ಚಿಕ್ಕಂದಿನಿಂದಲೂ ಈಕೆಗೆ ಸಂಗೀತವೆಂದರೆ ಅದೇನೋ ಆಕರ್ಷಣೆ. ಅಂದೇ ನಾನು ಕೂಡಾ ಪ್ರಸಿದ್ಧ ಗಾಯಕಿಯಾಗಬೇಕೆಂದು ನಿರ್ಧರಿಸಿದ್ದ ಈ ಪ್ರತಿಭೆ ಇಂದು ತನ್ನ ಶ್ರದ್ಧೆ, ಸತತ ಅಭ್ಯಾಸ, ಗುರುಗಳ ಮಾರ್ಗದರ್ಶನದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾಳೆ.
ಬೆಂಗಳೂರಿನ ನಿವಾಸಿ ರಾಮಕೃಷ್ಣ ಭಟ್ ಮತ್ತು ಜಯಲಕ್ಷ್ಮಿ ಭಟ್ ದಂಪತಿಯ ಸುಪುತ್ರಿ ದೀಪ್ತಿ ಆರ್. ಭಟ್ ಈ ಸಂಗೀತ ಸಾಧಕಿ.
ಸುಮಧುರ ಸಿರಿಕಂಠ ದೀಪ್ತಿಗೆ ದೈವದತ್ತವಾಗಿ ಒಲಿದ ವರ. ರಾಮಚಂದ್ರಾಪುರ ಮಠದ ಶ್ರೀಭಾರತೀ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದ ಇವಳು ಆ ದಿನಗಳಲ್ಲೇ ಸಂಗೀತ ಶಾರದೆಗೆ ಶರಣೆಂದಳು. ಅಲ್ಲದೇ ಶಿಕ್ಷಕರ ಮಾರ್ಗದರ್ಶನದಲ್ಲಿ ಅಂದಿನಿಂದಲೂ ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಸದ್ಯ ವಿ.ರಘುನಂದನ್ ಭಟ್ ಮತ್ತು ಡಾ.ಹರೀಶ್ ಹೆಗಡೆ ಅವರಲ್ಲಿ ಹಿಂದೂಸ್ತಾನಿ ಸಂಗೀತ, ವಿ.ಗಣೇಶ ದೇಸಾಯಿ ಅವರಲ್ಲಿ ಸುಗಮ ಸಂಗೀತ ಹಾಗೂ ಸೂರ್ಯ ಉಪಾಧ್ಯಾಯ ಅವರಲ್ಲಿ ಹಾರ್ಮೋನಿಯಂ ಅಭ್ಯಾಸ ನಡೆಸುತ್ತಿದ್ದಾಳೆ.
¶ ರಾಮಕಥಾ ಸಹಗಾಯಕಿ:
ಶ್ರೀಮಠದ ವಿದ್ಯಾಸಂಸ್ಥೆಯಿಂದ ಬೆಸೆದ ಮಠದ ಬಾಂಧವ್ಯ ಮಠದ ಮಗುವಾಗಿ ಗಟ್ಟಿಯಾಗಿ ಬೇರೂರಿದೆ. ರಾಘವೇಶ್ವರ ಶ್ರೀಗಳು ನಡೆಸಿಕೊಡುವ ರಾಮಕಥೆಯಲ್ಲಿ ಸಹ ಗಾಯಕಿಯಾಗಿ ಗುರುತಿಸಿಕೊಂಡಿರುವುದಲ್ಲದೇ, ಮಠದ ರಾಮಪದ, ಕೃಷ್ಣಕಥೆ, ಧಾರಾ ರಾಮಾಯಣ, ಭಾಗವತ ಮೊದಲಾದ ಕಾರ್ಯಕ್ರಮಗಳಲ್ಲಿ ಹಾಡಿದ ಹೆಗ್ಗಳಿಕೆ ದೀಪ್ತಿಯದ್ದು.
