದ ಸ್ವಸ್ತಿಕ್ ಪದ್ಮ ಸ್ಥಳೀಯ ಮಟ್ಟದಿಂದ ಆರಂಭಿಸಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆಯ ಶಿಖರ ಏರುತ್ತಿದ್ದಾನೆ. ಇದು ಸ್ವಸ್ತಿಕ್‌ನ ವಿಜ್ಞಾನ ಯಾನದ ಪರಿಚಯ.
ಸ್ವಸ್ತಿಕ್ ಪದ್ಮನ ಸಾಧನೆಯ ಹಾದಿ:
ಬಾಲ್ಯದಿಂದಲೂ ವಿಜ್ಞಾನ ವಿಷಯದಲ್ಲಿ ಪ್ರಯೋಗಗಳನ್ನು ಮಾಡುತ್ತಾ ಬಂದ ಸ್ವಸ್ತಿಕ್‌ನಿಗೆ ಪ್ರಾರಂಭದಿಂದಲೂ ಪ್ಲಾಸ್ಟಿಕ್ ತ್ಯಾಜ್ಯದಿಂದ ಏನಾದರೂ ಸಂಶೋಧಿಸಬೇಕೆಂಬ ಆಸೆ. ಎಸ್ಸೆಸ್ಸೆಲ್ಸಿ ಅಧ್ಯಯನ ಮಾಡುತ್ತಿರುವ ಸಮಯದಲ್ಲಿ ಒಮ್ಮೆ ಪ್ಲಾಸ್ಟಿಕ್‌ಗೆ ಬೆಂಕಿ ತಗುಲಿಸಿದ. ನಂತರ ಬೆಂಕಿಯನ್ನು ನಂದಿಸಲು ಮರಳನ್ನು ಸುರಿದ. ಮರಳು ಅಂಟಿದ್ದ ಪ್ಲಾಸ್ಟಿಕ್ ಬಹಳ ಗಟ್ಟಿಯಾಗಿತ್ತು. ಮುಂದಿನ ದಿನಗಳಲ್ಲಿ ಇದರ ಕುರಿತು ಮತ್ತಷ್ಟು ಸಂಶೋಧನೆ ನಡೆಸಿದ. ಅದರ ಫಲವಾಗಿಯೇ, ಮರುಬಳಕೆಯಾಗದ ಪ್ಲಾಸ್ಟಿಕ್ ಹಾಗೂ ಕಬ್ಬಿಣದ ಅದಿರಿನ ವೇಸ್ ಬಳಸಿ ‘ಪ್ಲಾಮ’ ಕಂಡುಹಿಡಿದಿದ್ದಾನೆ. ಇದು ಕಬ್ಬಿಣಕ್ಕಿಂತಲೂ ಬಲಶಾಲಿ. ಈ ಪ್ಲಾಮಾದಿಂದ ಬಹುಮಹಡಿ ಕಟ್ಟಡಗಳನ್ನೂ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾಗಿದೆ. ಅಲ್ಲದೇ ೨೦೧೮ ರಲ್ಲಿ ಮತ್ತೊಬ್ಬ ಯುವ ವಿಜ್ಞಾನಿ ಸುಹೇಲ್ ಜೊತೆಗೂಡಿ ಮಕ್ಕಳ ಅಪೌಷ್ಟಿಕತೆ ಮತ್ತು ಕ್ಯಾನ್ಸರ್ ಕಣಗಳ ಪತ್ತೆ ಮಾಡುವ ‘ಪ್ರೊಟೀನ್ ಎಕ್ಸ್’ ಎಂಬ ಪೇಪರ್ ಸ್ಲಿಪ್ ಕೂಡ ಅನ್ವೇಷಿಸಿದ್ದಾರೆ.
