ಹಲಸು ಮೇಳ ಸಿದ್ಧತಾ ಚಿಂತನೆ ಸಂಪನ್ನ

ಸುದ್ದಿ

ಬದಿಯಡ್ಕ, 15.05.2019 : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ನಡೆದಯುತ್ತಿರುವ ಅನನ್ಯ ವಿಶಿಷ್ಟ ಯೋಜನೆಯಾದ ಕಾಮದುಘಾದ ಅಡಿಯಲ್ಲಿ ಮುನ್ನಡೆಯುತ್ತಿರುವ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆಗೆ ನಿರಂತರ ಆಹಾರ ವ್ಯವಸ್ಥೆಯನ್ನು ಪೂರೈಸುವ ಯೋಜನೆಗೆ ಪೂರಕವಾಗಿ ಹಲಸುಮೇಳವನ್ನು ಆಯೋಜಿಸಲಾಗುತ್ತಿದೆ. ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ “ಹಲಸು ಬೆಳೆಸಿ ಗೋವು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಲಿರುವ ಈ ಹಲಸು ಮೇಳದ ಯಶಸ್ಸಿಗಾಗಿ ಸಿದ್ಧತಾ ಸಮಾಲೋಚನಾ ಸಭೆಯು ಬದಿಯಡ್ಕ ಬೋಳುಕಟ್ಟೆಯಲ್ಲಿರುವ ಶ್ಯಾಮ್ ಭಟ್ಟ ಬೇರ್ಕಡವು ಇವರ ಸೀತಾಲಕ್ಷ್ಮೀ ನಿವಾಸದಲ್ಲಿ ಸಂಪನ್ನವಾಯಿತು. ಶಂಖನಾದವಾಗಿ ಗುರುವಂದನೆ ಗೋವಂದನೆಗಳೊಂದಿಗೆ ಆರಂಭವಾದ ಸಭಯ ಅಧ್ಯಕ್ಷತೆಯನ್ನು ಪ್ರೊ ಶ್ರೀಕೃಷ್ಣ ಭಟ್ಟ ಅವರು ವಹಿಸಿದ್ದರು. ಶ್ರೀ ಶಿವಪ್ರಸಾದ ವರ್ಮುಡಿ ಇವರು ಪ್ರಾಸ್ತಾವಿಕಮಾತುಗಳನ್ನಾಡಿ ಸಮಾರಂಭವನ್ನು ಸುಸೂತ್ರವಾಗಿ ನಡೆಸುವ ಬಗ್ಗೆ ಅನಿವಾರ್ಯ ಮಾಹಿತಿಗಳನ್ನಿತ್ತರು. ಹವ್ಯಕ ಮಹಾ ಮಂಡಲಾಧ್ಯಕ್ಷೆ ಈಶ್ವರೀ ಬೇರ್ಕಡವು ಇವರು ಸಭಾ ಸಂಯೋಜನೆ ಮಾಡಿದರು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ ಇವರು ಸಾಂದರ್ಭಿಕ ಮಾತುಗಳನ್ನಾಡಿ ವಿವಿಧ ವಲಯಗಳ ಜವಾಬ್ದಾರಿಯ ಬಗ್ಗೆ ಸಲಹೆಗಳನ್ನಿತ್ತರು. ಡಾ ವೈ ವಿ ಕೃಷ್ಣಮೂರ್ತಿ ಇವರು ಸಮಾರಂಭದ ಸಿದ್ಧತೆಗಳ ಬಗ್ಗೆ ವಿವರಣೆಗಳನ್ನಿತ್ತರು. ಮೇಳದಲ್ಲಿ ವಿಶೇಷವಾಗಿ ಬಹೂಪಯೋಗೀ ಹಲಸಿನ ಪ್ರಯೋಜನಗಳ ಬಗ್ಗೆ ಮಾಹಿತಿ, ತರಬೇತಿ, ಹಲಸು ಮಂಚೂರಿ, ನೂಡಲ್ಸ್, ಐಸ್ಕ್ರೀಮ್, ಬೇಳೆ ಬಿಸ್ಕಟ್, ಬನ್ಸ್ ಮೊದಲಾದ ಆಧುನಿಕ ಹಾಗೂ ಪರಂಪರೆಯ ಹಲಸು ತಿನಿಸುಗಳೇ ಮೊದಲಾದ ನೂರಕ್ಕೂ ಹೆಚ್ಚಿನ ಸಿದ್ಧ ಮತ್ತು ಪ್ರತ್ಯಕ್ಷ ತಯಾರೀ ಉತ್ಪನ್ನಗಳು, ವಿವಿಧ ತಳಿಯ ಹಲಸು ಸಸ್ಯಗಳು, ಯಂತ್ರೋಪಕರಣಗಳು ಇವುಗಳ ಪ್ರದರ್ಶಿನಿ ಮಾರಾಟ ವ್ಯವಸ್ಥೆಗೊಳಿಸಲು ತೀರ್ಮಾನಿಸಲಾಯಿತು. ಕೊಡಗಿನಿಂದ ಆರಂಭವಾಗಿ ಕಾಸರಗೋಡಿನ ತನಕ ಮುಳ್ಳೇರಿಯಾ ಹವ್ಯಕ ಮಂಡಲದ ವಿವಿಧ ವಲಯಗಳ ಹಲಸು ತಿನಿಸುಗಳು ಮೇಳದಲ್ಲಿ ಲಭ್ಯವಿರುವುದು ಗಮನಾರ್ಹ ವಿಚಾರವಾಗಿದೆ. ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರ್ಮುಖ, ದೇವಕಿ ಪನ್ನೆ, ಕೇಶಪ್ರಸಾದ ಎಡಕ್ಕಾನ, ಗೋವಿಂದ ಬಳ್ಳಮೂಲೆ ಮತ್ತು ವಿವಿಧ ವಲಯ ಪದಾಧಿಕಾರಿಗಳು, ಮಹಿಳೋದಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮಂಡಲದ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ ಅವರು ಅವಲೋಕನ ಮಾಡಿದರು. ಶಾಂತಿ ಮಂತ್ರ ಶಂಖನಾದದೊಂದಿಗೆ ಸಭೆ ಮುಕ್ತಾಯಾವಾಯಿತು

Author Details


Srimukha

Leave a Reply

Your email address will not be published. Required fields are marked *