ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪರಿಸರದಲ್ಲಿ ದೀಪಾವಳಿಯ ಆನಂದಮಯ ಆಚರಣೆ

ವಿದ್ಯಾಲಯ

 

ಶ್ರೀರಾಮಚಂದ್ರಾಪುರ ಮಠದಿಂದ ಪ್ರತಿಷ್ಠಾಪಿಸಲ್ಪಡುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ – ರಾಜರಾಜೇಶ್ವರಿ ಗುರುಕುಲದ ಆವರಣದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು‌.

ಗುರುಕುಲಗಳ ಆರ್ಯೆಯರಾದ ಕು‌|| ಪವಿತ್ರಾ ಭಟ್, ಶ್ರೀಮತಿ ಜ್ಯೋತಿ ಕುಮಾರಿ, ಆರ್ಯರಾದ ಶ್ರೀ ಸದಾನಂದ ಹೆಬ್ಬಾರ್, ಶ್ರೀ ಅಕ್ಷಯ್ ಹಾಗೂ ವಿದ್ಯಾರ್ಥಿನಿ ಕು. ವಸಂತಾ ಇವರೆಲ್ಲರೂ ಜತೆಗೂಡಿ ಹಿಂದೂ ಧರ್ಮದ ಪ್ರತೀಕವಾದ ಸ್ವಸ್ತಿಕ್ ಆಕೃತಿಯಲ್ಲಿ ಹಣತೆಗಳನ್ನು ಇರಿಸಿ ದೀಪ ಬೆಳಗಿದರು. ಈ ಮೂಲಕ ಸ್ವಸ್ತಿಕಾಕೃತಿಯಲ್ಲಿ ಬೆಳಗು ಮನಮೋಹಕವಾಗಿ ಹೊರಹೊಮ್ಮುತ್ತಿತ್ತು‌.

_*ಅಭ್ಯಂಗ ಸ್ನಾನದ ಸೊಬಗು:*_
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವೇದಾಧ್ಯಯನಕ್ಕಾಗೇ ಮಿಸಲಿರುವ ಶಿವಗುರುಕುಲದ ವಿದ್ಯಾರ್ಥಿಗಳು ಇಂದು ಬೆಳಗಿನ ಸಮಯದಲ್ಲಿ ನರಕ ಚತುರ್ದಶಿ ದಿನದ ಆಚರಣೆಯಂತೆ ಅಭ್ಯಂಗ ಸ್ನಾನ ಮಾಡಿದರು. ಆಚಾರ್ಯರಾದ ವೇ.ಮೂ. ಆಚಾರ್ ವಿಚಾರ್ ಗಜಾನನ ಭಟ್ ಅವರು ವಿದ್ಯಾರ್ಥಿಗಳಿಗೆಲ್ಲ ತಾಯಿಯ ಸ್ಥಾನದಲ್ಲಿ ನಿಂತು ಎಣ್ಣೆ ಹನಸಿದರು. ಇದೊಂದು ಭಾವಪೂರ್ಣ ಸನ್ನಿವೇಶವಾಗಿತ್ತು‌‌‌. ನಂತರದಲ್ಲಿ ವಿದ್ಯಾರ್ಥಿಗಳು ಮಲ್ಲಿಕಾರ್ಜುನ ದೇವಾಲಯಕ್ಕೆ ತೆರಳಿ ವೇದಮಂತ್ರಗಳನ್ನು ಹೇಳಿದರು.

*ಹೋಳಿಗೆ ಸಿಹಿಗಿಂತ ಹೋಳಿಗೆ ಮಾಡಿದ ಸವಿ ಮಿಗಿಲು*
ವಿವಿವಿ’ಯ ಅಡುಗೆಮನೆ ಆವರಣದಲ್ಲಿ ಹೋಳಿಗೆ ಮಾಡುವ ಸಂಭ್ರಮ ಬಹು ಜೋರಾಗಿತ್ತು. ಶಿವ ಗುರುಕುಲದ ವಿದ್ಯಾರ್ಥಿಗಳು, ಆಚಾರ್ಯರಾದ ವೇ. ಮೂ. ಆಚಾರ್ ವಿಚಾರ್ ಗಜಾನನ ಭಟ್ ಇವರ ಮಾರ್ಗದರ್ಶನದಲ್ಲಿ, ಹಾಗೂ ಶ್ರೀಮಠದ ಕಾರ್ಯಕರ್ತರೆಲ್ಲ ಸೇರಿ ಹೋಳಿಗೆ ತಯಾರಿಸಲಾಯಿತು.

ಹೂರಣದ ಉಂಡೆ ಮಾಡುವುದು, ಹಿಟ್ಟಿನಲ್ಲಿ ತುಂಬುವುದು, ಲಟ್ಟಿಸುವುದು, ಸುಡುವುದು ಹೀಗೆ ಪ್ರತಿಯೊಂದು ಕೆಲಸವನ್ನು ಪ್ರತಿಯೊಬ್ಬರೂ ಅಷ್ಟಿಷ್ಟು ಮಾಡುತ್ತಾ, ಹಿರಿಯರ ಮಾರ್ಗದರ್ಶನ, ಕಿರಿಯರ ಉತ್ಸಾಹದ ಜೊತೆ ಮಾತು – ಕಥೆ – ಹರಟೆ ಹೀಗೆ ನೋಡನೋಡುತ್ತಲೇ ಕೆಲವು ನೂರು ಹೋಳಿಗೆಗಳು ತಯಾರಾಗಿದ್ದವು. ಇದೊಂದು ಸುಂದರ ಅನುಭವವೇ ಆಗಿತ್ತು. ರಾತ್ರಿ ಊಟದ ಸಮಯದಲ್ಲಿ ಹೋಳಿಗೆಯನ್ನು ಬಡಿಸುವ ಸಂಭ್ರಮ ಇನ್ನೂ ಮೇಲು. ಒಟ್ಟಿನಲ್ಲಿ ಶ್ರೀಮಠದ ಶಿಷ್ಯರಿಗೆ, ಗುರುಕುಲದ ವಿದ್ಯಾರ್ಥಿಗಳಿಗೆ ಹೋಳಿಗೆ ತಿನ್ನುವುದಕ್ಕಿಂತ ಹೋಳಿಗೆ ಮಾಡುವುದು, ಬಡಿಸುವುದು ಸಾರ್ಥಕತೆಯನ್ನು ತಂದುಕೊಟ್ಟಿದೆ‌.

ಸಾರ್ವಭೌಮ – ರಾಜರಾಜೇಶ್ವರಿ ಗುರುಕುಲದ ಆರ್ಯೆ-ಆರ್ಯರು ಮತ್ತು ವಿದ್ಯಾರ್ಥಿಗಳು ಸ್ವಸ್ತಿಕಾಕೃತಿಯಲ್ಲಿ ದೀಪಗಳನ್ನು ಬೆಳಗುವುದರ ಜೊತೆಗೆ ವಿಶೇಷ ಹೋಳಿಗೆ ಊಟ ಮಾಡಿದರು.

ಹೀಗೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸರಳವಾಗಿಯೂ, ಸಮರ್ಪಕವಾಗಿಯೂ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು

Author Details


Srimukha

Leave a Reply

Your email address will not be published. Required fields are marked *