ಅನವರತ ಶ್ರೀ ಗುರುಚರಣ ಸ್ಮರಣೆಯೊಂದೇ ಮನದಲ್ಲಿ: ಯಶೋದಾ ಕೋಡಿಮೂಲೆ

ಮಾತೃತ್ವಮ್

“ನಮ್ಮ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠವೇರಿದ ಸಂದರ್ಭದಲ್ಲಿ ಅವರ ಸಂದರ್ಶನವೊಂದನ್ನು ಪತ್ರಿಕೆಯಲ್ಲಿ ಓದಿದೆ. ಬದುಕಿನ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅಂದು ನಾವಿದ್ದೆವು.‌ ಆಗ ಶ್ರೀ ಗುರುಚರಣಗಳನ್ನು ನಂಬಿದರೆ ಕಷ್ಟದಿಂದ ಮುಕ್ತಿ ಸಿಗಬಹುದು ಎಂದು ಮನಸ್ಸಿಗೆ ಅನ್ನಿಸಿತು. ಅಂದಿನಿಂದ ಸತತವಾಗಿ ಶ್ರೀಗುರುಗಳನ್ನು ಸ್ಮರಿಸುತ್ತಲೇ ಇದ್ದೆ. ಒಂದು ಬಾರಿ ಅವರ ದರ್ಶನ ಪಡೆದು ಮಂತ್ರಾಕ್ಷತೆ ಸ್ವೀಕರಿಸಬೇಕೆಂದು ಕಾತರಿಸುತ್ತಲೇ ಇದ್ದೆ. ನಾನಿರುವ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮಕ್ಕಳು ಹೊಸನಗರಕ್ಕೆ ಹೋಗುವಾಗ ಸಂಕೋಚ ಬಿಟ್ಟು ಅವರೊಡನೆ ‘ನಾನೂ ನಿಮ್ಮೊಂದಿಗೆ ಬರುತ್ತೇನೆ’ ಎಂದು ಕೇಳಿ ಹೊರಟೆ. ಶ್ರೀಗುರುಗಳ ದರ್ಶನ ಭಾಗ್ಯವನ್ನು ಪಡೆದು ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದ ಮೇಲೆ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಯಿತು. ಕಷ್ಟ ಪರಂಪರೆಯನ್ನು ಸವಾಲಾಗಿ ಸ್ವೀಕರಿಸಲು ಮನ ಸನ್ನದ್ಧವಾಯಿತು. ಇಂದು ಬದುಕಿನಲ್ಲಿ ನಾನೇನು ಪಡೆದಿದ್ದೇನೆಯೋ ಅದೆಲ್ಲವೂ ಶ್ರೀಗುರುಗಳ ಅನುಗ್ರಹ, ಶ್ರೀಕರಾರ್ಚಿತ ದೇವರುಗಳ ಕಾರುಣ್ಯದಿಂದ. ಆದುದರಿಂದಲೇ ಶ್ರೀಗುರುಗಳ ಸೇವೆ ನನಗೆ ಉಸಿರಿನಷ್ಟು ಸಹಜವಾಗಿದೆ” ಎಂದು ಹೃದಯ ತುಂಬಿ ನುಡಿಯುತ್ತಾರೆ ಯಶೋದಾ ಕೋಡಿಮೂಲೆ.

ಬಾಯಾರು ಬಳಿಯ ಪೆರುವೋಡಿಯ ರಾಮಕೃಷ್ಣ ಭಟ್,ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರಿಯಾದ ಯಶೋದಾ ಅವರು ಮುಳ್ಳೇರಿಯ ಮಂಡಲದ ಕುಂಬಳೆ ವಲಯದ ಕೋಡಿಮೂಲೆ ಶಂಕರನಾರಾಯಣ ಭಟ್ಟರ ಪತ್ನಿ. ಪುಸ್ತಕ ಓದುವುದು, ಸಂಗೀತ, ಭಜನೆ,ಸ್ತೊತ್ರ ಪಠಣಗಳಲ್ಲಿ ಆಸಕ್ತಿ ಹೊಂದಿದವರು.

ಹೊಸನಗರಕ್ಕೆ ಮೊದಲ ಬಾರಿ ಹೋದಾಗ ಶ್ರೀಮಠದ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸಿದರೆ ಶ್ರೀರಾಮ ದೇವರ ಅರ್ಚನೆಗೆ ಬಿಳಿ ಹೂಗಳ ಕೊರತೆಯುಂಟಾಗಲಾರದು ಎಂದುಕೊಂಡ ಯಶೋದಾ ಅವರು ತಮ್ಮ ಮನೆಯಲ್ಲಿ ಇರಿಸಿದ ಸುಮಾರು ನೂರಕ್ಕೂ ಮಿಕ್ಕಿ ಮಲ್ಲಿಗೆಯ ಗಿಡಗಳನ್ನು ಹೊಸನಗರ ಶ್ರೀರಾಮಚಂದ್ರಾಪುರ ಮಠಕ್ಕೆ ಕಳುಹಿಸಿಕೊಟ್ಟವರು.