ಮೈನರ್ ಪ್ಲಾನೆಟ್‌ಗೆ ಸ್ವಸ್ತಿಕ್ ಪದ್ಮ ಹೆಸರು:
ಅಂತರಾಷ್ಟ್ರೀಯ ಮಟ್ಟದ ಇಂಟರ್‌ನ್ಯಾಶನಲ್ ಸೈನ್ ಆಂಡ್ ಎಂಜಿನಿಯರಿಂಗ್ ಫೇರ್-೨೦೧೮ (ಐಎಸ್‌ಇಎಫ್-೨೦೧೮) ನಲ್ಲಿನ ಸಾಧನೆಯನ್ನು ಪರಿಗಣಿಸಿ ಪುಟ್ಟ ಗ್ರಹ(ಮೈನರ್ ಪ್ಲಾನೆಟ್) ವೊಂದಕ್ಕೆ ಸ್ವಸ್ತಿಕ್ ಪದ್ಮ ಹೆಸರನ್ನು ನಾಮಕರಣ ಮಾಡಲಾಗಿದೆ. ಮೆಚಾಸ್ಯೂಸೆಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲಿಂಕನ್ ಲ್ಯಾಬೋಲೇಟರಿ ಆಂಡ್ ಇಂಟರ್‌ನ್ಯಾಶನಲ್ ಆಸ್ಟ್ರೋನಾಮಿಕಲ್ ಈ ಗೌರವ ಪ್ರದಾನ ಮಾಡಿದೆ.
ಸಾಧನೆಗೆ ಸಂದಿತು ಹಲವಾರು ಪ್ರಶಸ್ತಿಗಳು:
ಪುತ್ತೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವಸ್ತಿಕ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರತಿಷ್ಟಿತ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.
೨೦೧೬ ರಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಸೈನ್ಸ್ ಕಾಂಗ್ರೆಸ್ ವತಿಯಿಂದ ‘ಯುವ ವಿಜ್ಞಾನಿ ಪ್ರಶಸ್ತಿ.’
ಇಂಡಿಯನ್ ನ್ಯಾಶನಲ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಫೆರ್-೨೦೧೭ ರಲ್ಲಿ ‘ಗ್ರ್ಯಾಂಡ್ ಅವಾರ್ಡ್’.
ಯುಎಸ್‌ಎಯ ಲಾಸ್ ಏಂಜಲ್ಸ್‌ನಲ್ಲಿ ೨೦೧೭ ರಂದು ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರ.
ಯುಎಸ್‌ಎಯ ಪಿಟ್ಸ್‌ಬರ್ಗ್‌ನಲ್ಲಿ ನಡೆದ ಅಂತರಾಷ್ಟ್ರೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಮ್ಮೇಳನದಲ್ಲಿ ಎರಡನೇ ಬಾರಿಗೆ ವಿಶೇಷ ಪುರಸ್ಕಾರ.
ವಿಜ್ಞಾನದಲ್ಲಿನ ಸಾಧನೆ ಪರಿಗಣಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ರಾಷ್ಟ್ರೀಯ ಬಾಲ ಪುರಸ್ಕಾರ.
ಅಹಮ್ಮದಾಬಾದ್‌ನಲ್ಲಿ ನಡೆದ ಪ್ಲಾಸ್ಟಿಕ್ ಎಕ್ಸಿಬಿಷನ್‌ನಲ್ಲಿ ಅಂ.ರಾ. ಪ್ಲಾಸ್ಟ್ ಐಕಾನ್ ಅವಾರ್ಡ್.
ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಪ.ಪೂ. ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ವಿಶೇಷ ಪುರಸ್ಕಾರ ಮತ್ತು ಅನುಗ್ರಹ.
ಅಖಿಲ ಭಾರತ ಹವ್ಯಕ ಮಹಾಸಭೆಯಿಂದ ‘ಹವ್ಯಕ ರತ್ನ ಪ್ರಶಸ್ತಿ’
ಮುಂತಾದ ಗೌರವಗಳು ಈತನಿಗೆ ಸಂದಿವೆ.
ಒಳ್ಳೆಯ ಪರಿಚಾಯಾತ್ಮಕ ಬರಹ! ಬರಹಗಾರ ಶೋಭಿತನಿಗೂ ಸ್ವಸ್ತಿಕ್ ಪದ್ಮನಿಗೂ ಅಭಿನಂದನೆಗಳು.