¶ ವಿವಿಧ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ:
ಪ್ರಾಥಮಿಕ ಶಾಲಾ ದಿನಗಳಿಂದಲೇ ಸಂಗೀತ ಪಯಣವನ್ನು ಆರಂಭಿಸಿದ ದೀಪ್ತಿ, ಇಂದು ಸಂಗೀತದಲ್ಲಿ ತನ್ನದೇ ಆದ ಗುರುತನ್ನು ಅಚ್ಚೊತ್ತಿದ್ದಾಳೆ. ಇಂಟರ್‌ಸ್ಕೂಲ್ ಸ್ಪರ್ಧೆ, ಪ್ರತಿಭಾ ಕಾರಂಜಿ, ರಾಜ್ಯ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಮೂರನೇ ಸ್ಥಾನ, ಇಸ್ಕಾನ್ ಹೆರಿಟೇಜ್ ಫೆಸ್ಟ್‌ನಲ್ಲಿ ಪ್ರಥಮ, ಗೋಪಾಲನ್ ಮಾಲ್ ಸೂಪರ್ ಸಿಂಗರ್‌ನಲ್ಲಿ ದ್ವಿತೀಯ, 92.7 ಬಿಗ್ ಎಫ್‌ಎಂ ಗೋಲ್ಡನ್ ವೈಸ್‌ನಲ್ಲಿ ದ್ವಿತೀಯ, ಭಾರತ ವಿಕಾಸ ಪರಿಷತ್ ನಡೆಸುವ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾಳೆ. ಆಳ್ವಾಸ್ ನುಡಿಸಿರಿ, ಬೆಂಗಳೂರು ಗಣೇಶ ಉತ್ಸವ, ವಿಶ್ವ ಹವ್ಯಕ ಸಮ್ಮೇಳನ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಹಾಡಿದ್ದಾಳೆ. ಸಂಗೀತದ ಜೊತೆಗೆ ಓದನ್ನು ಸಂಭಾಳಿಸಿಕೊಂಡು ಬರುತ್ತಿರುವ ಈಕೆ, ಎಸ್‌ಎಸ್‌ಎಲ್‌ಸಿಯಲ್ಲಿ 94% ಅಂಕ ಪಡೆದು ಉತ್ತಮ ವಿದ್ಯಾರ್ಥಿ ಪಾರಿತೋಷಕಕ್ಕೂ ಭಾಜನಳಾಗಿದ್ದಾಳೆ. ಪಿಯುಸಿಯಲ್ಲೂ 95% ಅಂಕ ದಾಖಲಿಸಿದ್ದು, “ತನ್ನ ಪ್ರತಿಯೊಂದು ಗೆಲುವಿಗೂ ರಾಮದೇವರು ಮತ್ತು ಶ್ರೀಸಂಸ್ಥಾನದವರ ಆಶೀರ್ವಾದದೇ ಕಾರಣ. ಅವರ ಪ್ರವಚನಗಳು, ಅವರು ತೋರುವ ಮಾರ್ಗದರ್ಶನ ಇದು ನನ್ನ ಸಾಧನೆಗೆ ಶಕ್ತಿ ತುಂಬುತ್ತಿದೆ” ಎನ್ನುತ್ತಾಳೆ ದೀಪ್ತಿ ಭಟ್ಟ.
¶ ಅಂತರರಾಷ್ಟ್ರೀಯ ಭಜನ್ ಸ್ಪರ್ಧೆಯಲ್ಲಿ ಪ್ರಥಮ:
ಸುಪ್ರಸಿದ್ಧ ಗಾಯಕ ಸುರೇಶ್ ವಾಡ್ಕರ್ ಸಾರಥ್ಯದ ಆಜಿವಾಸನ್ ಮ್ಯೂಸಿಕ್ ಅಕಾಡೆಮಿ ನಡೆಸುವ I am the Next Superstar (ಐ ಆಮ್ ದ ನೆಕ್ಸ್ಟ್ ಸೂಪರ್‌ಸ್ಟಾರ್) ಅಂತರರಾಷ್ಟ್ರೀಯ ಮಟ್ಟದ ಭಜನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವಿನ ನಗೆಯನ್ನು ಬೀರಿದ್ದಾಳೆ. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನಸೆಳೆದಿದ್ದಾಳೆ. ಈ ಸ್ಪರ್ಧೆಯ ಮೂಲಕ ಗಾಯಕ ಸುರೇಶ್ ವಾಡ್ಕರ್, ಹರಿಹರನ್, ಅನೂಪ್ ಜಲೋಟಾ ಹಾಗೂ ಮಾಲಿನಿ ಅವಸ್ಥಿ ಅವರನ್ನು ಭೇಟಿಯಾಗಿ ಆಜಿವಾಸನ್ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ಪಡೆದಿದ್ದಾಳೆ.
ಖ್ಯಾತ ಸಂಗೀತ ನಿರ್ದೇಶಕ ಡಾ.ಕಿರಣ ತೋಟಂಬೈಲ್ ಅವರ ಪ್ರತಾಪವತ್ ಸ್ಟೂಡಿಯೋ ನಡೆಸಿದ ‘ಸ್ವರಸಮರ ಇನ್ ದಿ ಸ್ಪಾಟ್ ಲೈಟ್’ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಅವರ ಮುಂದಿನ ಚಿತ್ರಕ್ಕೆ ಹಿನ್ನೆಲೆ ಗಾಯನದ ಅವಕಾಶ ಈಕೆಗೆ ಒದಗಿಬಂದಿದೆ.
ಸದ್ಯ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ತಂದೆ ತಾಯಿಯ ನಿರಂತರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಕೂಡ ನನ್ನ ಸಾಧನೆಗೆ ಕಾರಣ ಎನ್ನುತ್ತಾಳೆ ದೀಪ್ತಿ. ಈಕೆಯ ಸಂಗೀತ ಪಯಣ ಸಪ್ತಸಾಗರದಾಚೆಗೂ ಹಬ್ಬಲಿ ಎನ್ನುವುದು ಆಶಯ.