“ಮಲ್ಲಿಗೆ ಗಿಡಗಳನ್ನು ಕೊಡುತ್ತೇನೆ ಎಂದು ಹೇಳಿದರೆ ಸಾಕೇ,ಅಲ್ಲಿಗೆ ಕೊಂಡೊಯ್ದು ತಲುಪಿಸುವವರು ಬೇಡವೇ. ಆದರೆ ನನ್ನ ಆಸೆ ನಿರಾಸೆಯಾಗದಂತೆ ಹೊಸನಗರಕ್ಕೆ ಹೋಗುವವರು ನಮ್ಮ ಮನೆಗೇ ಬಂದು ಗಿಡಗಳನ್ನು ತಮ್ಮ ವಾಹನದಲ್ಲಿ ಕೊಂಡೊಯ್ದಾಗ ನನಗೆ ಸಂತಸದಿಂದ ಕಣ್ತುಂಬಿ ಬಂದಿತ್ತು. ಶ್ರೀ ರಾಮ ದೇವರ ಅರ್ಚನೆಗೆ ನನ್ನದೊಂದು ಕಿರುಸೇವೆಯಷ್ಟೇ ಇದು. ಆದರೆ ಅಂದಿನಿಂದ ನನ್ನ ಬದುಕಿನಲ್ಲಿ ಮಹತ್ತರ ಬದಲಾವಣೆಗಳಾದವು” ಎನ್ನುವ ಯಶೋದಾ
“ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ಮಾನಸಿಕ ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ” ಎನ್ನುತ್ತಾರೆ. ಮಠಕ್ಕೆ ಭೇಟಿ ನೀಡಿ ಶ್ರೀಗುರುಗಳ ಆಶೀರ್ವಚನಗಳನ್ನು ಕೇಳಿ ಮನವನ್ನು ಸಾಂತ್ವನ ಗೊಳಿಸುತ್ತಿದ್ದ ಅವರು ಅವಕಾಶ ದೊರಕಿದಾಗಲೆಲ್ಲ ಶ್ರೀಮಠಕ್ಕೆ ಹೋಗುತ್ತಾ, ಅಲ್ಲಿ ತನ್ನಿಂದ ಸಾಧ್ಯವಾದಷ್ಟು ಸೇವೆಯನ್ನು ಮಾಡುತ್ತಾ ಬದುಕಿನಲ್ಲಿ ನೆಮ್ಮದಿ ಕಂಡುಕೊಂಡವರು.

ಶ್ರೀಗುರುಗಳ ನಿರ್ದೇಶಾನುಸಾರವಾಗಿ ನಡೆಯುವ ಹೆಚ್ಚಿನ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾ, ವಿವಿಧ ಸ್ತೋತ್ರಗಳನ್ನು ಪಠಣ ಮಾಡುತ್ತಾ ಇರುವ ಅವರು ಕೆಲವು ವರ್ಷಗಳ ಹಿಂದೆ ಮುಳ್ಳೇರಿಯ ಮಂಡಲದಿಂದ ಅತ್ಯಂತ ಹೆಚ್ಚು ಕುಂಕುಮಾರ್ಚನೆ ಮಾಡಿ, ಶ್ರೀಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.

“ಗೋವು ಎಂದರೆ ಮಾತೆ. ಮಾತೆಯ ಸೇವೆಗಾಗಿ ಮಾತೆಯರೇ ಮುಂದೆ ಬರಬೇಕು” ಎಂಬ ಶ್ರೀಗುರುಗಳ ಆಶೀರ್ವಚನದ ಪ್ರೇರಣೆಯಿಂದ ಗೋಸೇವೆಗೆ ಮನಮಾಡಿದ ಯಶೋದಾ ಸಾವಿರದ ಸುರಭಿಯ ಮೂಲಕ ಲಕ್ಷಭಾಗಿನಿಯಾದವರು. ಮುಂದೆ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿಯೂ ಸೇವೆ ಸಲ್ಲಿಸಿ ಎರಡು ವರ್ಷದ ಗುರಿ ತಲುಪಿದವರು

