ಅಪರೂಪದ ಬಹುಮುಖ ಪ್ರತಿಭಾವಂತ ಅಭಿನವರಾಮ್

ಅಂಕುರ

10 ರ ಹರೆಯದ ಈ ಪೋರನಿಗೆ ಜಾದೂ ಅಂದರೆ ಅತ್ಯಂತ ಖುಷಿ. ಜಾದುವಿನ ಹಲವು ತಂತ್ರ, ಕೈಚಳಕ ಈತನಿಗೆ ಕರಗತವಾಗಿದೆ. ಜೊತೆಗೆ ಚಿತ್ರಕಲೆ, ಕ್ರಾಫ್ಟ್, ಕಲಿಕಾ ಮಾದರಿಯ ತಯಾರಿಕೆ, ವಿಜ್ಞಾನ ಮಾದರಿಯ ತಯಾರಿಕೆಯಲ್ಲೂ ಈತ ಎತ್ತಿದ ಕೈ!

ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪಾತೂರಿನ ಸದ್ಯ ಕೊಪ್ಪಳದ ನಿವಾಸಿ ಕೆ.ರಾಘವೇಂದ್ರ ಭಟ್ ಮತ್ತು ಪ್ರಮೀಳಾ ಭಟ್ ದಂಪತಿಯ ಪುತ್ರ ಕೆ.ಆರ್.ಅಭಿನವ್‌ರಾಮ್ ಭಟ್ ಈ ಬಹುಮುಖ ಪ್ರತಿಭಾವಂತ.

ಕೊಪ್ಪಳದ ಎಸ್.ಎಫ್.ಎಸ್‌. ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ, ಚಿತ್ರಕಲೆಯಲ್ಲಿ ಈಗಾಗಲೇ ಶಾಲಾ ಮಟ್ಟದಿಂದ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಗಮನಸೆಳೆದಿದ್ದಾನೆ.

ಕೊಪ್ಪಳದ ಚೈತ್ರದ ಚಿಗುರು ಕಲಾ ಅಕಾಡೆಮಿಯ ಚಿತ್ರಕಲಾ ಶಿಕ್ಷಕ ವೀರಯ್ಯ ಅವರಲ್ಲಿ ಕಳೆದ ಒಂದು ವರ್ಷಗಳಿಂದ ಚಿತ್ರಕಲಾ ಅಧ್ಯಯನ ನಡೆಸುತ್ತಿರುವ ಅಭಿನವರಾಮ್, ಸೆಪ್ಟೆಂಬರ್‌ನಲ್ಲಿ ಡೆಹ್ರಾಡೂನ್‌ನ ಕಲಾ ಅನಂತ ಆರ್ಟ್ಸ್ ಸಂಸ್ಥೆ ನಡೆಸಿದ ರಾಷ್ಟ್ರೀಯ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಲಾ ಅನಂತ ಪ್ರಶಸ್ತಿ ಪಡೆದಿದ್ದಾನೆ.

ಜಾದೂ ಕಲೆ ಈತನ ಇನ್ನೊಂದು ವಿಶೇಷ ಹವ್ಯಾಸ. ಲಾಕ್‌ಡೌನ್ ಅವಧಿಯಲ್ಲಿ ಸಮಯದ ಸದುಪಯೋಗಪಡಿಸಿಕೊಳ್ಳಲು ಕಂಡುಕೊಂಡ ಒಂದು ಮಾರ್ಗ ಎಂದರೂ ತಪ್ಪಿಲ್ಲ. ತಂದೆ ರಾಘವೇಂದ್ರ ಭಟ್ ಅವರೇ ಈತನ ಜಾದೂ ಗುರು. ಅಭಿನವನ ಜಾದೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯನ್ನು ಗಳಿಸಿದ್ದು ಗಮನಾರ್ಹ. ವಿಶೇಷವೆಂದರೆ ಇವನ ಈ ಎಲ್ಲಾ ಕಲಿಕೆಗೆ ತಾಯಿ ಪ್ರಮೀಳಾ ಭಟ್ ಮತ್ತು ಸಹೋದರಿ ರಂಜಿತಾ ಭಟ್ ಇವರೇ ಮಾರ್ಗದರ್ಶಕರು!

ಮನೆ ಭದ್ರತೆ (ಹೋಂ ಸೆಕ್ಯುರಿಟಿ), ಟಬ್‌ನಲ್ಲಿ ಓಡುವ ಕಿರು ಬೋಟ್, ಸೂರ್ಯನ ಶಾಖದಿಂದ ತಿರುಗುವ ಫ್ಯಾನ್, ವೈಬ್ರೇಟಿಂಗ್ ಕಾರ್… ಹೀಗೆ ಹಲವು ವಿಜ್ಞಾನದ ಮಾದರಿಗಳನ್ನೂ ಈತ ಸಿದ್ದಪಡಿಸಿ ಸೈ ಎನಿಸಿಕೊಂಡಿದ್ದಾನೆ. ಜಾದೂ ಅಭ್ಯಾಸ, ವಿಜ್ಞಾನದ ಮಾದರಿಯ ರಚನೆ, ಚಿತ್ರಕಲೆ, ಕ್ರಾಫ್ಟ್ ವರ್ಕ್ ಇವು ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿಯ ಗೀಳಿನಿಂದ ಹೊರಬರಲು ಹಾಗೂ ಸಮಯದ ಸದುಪಯೋಗಕ್ಕೆ ಒಂದು ಉತ್ತಮ ತಂತ್ರವಾಗಿದೆ. ಇದು ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಬುದ್ಧಿಯ ಚುರುಕನ್ನು ಹೆಚ್ಚಿಸಲು ಉತ್ತಮ ಮಾರ್ಗ. ಈ ನಿಟ್ಟಿನಲ್ಲಿ ಮಗನ ಸಾಧನೆಯ ಕುರಿತು ಹೆಮ್ಮೆ ಇದೆ ಎನ್ನುತ್ತಾರೆ ತಂದೆ ಕೆ.ರಾಘವೇಂದ್ರ ಭಟ್.

ಮೂಲ ಶಿಕ್ಷಣವನ್ನು ಮುಂದುವರಿಸುವ ಜೊತೆಗೆ ಜಾದೂ ಕಲೆಯ ಅಭ್ಯಾಸ, ವಿಜ್ಞಾನ ಮಾದರಿಯ ತಯಾರಿಕೆ, ಕ್ರಾಫ್ಟ್ ಕಲಿಕೆಯನ್ನು ಮುಂದುವರಿಸಿ ಶಾಲೆಯಲ್ಲಷ್ಟೆ ಅಲ್ಲದೇ, ಅವಕಾಶ ಸಿಕ್ಕ ಕಡೆ ಪ್ರದರ್ಶಿಸಿ ಕಿರು ಪ್ರತಿಭೆಯನ್ನು ಮುಂದುವರಿಸುವುದೇ ನನ್ನ ಗುರಿ ಎನ್ನುತ್ತಾನೆ ಕೆ.ಆರ್‌.ಅಭಿನವ್‌ರಾಮ್ ಭಟ್.

Author Details


Srimukha

Leave a Reply

Your email address will not be published. Required fields are marked *