ಅಪರೂಪದ ಮಹಿಳಾ ಕ್ರೀಡಾ ಸಾಧಕಿ ದಿವ್ಯಭಾರತಿ

ಅಂಕುರ

ಕಾಸರಗೋಡು ಕ್ರೀಡೆ, ಕಲೆ, ಸಂಸ್ಕೃತಿಗಳನ್ನು ಒಳಗೊಂಡ ವಿಶಿಷ್ಟ ನಾಡು. ಚಿಕ್ಕವಯಸ್ಸಿನಲ್ಲೇ ಕ್ರೀಡೆಯ ಕುರಿತು ಆಸಕ್ತಿ ಬೆಳೆಸಿಕೊಂಡು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರ ಪೈಕಿ ದಿವ್ಯಭಾರತಿ ಕೆ. ಕೂಡಾ ಒಬ್ಬರು.

ಕಾಸರಗೋಡು ಜಿಲ್ಲೆಯ ಕುರುಡುಪದವು ಸಮೀಪದ ‌ಕುರಿಯ ಗ್ರಾಮದ ವಿಜಯ ವಿಠಲ ಕೆ. ಮತ್ತು ಸಲಿಲ ಕುಮಾರಿ ವಿ.ಕೆ. ದಂಪತಿಯ ಪುತ್ರಿ ದಿವ್ಯಭಾರತಿ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು.

ಕುರುಡುಪದವು AUPS  ಶಾಲೆಯಲ್ಲಿ ಶೈಕ್ಷಣಿಕ ವ್ಯಾಸಂಗವನ್ನು ಪ್ರಾರಂಭಿಸಿದ ಇವರು, 6 ನೇ ತರಗತಿಯಿಂದನೇ ಕೇರಳ ರಾಜ್ಯದ ವಲಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಮುಂದೆ 8 ತರಗತಿಯಲ್ಲಿ ವಲಯ ಮಟ್ಟದಿಂದ ರಾಜ್ಯಮಟ್ಟಕ್ಕೂ ಆಯ್ಕೆಯಾದರು. ಮಂಜೇಶ್ವರ ಉಪ ಜಿಲ್ಲಾ ಮಟ್ಟದ ತ್ರಿಪಲ್ ಜಂಪ್, ಚಕ್ರ ಎಸೆತ, ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.32ನೇ ಅಖಿಲ ಭಾರತ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದ ಇವರು, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಟೆನ್ನಿಸ್ ಕ್ರಿಕೆಟ್ ಮುಂತಾದ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಇವರ ಕ್ರೀಡಾ ಸಾಧನೆಗೆ ಹಲವು ಪ್ರಶಸ್ತಿಗಳೂ ಸಂದಿವೆ.

ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದು:
ಕ್ರೀಡಾ ರಂಗದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ದಿವ್ಯಭಾರತಿ, ಸಾಂಸ್ಕೃತಿಕ ರಂಗದಲ್ಲೂ ಹೆಸರನ್ನು ಅಚ್ಚೊತ್ತಿದ್ದಾರೆ. ಹಿಂದಿ ಪ್ರಬಂಧ, ಭಾಷಣ, ಸಮೂಹ ಗಾಯನ, ದೇಶಭಕ್ತಿ ಗೀತೆ… ಹೀಗೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಸೆಳೆದ ಹೆಗ್ಗಳಿಕೆ ದಿವ್ಯಭಾರತಿ ಅವರದ್ದು.

ನಾಟಕ, ಬೀದಿ ನಾಟಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಭಾಗವಹಿಸುವುದು ಇವರ ಇತರ ಹವ್ಯಾಸಗಳು. ಸುಳ್ಯ ಪೊಲೀಸ್ ಸ್ಟೇಷನ್‌ನಲ್ಲಿ 15 ದಿನಗಳ ಕಾಲ ಇಂಟರ್ನ್‌ಶಿಪ್ ಮಾಡಿದ ಅನುಭವವನ್ನೂ ಹೊಂದಿದ್ದಾರೆ.

ಸದ್ಯ, ಮಂಗಳೂರಿನ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಕಾಲೇಜಿನಲ್ಲಿ ಬಿಎ ಅಪರಾಧಶಾಸ್ತ್ರ ವಿಭಾಗದ ವ್ಯಾಸಂಗ ಮಾಡುತ್ತಿದ್ದು, ಮುಂದೆ ವಿಧಿವಿಜ್ಞಾನ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡುವ ಗುರಿಯನ್ನು ಹೊಂದಿದ್ದಾರೆ.

ನನ್ನ ಎಲ್ಲಾ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಸಾಧನೆಗೆ ತಂದೆ, ತಾಯಿ, ಗುರುಹಿರಿಯರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ಕಾರಣ. ಮುಂದೆ ಓದಿನ ಜೊತೆಗೆ ಕ್ರೀಡಾ ರಂಗದಲ್ಲೂ ಇನ್ನಷ್ಟು ಸಾಧಿಸುವ ಕನಸಿದೆ” ಎನ್ನುತ್ತಾರೆ ದಿವ್ಯಭಾರತಿ ಕೆ.

Leave a Reply

Your email address will not be published. Required fields are marked *