“ನನ್ನ ಗೋಸೇವೆಗೆ ನಿರ್ದಿಷ್ಟ ಸಮಯದ ಗುರಿ ಇಲ್ಲ,ಅದು ನಿರಂತರ. ಸಮಾಜದ ಪ್ರತಿಯೊಬ್ಬರೂ ಗೋಸೇವೆಗೆ ಕೈ ಜೋಡಿಸಬೇಕೆಂಬುದೇ ನನ್ನ ಆಸೆ” ಎನ್ನುವ ಇವರು ಪರಿಚಿತರು,ಸಂಬಂಧಿಕರು ಮಾತ್ರವಲ್ಲದೆ ತನಗೆ ಪ್ರಯಾಣದಲ್ಲಿ ಪರಿಚಯವಾದವರ ಬಳಿ,ಕಾರ್ಯಕ್ರಮಗಳಲ್ಲಿ ಭೇಟಿಯಾದವರ ಬಳಿಯಲ್ಲೆಲ್ಲ ಶ್ರೀಮಠದ ದೇಶೀಯ ಗೋತಳಿಗಳ ಸಂರಕ್ಷಣಾ ವಿಧಾನದ ಬಗ್ಗೆ, ಗೋಸ್ವರ್ಗದ ಬಗ್ಗೆ, ದೇಶೀಯ ಹಸುಗಳ ಉಪಯುಕ್ತತೆಯೇ ಮುಂತಾದ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿ ಅವರ ಮನವೊಲಿಸಿ ಗೋಸೇವೆಗೆ ಕೈ ಜೋಡಿಸುವಂತೆ ಮಾಡಿದವರು.

ರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಹತ್ತುದಿನಗಳ ಕಾಲವೂ ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸ್ವಯಂ ಸೇವಕಿಯಾಗಿ ಸೇವೆ ಗೈದವರು ಯಶೋದಾ. ಮುಂದೆ ವಿಶ್ವ ಗೋ ಸಮ್ಮೇಳನದಲ್ಲೂ ಭಾಗವಹಿಸಿದರು. ಅಭಯಾಕ್ಷರ ಅಭಿಯಾನ,ವಿಶ್ವ ಮಂಗಲ ಗೋಯಾತ್ರೆಯ ಸಂದರ್ಭಗಳಲ್ಲೂ ಸಾಕಷ್ಟು ಸೇವೆ ಸಲ್ಲಿಸಿದವರು.

“ಶ್ರೀ ಗುರುಗಳ ಅನುಗ್ರಹದಿಂದ ಇಂದು ಬದುಕಿನಲ್ಲಿ ನೆಮ್ಮದಿಯಾಗಿದ್ದೇನೆ. ಇಬ್ಬರು ಮಕ್ಕಳೂ ಉನ್ನತ ಹುದ್ದೆಯಲ್ಲಿದ್ದಾರೆ. ಮಕ್ಕಳು, ಸೊಸೆಯಂದಿರೊಡಗೂಡಿದ ನಿವೃತ್ತ ಜೀವನ ನನ್ನದು. ಮನೆಯವರೆಲ್ಲ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಶ್ರೀ ಮಠದ ವಿವಿಧ ಯೋಜನೆಗಳಿಗೆ ಕೈ ಜೋಡಿಸುವ ಸೌಭಾಗ್ಯ ನಮಗೆ ಒದಗಿ ಬಂದಿರುವುದು ಶ್ರೀಗುರುಗಳ ಅನುಗ್ರಹದಿಂದ.ಗುರು ಪೀಠದ ರಕ್ಷಣೆಯಿಂದಲೇ ನನ್ನ ಬದುಕು ಹಸನಾಗಿದ್ದು.ಶ್ರೀ ಮಠ ಎಂದರೆ ನನಗೆ ತವರುಮನೆಯಂತೆ.ಶ್ರೀಗುರುಗಳು ಮಾತೃ ಸ್ವರೂಪಿಗಳು” ಎಂದು ಭಾವುಕರಾಗಿ ನುಡಿಯುವ ಯಶೋದಾ ಪ್ರತೀ ವರ್ಷವೂ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಮಠಕ್ಕೆ ಬಂದು ಸೇವೆ ಮಾಡುತ್ತಾರೆ.

“ಬದುಕಿನ ಖಿನ್ನತೆ ಕಳೆದು ಉನ್ನತಿಯ ಹಾದಿ ತೋರಿದ ಶ್ರೀಚರಣಗಳಿಗೆ ಸದಾ ಶರಣು. ನನ್ನಿಂದ ಸಾಧ್ಯವಿರುವಷ್ಟು ಕಾಲ,ಸಾಧ್ಯವಾಗುವ ರೀತಿಯಲ್ಲಿ ಶ್ರೀ ಮಠದ ಸೇವೆ ಮಾಡಬೇಕೆಂಬುದೇ ಅಭಿಲಾಷೆ. ಶ್ರೀ ರಾಮ ದೇವರ ಅನುಗ್ರಹದಿಂದ ಆ ಸೌಭಾಗ್ಯ ನಿತ್ಯ ದೊರಕಲಿ ಎಂಬುದೇ ನನ್ನ ಪ್ರಾರ್ಥನೆ” ಎನ್ನುವ ಯಶೋದಾ ಕೋಡಿಮೂಲೆ ಅವರ ಶ್ರದ್ಧೆ,ಭಕ್ತಿ, ಸೇವೆ ಇತರರಿಗೆ ಮಾದರಿ.

Author Details


Srimukha

Leave a Reply

Your email address will not be published. Required fields are marked *