ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಚೆಸ್ ಆಟಕ್ಕೆ ಪಾದಾರ್ಪಣೆ ಮಾಡಿದ ಈ ಬಾಲಕ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಾಟಾಜೆಯ ಶ್ರೀರಾಮ – ಶಿಲ್ಪ ದಂಪತಿಗಳ ಪುತ್ರನಾದ ಸಾತ್ವಿಕ್ ಶಿವಾನಂದ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
2015 ನೇ ಜೂನ್ ತಿಂಗಳಲ್ಲಿ ವಿಧ್ಯಾಭ್ಯಾಸದ ಜೊತೆಗೆ ಚೆಸ್ ಆಡುವುದನ್ನು ಪ್ರಾರಂಭಿಸಿದ ಇವರು ಪುತ್ತೂರಿನಲ್ಲಿ ‘ಜೀನಿಯಸ್ ಚೆಸ್ ಸ್ಕೂಲ್’ನಲ್ಲಿ ಸತ್ಯಪ್ರಸಾದ್ ಕೋಟೆ ಹಾಗೂ ಆಶಾಕಾವೇರಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಾ 2016ರಲ್ಲಿ ಬೆಳ್ತಂಗಡಿಯಲ್ಲಿ ನಡೆದ ಫೆಡೆರೇಟೆಡ್ ಚೆಸ್ ಪಂದ್ಯಾಟದಲ್ಲಿ ಪ್ರಪ್ರಥಮ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವಿಕೆಯೊಂದಿಗೆ ಸ್ಪರ್ಧಾ ಜಗತ್ತಿಗೆ ಕಾಲಿಟ್ಟ ಬಾಲಪ್ರತಿಭೆ ಸಾತ್ವಿಕ್ ಶಿವಾನಂದ. ಇಲ್ಲಿಂದ ಅವರ ಯಶಸ್ಸಿನ ಪಯಣ ಸಾಗುತ್ತ ಬಂತು. ಅದೇ ವರ್ಷ 14 ರ ವಯೋಮಿತಿಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ, ಡಿಸೆಂಬರ್ ನಲ್ಲಿ ಪಯ್ಯನ್ನೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಫಿಡೆರೇಟೆಡ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಅನ್ ರೇಟೆಡ್ ಚಾಂಪಿಯನ್ ಆಗಿ ಗುರುತಿಸಿಕೊಂಡ ಹೆಗ್ಗಳಿಕೆ ಇವರದ್ದು. 1135 ರೇಟ್ ನೊಂದಿಗೆ ರೇಟೆಡ್ ಚೆಸ್ ಆಟಗಾರನಾಗಿ ಹೊರಹೊಮ್ಮಿದರು.
ಹೀಗೆ ತನ್ನ ಸಾಧನೆಯತ್ತ ಸಾಗುತ್ತ ಬೆಂಗಳೂರು, ಮಣಿಪಾಲ, ಗುಂಟೂರು, ವಿಜಯಪುರ, ಧಾರವಾಡ, ಶಿವಮೊಗ್ಗ ಹೀಗೆ ತನ್ನ ಪ್ರತಿಭೆಯನ್ನು ರಾಜ್ಯದೊಳಗೆ ಅಷ್ಟೇ ಸೀಮಿತಗೊಳಿಸದೇ ಹೈದರಾಬಾದ್, ಕೊಚ್ಚಿನ್, ಮುಂಬೈ, ದೆಹಲಿ, ರಾಂಬಿ, ಕೊಲ್ಕತ್ತಾ, ಚೆನ್ನೈ, ಬಿಹಾರ್, ತ್ರಿಶೂರ್, ಕ್ಯಾಲಿಕಟ್, ಕೊಟ್ಟಾಯಂ, ನಾಗರ್ ಕ್ಕೊಲ್ ಹೀಗೆ ಅನೇಕ ಸ್ಥಳಗಳಲ್ಲಿ ಆಟವಾಡಿ ವಿಶೇಷವಾಗಿ ರಾಷ್ಟ್ರಮಟ್ಟದ ಶಾಲಾಮಕ್ಕಳ 14ರ ವಯೋಮಿತಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿರುತ್ತಾರೆ. 15ರ ವಯೋಮಿತಿಯಲ್ಲಿ ರಾಷ್ಟ್ರಮಟ್ಟದ ಪ್ರಥಮ ಸ್ಥಾನ. 1300ರ ರೇಟಿಂಗ್ ನಲ್ಲಿ ರಾಷ್ಟ್ರಮಟ್ಟದ ಪ್ರಥಮ ಸ್ಥಾನ ಪಡೆದುಕೊಂಡು ಹೀಗೆ ಅನೇಕ ಪ್ರಶಸ್ತಿಗಳನ್ನು, ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ
.
17 ರ ವಯೋಮಿತಿಯ ಶಾಲಾ-ಮಕ್ಕಳ ಕರ್ನಾಟಕ ರಾಜ್ಯದ ಚಾಂಪಿಯನ್ ಆಗಿ ನಂತರ ಕರ್ನಾಟಕ ತಂಡದ ನಾಯಕನಾಗಿ ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ (SGFI) ಭಾಗವಹಿಸಿ ಕರ್ನಾಟಕ ತಂಡವನ್ನು ಮುನ್ನಡೆಸಿ ಹತ್ತನೆಯ ಸ್ಥಾನವನ್ನು ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಓದಿನಲ್ಲೂ ಮುಂದೆ ಇರುವ ಇವರು ಎಸ್.ಎಸ್.ಎಲ್.ಸಿಯಲ್ಲಿ ಶೇಕಡ 98.4% ಪಡೆದುಕೊಂಡಿದ್ದಾರೆ.
ಚೆಸ್ ಮತ್ತು ಓದಿನಲ್ಲಿ ಆಸಕ್ತಿ ಹೊಂದಿರುವ ಸಾತ್ವಿಕ್ ಶಿವಾನಂದ ವೈದ್ಯನಾಗಬೇಕೆಂಬ ಗುರಿ ನನ್ನದು ಎಂದು ಹೇಳುತ್ತಾರೆ.
ಪ್ರಸ್ತುತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಇವರಿಂದ ಇನ್ನಷ್ಟು ಸಾಧನೆ ಹೊರಹೊಮ್ಮುವಂತಾಗಲಿ , ತಂದೆ-ತಾಯಿ ಹಾಗೂ ಸಮಾಜಕ್ಕೆ ಇನ್ನಷ್ಟು ಕೀರ್ತಿ ತರುವಂತಾಗಲಿ ಎಂಬ ಶುಭಹಾರೈಕೆ ನಮ್ಮದು.