ದೇಶಭಕ್ತಿಯಷ್ಟೇ ದೇಶಜ್ಞಾನ ಮುಖ್ಯ: ಶ್ರೀಸಂಸ್ಥಾನ

ವಿದ್ಯಾಲಯ ಸುದ್ದಿ

ಬೆಂಗಳೂರು: ಭಾರತೀಯ ವಿದ್ಯೆ ಹಾಗೂ ಕಲೆಗಳನ್ನು ಒಂದೇ ಕಡೆ ಬೋಧಿಸುವ ವ್ಯವಸ್ಥೆ ದೇಶದಲ್ಲೆಲ್ಲೂ ಇಲ್ಲ. ಆದ್ದರಿಂದ ಸಮಗ್ರ ಭಾರತೀಯ ಕಲೆ, ವಿದ್ಯೆಗಳನ್ನು ಪರಿಚಯಿಸುವುದೇ ಉದ್ದೇಶಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶವಾಗಿದೆ. ದೇಶಭಕ್ತಿ ಹಾಗೂ ದೇಶಜ್ಞಾನದ ಸಮಗ್ರ ವಿದ್ಯಾವೀರರನ್ನು ಸೃಷ್ಟಿಸಿ, ಅವರು ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಬೆಳಕಾಗುವಂತೆ ಬೆಳೆಯಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

 

ಗಿರಿನಗರ ರಾಮಾಶ್ರಮದಲ್ಲಿ ಭಾನುವಾರ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂವಾದ ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರು ಆಶೀರ್ವಚನ ನೀಡಿದರು.

 

ದೇಶದ ಬಗ್ಗೆ ಜ್ಞಾನ ಇಲ್ಲದ ದೇಶಭಕ್ತಿಯಿಂದ ಯಾವ ಪ್ರಯೋಜನವೂ ಇಲ್ಲ. ದೇಶವನ್ನು ಸಮರ್ಥವಾಗಿ ಮುನ್ನಡೆಬೇಕಾದರೆ ದೇಶದ ಸಂಸ್ಕೃತಿ, ಪರಂಪರೆ, ವಿದ್ಯೆಗಳ ಅರಿವು ಇರಬೇಕಾದ್ದು ಅನಿವಾರ್ಯ. ಅಂಥವರು ಮಾತ್ರವೇ ದೇಶವನ್ನು ಉಳಿಸಿ ಬೆಳೆಸಬಲ್ಲರು. ಚಂದ್ರಗುಪ್ತನಂಥ ವೀರ- ಜ್ಞಾನಿಗಳನ್ನು ನಿರ್ಮಾಣ ಮಾಡುವುದು ಗುರಿ ಎಂದು ವಿವರಿಸಿದರು.

 

ಧರ್ಮನಿಷ್ಠೆ, ದೇಶನಿಷ್ಠೆ ಇರುವ ಧರ್ಮಯೋಧರ ನಿರ್ಮಾಣ ನಮ್ಮ ಉದ್ದೇಶ. ಚಾಣಕ್ಯ- ಚಂದ್ರಗುಪ್ತರ ಪರಂಪರೆ ಮುಂದುವರಿಯಬೇಕು ಮತ್ತು ಅತ್ಯಪೂರ್ವ ಭಾರತೀಯ ವಿದ್ಯೆ- ಕಲೆಗಳನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.

 

ಸಂಸ್ಕೃತಿ ಮಾತೆಯ ಮಕ್ಕಳ ಜತೆ ಈ ವಿಷಯವನ್ನು ಹಂಚಿಕೊಳ್ಳುವ ಸಲುವಾಗಿಯೇ ಈ ಸಂವಾದ ಸಭೆ ಕರೆಯಲಾಗಿದೆ. ಇದಕ್ಕೆ ಯಾರ ನೆರವನ್ನೂ ಕೇಳುತ್ತಿಲ್ಲ; ನಾವೆಲ್ಲ ಸೇರಿ ದೇಶಕ್ಕೆ, ವಿಶ್ವಕ್ಕೆ ಅಗತ್ಯವಾದ ಜ್ಞಾನದ ಹಣತೆ ಬೆಳಗಿಸೋಣ. ಈ ಜ್ಞಾನದ ಬೆಳಕಿನಿಂದ ಇಡೀ ವಿಶ್ವವೇ ಬೆಳಗುವಂತಾಗಬೇಕು. ವಿಶ್ವವಿದ್ಯಾಪೀಠವೇ ಸ್ವಯಂಮಾನ್ಯತೆ ಹೊಂದುವಂತಾಗಬೇಕು. ದೇಶಕ್ಕೆ, ವಿಶ್ವಕ್ಕೆ ಬೇಕಾದ ಅಪೂರ್ವ ಕಾರ್ಯವನ್ನು ಶ್ರೀಮಠ ಮಾಡಲು ಹೊರಟಿದೆ. ಸಮಾಜದ ಧನ ಹಾಗೂ ಜ್ಞಾನಿಗಳ ಜ್ಞಾನದಿಂದಲೇ ವಿವಿ ಪೀಠ ರೂಪುಗೊಳ್ಳಲಿದೆ. ಇದು ಯಾವುದೇ ಮಠದ ಆಸ್ತಿಯಲ್ಲ; ಇಡೀ ಸಮಾಜದ ಸಂಪತ್ತು ಎಂದು ಹೇಳಿದರು.

