ನಂತೂರು: ನಾವು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಆಗ ನಾವು ಮತ್ತು ಭಾಷೆಯ ಅಭಿವೃದ್ದಿ ಸಾಧ್ಯ ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ದೇವು ಹನೆಹಳ್ಳಿ ಹೇಳಿದರು.
ಅವರು ನ.೨ರಂದು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆಶ್ರಯ ದಲ್ಲಿ ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಎಲ್ಲಾ ಆಚರಣೆಗಳು ಮತ್ತು ಉತ್ಸವಗಳನ್ನು ಮಾಡುವ ಮೂಲಕ ಮಕ್ಕಳಿಗೆ ಸಂಸ್ಕೃತಿಯ ಜೊತೆಗೆ ಉತ್ತಮ ಅವಕಾಶವನ್ನು ಒದಗಿಸುತ್ತೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾ ಭಟ್ ಎಲ್ಲಾ ಭಾಷೆಗಳನ್ನು ಗೌರವಿಸಿ ಮತ್ತು ನಮ್ಮ ಭಾಷೆಯನ್ನು ಪ್ರೀತಿಸಬೇಕು ಎಂದರು. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನದಾಸ್ ಉಪಪ್ರಾಂಶುಪಾಲರಾದ ಗಂಗಾರತ್ನಾ ಮುಗುಳಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಚೈತ್ರಾ ಸ್ವಾಗತಿಸಿ, ವಿನಯಚಂದ್ರ ವಂದಿಸಿದರು. ಧನುಷ್ ನಿರೂಪಿಸಿದರು. ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವರುಣ್ ಮತ್ತು ಕೌಸಲ್ಯ ರಾಜ್ಯೋತ್ಸವದ ಮಹತ್ವ ತಿಳಿಸಿದರು. ಅನಂತರ ವಿದ್ಯಾರ್ಥಿಗಳಿಂದ ನಾಡು ನುಡಿ ಬಿಂಬಿಸುವ ಗೀತೆಗಳು ಮತ್ತು ವಿದ್ಯಾರ್ಥಿಗಳು ರಚಿಸಿದ ಕವನ ಮತ್ತು ಪ್ರಬಂಧ ವಾಚಿಸಲಾಯಿತು.