ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೦

ಅರಿವು-ಹರಿವು
ನಮ್ಮ ಗುರುಪರಂಪರೆಯಲ್ಲಿ ಆಗಿಹೋದ ಪ್ರತಿ ಗುರುರೂಪವೂ ಆಯಾ ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಅರಿವಿನ ಮಹತಿಯನ್ನು ಬೇರೆಬೇರೆ ಮಾರ್ಗದಲ್ಲಿ ಭಿನ್ನಹಿಕೆ ಮಾಡುತ್ತಲೇ ಸಮಾಜವನ್ನು ಸಾಗಿಸುತ್ತಿದೆ. ಈ ಕಾರಣಕ್ಕೆ ಎಂಬಂತೆಯೇ ದಿವ್ಯಪುರುಷರಾದ ವೇದವ್ಯಾಸರು ತಮ್ಮಾತ್ಮವಿಸ್ತಾರವೇ ಆದ ದಿವ್ಯತೆಯ ಶಿಖರವೆನಿಸಿದ ಶುಕಮುನಿಯನ್ನು ಹೆಚ್ಚಿನ ವಿದ್ಯಾಧ್ಯಯನಕ್ಕೆಂದು ರಾಜರ್ಷಿ ಜನಕನಲ್ಲಿಗೆ ಹೋಗುವಂತೆ ಆಗ್ರಹಿಸುತ್ತಾರೆ. ಅದು ಕಾಲ್ನಡಿಗೆಯಲ್ಲಿಯೇ ಸಾಗುವಂತೆ…ಅಂತರಿಕ್ಷಚರ್ಯೆ ಮಾಡುವ ಸಾಮರ್ಥ್ಯ ಸಾಧ್ಯವಿದ್ದರೂ ಸಹ ಕಾಲ್ನಡಿಗೆಯಲ್ಲಿಯೇ ಹೋಗಬೇಕೆಂಬ ಅಣತಿ. ಅಂತೆಯೇ ಶುಕರು ಮೇರುಪರ್ವತದಿಂದ ಮೂರುವರ್ಷಗಳನ್ನು ದಾಟಿ ( ಸುಮೇರು ವರ್ಷ, ಹೈಮವತ ವರ್ಷ, ಹರಿವರ್ಷ ) ಆರ್ಯಾವರ್ತಕ್ಕೆ ಬರುತ್ತಾರೆ.
ಮಿಥಿಲೆಯಲ್ಲಿ ಜನಕನ ಸಾಮೀಪ್ಯಕ್ಕೆ ಬರುವವರೆಗೆ ಆದ ಅವಮಾನ, ಸನ್ಮಾನ, ಬೇರೆ ಬೇರೆ ತರಹದ ಪ್ರಲೋಭನೆವೆಲ್ಲಗಳಿಗು ಶುಕರ ಪ್ರತಿ ಹೆಜ್ಜೆಯೊಂದೆ ಅದು ಸಮಾಧಾನ. ಎಲ್ಲೆಲ್ಲೂ ಸಮದರ್ಶಿತ್ವ. ವಿದ್ಯಾರ್ಜನೆಗಾಗಿ ಬರುವಾಗ ದ್ವಾರಪರೀಕ್ಷೆಯೆಂಬಂತೆ ಜನಕನ ಯೋಜನೆ ಅದಾಗಿತ್ತು. ಅದರ ತೇರ್ಗಡೆಗೆ ಸಾಕ್ಷಿಯೆಂಬಂತೆ ಮಿಥಿಲೆಯ ದ್ವಾರಪಾಲಕರು ಕಠೋರ ಮಾತುಗಳನ್ನಾಡಿ ತಡೆದಾಗಲೂ, ವಿವಿಧ ಪಾನೀಯಗಳ ನೀಡಿ ಅಪ್ಸರ ಸ್ತ್ರೀಯರು ನೃತ್ಯಗೈದು ರಂಜಿಸುತ್ತಿರುವಾಗಲೂ ಇನ್ನೊಂದು ಕಕ್ಷೆಯಲ್ಲಿ ಪಾದಪೂಜೆಗೈದಾಗಲೂ ಅದೇ ಅಚಲತೆ. ಅದೇ ನಿರ್ಲಿಪ್ತತೆ. ಇದೆಲ್ಲವ ದಾಟಿ ಜನಕನನ್ನು ಸಂಧಿಸಿದ ಮೇಲೆ ರಾಜರ್ಷಿ, ಜ್ಞಾನಿ ಜನಕನಿಂದ ಜನ್ಮಜ್ಞಾನಿ ಶುಕನಿಗೆ ವಿವಿಧಾದರಗಳು ನಂತರದಲ್ಲಿ ನಡೆದ ಮೋಕ್ಷದ ಕುರಿತ ದೀರ್ಘ ಚರ್ಚೆ. ಅದರ ಒಂದಿಷ್ಟು ತುಣುಕುಗಳನ್ನು ಇಲ್ಲಿ ಉಲ್ಲೇಖಿಸುತ್ತೇವೆ.
ಜನಕನಿಗೆ ಶುಕನ ಪ್ರಶ್ನೆ
     * “किं कार्यं ब्राह्मणेनेह” (ಬ್ರಾಹ್ಮಣನಿಗೆ ವಿಹಿತವಾದ ಕಾರ್ಯ ಯಾವುದು)
     *”मोक्षार्थश्च किमात्मकः” (ಮುಕ್ತಿಯನ್ನು ಬಯಸುವವನು ಏನಾಗಿರಬೇಕು)
     *”कथञ्च मोक्षं प्राप्तव्यो ज्ञानेन तपसाथव” (ಮೋಕ್ಷಪ್ರಾಪ್ತಿಗಾಗಿ ಜ್ಞಾನಮಾರ್ಗವು ತಪಸ್ಸೋ ಅಥವಾ ಹೇಗೆ)
ಈ ಎಲ್ಲ ಪ್ರಶ್ನೆಗಳಿಗೆ ರಾಜರ್ಷಿ ಜನಕನು ಎಳೆಎಳೆಯಾಗಿ ಉತ್ತರಿಸುತ್ತಾ ಹೋಗುತ್ತಾನೆ.
ಜ್ಞಾನಿಯ ಲಕ್ಷಣವನ್ನೂ ವಿವರಿಸುತ್ತಾನೆ.
    “ನಿರ್ಭಯತೆ” – ಅವನಿಂದ ಯಾರಿಗೆ ಭಯವಿಲ್ಲವೊ ಅವನಿಗೆ ಯಾರ ಭಯವೂ ಇಲ್ಲವೋ ಅವನು ಜ್ಞಾನಿ. ( “नबिभेति परोयस्मात् नबिभेति पराच्चयः यश्च नेच्छति न द्वेष्टि ब्रह्मसम्पद्यते तदा”)
    “ದ್ವಂದ್ವಾತೀತ” – ಯಾವನು ಧರ್ಮಾಧರ್ಮ / ಪಾಪ-ಪುಣ್ಯ / ಪ್ರಕೃತಿ-ವಿಕೃತಿ ಗಳ ಪರಿಧಿಯನ್ನು ಮೀರಿದ್ದಾನೋ ಅವನು ಜ್ಞಾನಿ. ( “अद्वन्द्वो समदर्शिनः” )
