ವಿವಿವಿ ಮೂಲಕ ಭಾರತೀಯ ಶಿಕ್ಷಣಕ್ಕೆ ಹೊಸದಿಕ್ಕು: ರಾಘವೇಶ್ವರ ಶ್ರೀ

ವಿದ್ಯಾಲಯ

ಗೋಕರ್ಣ: ದೇಶ ಬೆಳಗಬೇಕು; ಭಾರತೀಯ ವಿದ್ಯೆ ಬೆಳೆಯಬೇಕು ಎಂಬ ಉದ್ದೇಶದಿಂದ ಭಾರತದ ಶಿಕ್ಷಣದಲ್ಲಿ ಭಾರತೀಯತೆಯನ್ನು ತುಂಬುವ ಮಹತ್ಕಾರ್ಯಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮುನ್ನುಡಿ ಬರೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಆನ್‍ಲೈನ್ ಶಿಕ್ಷಣಕ್ಕೆ ಚಾಲನೆ ನೀಡಿದ ಸಂದರ್ಭ ಸ್ವಾಮೀಜಿಯವರು ಸ್ವತಃ ಪ್ರಥಮ ಪಾಠ ಬೋಧಿಸಿದರು. ವಿಶ್ವದ ಎಲ್ಲೂ ಸಿಗದ ಪರಿಪೂರ್ಣ, ಅಪೂರ್ವ ಶಿಕ್ಷಣ ನಮ್ಮ ಯುವ ಜನಾಂಗಕ್ಕೆ ಸಿಗಬೇಕು ಎನ್ನುವುದೇ ವಿವಿವಿ ಸ್ಥಾಪನೆಯ ಉದ್ದೇಶ ಎಂದು ಹೇಳಿದರು.
ಚಾಣಕ್ಯ ಇಡೀ ಗುರುಕುಲಕ್ಕೆ ಸ್ಫೂರ್ತಿ. ಆದ್ದರಿಂದ ಅವರ ಹೆಸರಲ್ಲಿ ವಿಶ್ವವಿದ್ಯಾಪೀಠ ಸ್ಥಾಪನೆಯಾಗುತ್ತಿದೆ. ಭಾರತಕ್ಕೆ ತಿರುವು ಕೊಡಬಲ್ಲ ಗುರುಕುಲಗಳ ಶುಭಾರಂಭ ಈ ಮಹತ್ವಾರ್ಯಕ್ಕೆ ಪೀಠಿಕೆ ಮಾತ್ರ ಎಂದು ಬಣ್ಣಿಸಿದರು.
ಅನ್ನದಾನ ಶ್ರೇಷ್ಠ; ಆದರೆ ಅನ್ನದಿಂದ ಸಿಗುವ ತೃಪ್ತಿ ಕ್ಷಣಿಕ. ವಿದ್ಯಾದಾನ ಅದಕ್ಕಿಂತ ಶ್ರೇಷ್ಠ ವಿದ್ಯೆ ಕೊಡುವ ಲಾಭ ಶಾಶ್ವತ. ದುಡ್ಡಿಗಿಂತ ದೊಡ್ಡ ಸಂಪತ್ತು ವಿದ್ಯೆ. ಅದನ್ನು ಬಳಸಿದಷ್ಟೂ ಅದು ವೃದ್ಧಿಸುತ್ತದೆ. ಆದ್ದರಿಂದ ಜೀವನಮೌಲ್ಯಗಳೂ ಸೇರಿದ ಅಪೂರ್ವ ಶಿಕ್ಷಣ ಯುವಪೀಳಿಗೆಗೆ ಸಿಗಬೇಕು ಎನ್ನುವುದು ವಿವಿವಿ ಧ್ಯೇಯ ಎಂದು ವಿವರಿಸಿದರು.
ಭಾರತದಲ್ಲಿ ವಿದ್ಯೆಯ ಕಲಿಕೆ ವಿದ್ಯಾಬಾಸವಾಗಬಾರದು; ಬದಲಿಗೆ ನಿಜ ಅರ್ಥದಲ್ಲಿ ವಿದ್ಯಾಭ್ಯಾಸವಾಗಬೇಕು. ಮಕ್ಕಳಿಗೆ ಎಳವೆಯಲ್ಲೇ ಉತ್ತಮ ವಿದ್ಯೆ ದೊರಕಬೇಕು. ವಿದ್ಯೆ ಇಲ್ಲದವನು ಪಶು ಸಮಾನ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಯಲ್ಲಿ ಶಾಂತಿ, ಸಮಾಧಾನ, ವಿನಯ, ವಿಧೇಯತೆ ಅಗತ್ಯ. ಗರ್ವಿಷ್ಟನಿಗೆ ವಿದ್ಯೆ ಇಲ್ಲ; ಗುರುವಿಗೆ ಶರಣಾಗಬೇಕು; ಶ್ರದ್ಧೆ ಇಲ್ಲದವನಿಗೆ ವಿದ್ಯೆ ಕೈವಶವಾಗದು; ಗುರುವಿನ ಶಾಸನಕ್ಕೆ ಒಳಪಟ್ಟು, ಬದುಕಿಡೀ ಗುರುವಿನ ಸೂಚನೆ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗೆ ಕಾಗೆಯಂಥ ಸೂಕ್ಷ್ಮ ದೃಷ್ಟಿ, ಕೊಕ್ಕರೆಯಂತೆ ಧ್ಯಾನಸ್ಥ ಮನಸ್ಸು ಹಾಗೂ ಸಹನೆ ಅಗತ್ಯ. ಅಕಾಲ ನಿದ್ರೆ, ಅತಿ ಆಹಾರ, ಆಲಸ್ಯ ಬಿಡಬೇಕು. ವಿದ್ಯಾರ್ಜನೆಗೆ ಮನೆಬಿಟ್ಟು ಬರಬೇಕು. ಅಲ್ಪಾಹಾರ, ಗೃಹತ್ಯಾಗ ಮಾಡಿ ಗುರುಕುಲ ಸೇರಿ, ಸಾತ್ವಿಕ, ಪೌಷ್ಟಿಕ ಆಹಾರವನ್ನು ಪ್ರಮಾಣಬದ್ಧವಾಗಿ ಸೇವಿಸಿ ಮನಸ್ಸು, ಆರೋಗ್ಯ ವರ್ಧಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಿಜವಾದ ವಿದ್ಯೆ ಕೊಡುವುದು ಗುರುಕುಲ. ಶ್ರೀ ರಾಮಕೃಷ್ಣ, ಶ್ರೀ ಶಂಕರರು, ಚಂದ್ರಗುಪ್ತ ಕಲಿತ ವಿದ್ಯೆ ಗುರುಕುಲ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಶಿಕ್ಷಣ ಕ್ಷೇತ್ರದ ದಿಗ್ಗಜರು ಪಾಠ ಮಾಡಲಿದ್ದಾರೆ. ಕೊರೋನಾ ಪೀಡೆ ತೊಗಲಿ, ಬಲುಬೇಗ ಗುರುಕುಲಕ್ಕೆ ವಿದ್ಯಾರ್ಥಿಗಳು ಬರುವಂತಾಗಲಿ ಎಂದು ಆಶಿಸಿದರು.
ಗುರುಕುಲಗಳ ಪಾರಂಪರಿಕ ವಾಹಿನಿಯ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಜಗದೀಶ್ ಶರ್ಮಾ ಸಂಪ, ಮತ್ತಿತರರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *