9ನೇ ವಯಸ್ಸಿಗೇ ಸಂಗೀತ ಕಲೆಯತ್ತ ಆಕರ್ಷಣೆಗೊಂಡ ಈ ಪ್ರತಿಭೆ ಇಂದು ಸಂಗೀತ ಲೋಕದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸುತ್ತಿದ್ದಾನೆ.
ಕಲ್ಲಡ್ಕದ ನೀರಮೂಲೆಯ ಪ್ರವೀಣ್ ಕುಮಾರ್ ಮತ್ತು ಜಯಶ್ರೀ ನೀರಮೂಲೆ ದಂಪತಿಯ ಪುತ್ರ ಶ್ರೀಚರಣ ನೀರಮೂಲೆ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾನೆ.
4ನೇ ತರಗತಿಯಲ್ಲಿದ್ದಾಗ ಕುಲದೀಪ ಎಂ. ಪೈ ಅವರ ‘ವಂದೇ ಗುರು ಪರಂಪರಾಂ’ ಸರಣಿಯಲ್ಲಿ ಹಾಡುವ ಮೂಲಕ ಸಂಗೀತ ಪಯಣ ಆರಂಭಿಸಿದ ಶ್ರೀಚರಣ್, ಈವರೆಗೆ ವಿವಿಧ ಕಡೆಗಳಲ್ಲಿ 20ಕ್ಕೂ ಅಧಿಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿದ್ದಾನೆ.
ವಿದ್ವಾನ್ ಕಾಂಚನ ಈಶ್ವರ ಭಟ್ ಅವರಲ್ಲಿ ಸಂಗೀತಾಭ್ಯಾಸ ನಡೆಸುತ್ತಿರುವ ಈತ 2018 ರಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಶೇ.98% ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಸಾಧನೆ ಮಾಡಿದ್ದಾನೆ.
ಸಂಗೀತದ ಜೊತೆ ಜೊತೆಗೆ ಭಾವಗೀತೆ, ಲಘು ಸಂಗೀತ, ಶ್ಲೋಕ ಪಠಣ, ಸಂಸ್ಕೃತ ಕಂಠಪಾಠ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲೂ ನೂರಾರು ಪ್ರಶಸ್ತಿ ಪಡೆದಿದ್ದಾನೆ. ಶ್ರೀಸಂಸ್ಥಾನದವರಿಂದ ವಿಶೇಷ ಪುರಸ್ಕಾರಕ್ಕೂ ಈತ ಭಾಜನನಾಗಿದ್ದಾನೆ. ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಡೆಸಿಕೊಡುವ ‘ರಾಮಪದ’ ಕಾರ್ಯಕ್ರಮದಲ್ಲೂ ಹಾಡಿದ ಹೆಗ್ಗಳಿಕೆ ಈತನದ್ದು.ಮಗನ ಸಾಧನೆಯ ಕುರಿತು ಹೆಮ್ಮೆ ಇದೆ ಎನ್ನುತ್ತಾರೆ ಪ್ರವೀಣ್ ಕುಮಾರ್ ನೀರಮೂಲೆ.
ಸದ್ಯ ಉರುವಾಲು ಶ್ರೀಭಾರತೀ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಂಗೀತದಲ್ಲಿ ಕೂಡ ಮತ್ತಷ್ಟು ಸಾಧಿಸುವ ಹಂಬಲವನ್ನು ಹೊಂದಿದ್ದಾನೆ.