ಇಂತಹ ತ್ರಿಕಾಲಾಬಾಧಿತ ಅದ್ವೈತಸ್ಥಿತಿಯಲ್ಲಿರುವವನು ಜ್ಞಾನಿ ಎಂದೆಲ್ಲಾ ವರ್ಣಿಸುತ್ತಾ “ನಿನ್ನಹಾಗಿರುತ್ತಾನೆಂದು” ಶುಕನಿಗೇ ಶುಕನ ಉದಾಹರಣೆಯನ್ನೀಯುತ್ತಾನೆ ಜನಕ. ಚರ್ಚೆಯಲ್ಲಾ ಪೂರ್ಣಗೊಂಡು ವಿದ್ಯಾರ್ಜನೆಯೂ ಪೂರ್ಣಗೊಂಡಂತಾಗಿ ಶುಕರು ಮೇರುಪರ್ವತಕ್ಕೆ ಹಿಂದಿರುಗುತ್ತಾರೆ. ಅಲ್ಲಿ ವೇದೋಪಾಸನೆಯಿಂದ ದಿನಗಳುರುಳುತ್ತಿರುವಾಗ ವ್ಯಾಸರಿಲ್ಲದ ಸಮಯದಲ್ಲಿ ನಾರದರ ಆಗಮನವಾಗುತ್ತದೆ. ಅವರಾಡಿದ ನುಡಿಗಳು ಶುಕರಿಗೆ ನಿಮಿತ್ತವಾಯಿತೋ ಎಂಬಂತೆ ಮುಕ್ತಿಯೆಡೆಗೆ ಮನಮಾಡಿದವರು ಪ್ರಕೃತಿಧರ್ಮಕ್ಕೆ ಮರ್ಯಾದೆ ಕೊಡಲೋಸ್ಕರ ತಂದೆಯಲ್ಲಿಗೆ ಬಂದು ತಮ್ಮ ಮುಕ್ತಿನಿರ್ಧಾರವನ್ನು ತಿಳಿಸಿ ನಮಿಸುತ್ತಾರೆ. ವ್ಯಾಸರಂತಹ ವ್ಯಾಸರೂ ಪುತ್ರವ್ಯಾಮೋಹದಿಂದ ಒಂದೇ ಒಂದು ದಿನ ಇರು ಎಂಬ ಅಪೇಕ್ಷೆಯನ್ನಿಡುತ್ತಾರೆ. ಮುಕ್ತಿಗೇ ಹೊರಟದ್ದಾದ್ದರಿಂದ ತಂದೆಯ ಈ ಕೋರಿಕೆಗೆ ಮಣಿಯದೆ, ಮುಕ್ತಿಗಾಗಿ ಸಕಲಧರ್ಮವನ್ನೂ ಮೀರಿ, ಇಷ್ಟೆಲ್ಲ ದಿನ ಇಹದಲ್ಲಿ ಇರಿಸಿಕೊಂಡಿದ್ದ ಪ್ರಕೃತಿಗೆ ತುಂಬುಹೃದಯದ ಕೃತಜ್ಞತೆಗಳನ್ನರ್ಪಿಸಿ, ಸಕಲ ಚರಾಚರ ಚೈತನ್ಯದಲ್ಲಿ ಲೀನವಾಗಿ ಬೆಳಕೊಂದೇ ಆಗುತ್ತಾರೆ. ವ್ಯಾಸರು ವಾತ್ಸಲ್ಯದಿಂದ ಶುಕ ಶುಕ ಎಂದು ಕೂಗಿದರೆ ಕಣಕಣವೂ ಶುಕಚೈತನ್ಯದಿಂದ ಕೂಡಿ ಪ್ರತಿಧ್ವನಿಸಿತು ಎಂಬಲ್ಲಿಗೆ ಅವಿಚ್ಛಿನ್ನ ಗುರುಪರಂಪರೆಯ ಅರಿವಿನ ಹರಿವಿನಲ್ಲಿ ಶುಕ ಪಾತ್ರವನ್ನು ಮುಗಿಸುತ್ತಾ, ತಾನುರಿದು ಜಗಕ್ಕೆಲ್ಲಾ ಜ್ಯೋತಿಯನ್ನು ನೀಡಿದ ಗುರುಪರಂಪರೆಗೆ ನಮಿಸುತ್ತೇವೆ.

Author Details


Srimukha

Leave a Reply

Your email address will not be published. Required fields are marked *