 

ಅಜ್ಞಾನವೇ ದೊಡ್ಡ ಶತ್ರು. ಮನುಷ್ಯನಿಗೆ ಪ್ರತ್ಯೇಕ ಜ್ಞಾನ ಹಾಗೂ ಜೀವನ ವಿಜ್ಞಾನಗಳು ಅಗತ್ಯ. ದೇಹದಿಂದ ಹಿಡಿದು ಆತ್ಮದ ವರೆಗೆ ಜ್ಞಾನ ನೀಡುತ್ತದೆ. ಜ್ಯೋತಿಷ, ಭೂಗೋಳದಂಥ ಅಪೂರ್ವ ಜ್ಞಾನಗಳಿವೆ. ಬೇರೆಬೇರೆ ದೃಷ್ಟಿಕೋನಗಳಿಂದ ನಮ್ಮ ಪೂರ್ವಜರು ಅದನ್ನು ಅರ್ಥ ಮಾಡಿಕೊಂಡಿದ್ದರು. ಆದರೆ ನಾವಿಂದು ಅವೆಲ್ಲವನ್ನೂ ಕಳೆದುಕೊಂಡಿದ್ದೇವೆ. ಭಾರತೀಯ ವಿದ್ಯೆ ಹಾಗೂ ಕಲೆಗಳ ಸಾಮೂಹಿಕ ನಾಶವಾಗಿದೆ. ಇರುವ ವಿದ್ಯೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು ಎಂದರು.

 

ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಭಾರತೀಯ ವಿದ್ಯೆಗಳ ಪುನಃಸ್ಥಾಪನೆ ಇದರ ಮುಖ್ಯ ಉದ್ದೇಶ. ಪ್ರತಿಯೊಂದು ವಿವಿಗಳೂ ತಮ್ಮದೇ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಮಗ್ರ ಭಾರತೀಯ ಜ್ಞಾನ ಪ್ರಜ್ವಲಿಸಲು ವಿಷ್ಣುಗುಪ್ತ ವಿಶ್ವವಿದ್ಯಾಪೀಠವೇ ತಲೆ ಎತ್ತಬೇಕಾಯಿತು ಎಂದು ಬಣ್ಣಿಸಿದರು. ಭಾರತೀಯ ವಿದ್ಯೆಯ ಮೂಲಕ ಭಾರತ ಪ್ರಕಾಶಮಾನವಾಗಬೇಕು. ಇದು ಇಡೀ ವಿಶ್ವಕ್ಕೆ ಬೆಳಕು ನೀಡಬಲ್ಲ, ಇಪ್ಪತ್ತೊಂದನೇ ಶತಮಾನದ ಮಹತ್ವದ ಐತಿಹಾಸಿಕ ಘಟನೆ ಇದು ಎಂದು ಅಭಿಪ್ರಾಯಪಟ್ಟರು. ತಮ್ಮಲ್ಲಿರುವ ಅಪೂರ್ವ ೫೦೦೦ ಕಲ್ಲಚ್ಚಿನ ಪ್ರತಿಗಳು, ತಾಳೆಗರಿ, ಅಮೂಲ್ಯ ಗ್ರಂಥಗಳನ್ನು ವಿವಿಗೆ ಸಮರ್ಪಿಸುವುದಾಗಿ ಪ್ರಕಟಿಸಿದರು.

 

ವಿದ್ವಾನ್ ಡಾ.ಎಸ್.ರಂಗನಾಥ್, ಪಾಶ್ಚಾತ್ಯರು ಭಾರತದತ್ತ ಮುಖ ಮಾಡಿರುವ ಹಂತದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳಬೇಕಾದ್ದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಪರಂಪರೆಯನ್ನು ಬಿಡದೇ, ಆಧುನೀಕತೆಯನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದರು.

 

ಹಿರಿಯ ವಕೀಲ ಕೆ.ಜಿ.ರಾಘವನ್, ಪತ್ರಕರ್ತ ವಿನಾಯಕ ಭಟ್ ಮೂರೂರು ಮಾತನಾಡಿದರು. ರಾಘವೇಂದ್ರ ಭಟ್ ಕ್ಯಾದಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮೋಹನ ಭಾಸ್ಕರ ಹೆಗಡೆ ನಿರೂಪಿಸಿದರು. ನ್ಯಾಷನಲ್ ಲಾ ಸ್ಕೂಲ್‌ನ ನಿವೃತ್ತ ಕುಲಪತಿ ಡಾ.ಜಯಗೋವಿಂದ್ ಸಭಾಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *