ಚದುರಂಗ ಚತುರೆ ದೀಪ್ತಿಲಕ್ಷ್ಮೀ

ಅಂಕುರ

ದೀಪ್ತಿಲಕ್ಷ್ಮೀ ಕನ್ನೆಪ್ಪಾಡಿ, ಇದು ಪುತ್ತೂರು ಭಾಗದಲ್ಲಿ ಆಗ್ಗಿದ್ದಾಂಗೆ ಕೇಳಿ ಬರುವ ಹೆಸರು. ಚದುರಂಗ (ಚೆಸ್) ಆಟದಲ್ಲಿ ಆಗ್ಗಾಗೆ ತನ್ನದೇ ಆದ ಹೊಸ ಇತಿಹಾಸ ಬರೆಯುತ್ತಿರುವ ಅಸಾಧಾರಣ ಗ್ರಾಮೀಣ ಪ್ರತಿಭೆ. ಪುತ್ತೂರು ತಾಲೂಕಿನ ಚಿಕ್ಕಮುಂಡೇಲು ನಿವಾಸಿ ಶಂಕರಪ್ರಸಾದ್ ಮತ್ತು ಉಷಾ ಪ್ರಸಾದ್ ದಂಪತಿಯ ಮಗಳು ದೀಪ್ತಿಲಕ್ಷ್ಮೀ ಈಗಾಗಲೇ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಈವರೆಗೆ ಹಲವಾರು ಟೂರ್ನಿಯಲ್ಲಿ ಭಾಗವಹಿಸಿದ್ದಾಳೆ.

ಅಣ್ಣನೇ ಸ್ಪೂರ್ತಿ:
ಸಣ್ಣವಳಿದ್ದಾಗ ಅಣ್ಣ ಶ್ಯಾಮ್‌ಪ್ರಸಾದ್‌ನೊಂದಿಗೆ ಪ್ರತಿದಿನ ಚೆಸ್ ಆಡುತ್ತಿದ್ದ ದೀಪ್ತಿಲಕ್ಷ್ಮೀಗೆ, ದಿನ ಕಳೆದಂತೆ ಆಟದ ಬಗ್ಗೆ ಆಸಕ್ತಿ ಬೆಳೆಯಿತು. ಇದಕ್ಕೆ ಪಾಲಕರು ಸಾಥ್ ನೀಡಿದರು. ಅಣ್ಣ ಚೆಸ್ ಆಡುವುದನ್ನು ನಿಲ್ಲಿಸಿದರೂ ದೀಪ್ತಿಲಕ್ಷ್ಮೀ ಮಾತ್ರ ತರಬೇತಿ ಪಡೆಯಲು ಪ್ರಾರಂಭಿಸಿದಳು. ಬಳಿಕ ಪುತ್ತೂರಿನ ಜೀನಿಯಸ್ ಚೆಸ್ ಸ್ಕೂಲಿನ ನಿರ್ದೇಶಕ ಸತ್ಯಪ್ರಸಾದ್ ಕೋಟೆ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ. ೨೦೧೫ ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗದಲ್ಲಿ ನಡೆಸಿದ ರಾಜ್ಯ ಪ್ರಾಥಮಿಕ ಶಾಲಾ ಬಾಲಕಿಯರ ಚೆಸ್‌ನಲ್ಲಿ ದಕ್ಷಿಣಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವ ಮೂಲಕ ದೀಪ್ತಿಲಕ್ಷ್ಮೀ ತನ್ನ ಸ್ಪರ್ಧೆಯನ್ನು ಪ್ರಾರಂಭಿಸಿದಳು. ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಚೆಸ್ ಸ್ಪರ್ಧೆಯಲ್ಲಿ ಸತತ ನಾಲ್ಕು ವರ್ಷಗಳಿಂದ ವಲಯ ಮಟ್ಟದಿಂದ ರಾಜ್ಯಮಟ್ಟದವರೆಗೆ ಎಲ್ಲಾ ವಿಭಾಗಗಳಲ್ಲೂ ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾಳೆ. ಎರಡು ಬಾರಿ ಕರ್ನಾಟಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದು ರಾಜ್ಯ ತಂಡದ ನಾಯಕಿಯಾಗಿ ರಾಷ್ಟ್ರಮಟ್ಟದ ಎಸ್.ಜಿ.ಎಫ್.ಐ. ಚೆಸ್ ಕ್ರೀಡೆಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಈಕೆಯದ್ದು.

೨೦೧೭ ರಲ್ಲಿ ಮಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಚೆಸ್ ಸ್ಪರ್ಧೆಯಲ್ಲೂ ಈಕೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಳು. ಕರ್ನಾಟಕ ತಂಡದ ೧೪ ವರ್ಷದೊಳಗಿನ ಬಾಲಕಿಯರ ವಿಭಾಗಕ್ಕೆ ನಾಯಕಿಯಾಗಿ ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಎಸ್.ಜಿ.ಎಫ್.ಐ. ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿ ಉತ್ತಮ ಆಟಗಾರ್ತಿ ಎಂಬ ಹೆಗ್ಗಳಿಕೆ ಕೂಡ ಪಡೆದಿದ್ದಳು. ಕರ್ನಾಟಕ ಮಾತ್ರವಲ್ಲದೇ ಕೇರಳ, ಗೋವಾ, ಚೆನ್ನೈ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ.

ಬಹುಮುಖ ಪ್ರತಿಭೆ:
ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ೧೦ ನೇ ತರಗತಿಗೆ ಪ್ರವೇಶ ಪಡೆದಿರುವ ಈಕೆ ಕೇವಲ ಚೆಸ್ ಆಟಕ್ಕೆ ಮಾತ್ರ ಸೀಮಿತವಾಗದೇ, ಶಾಲೆಗಳಲ್ಲಿ ನಡೆಯುವ ಭಾಷಣ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳಲ್ಲೂ ಛಾಪು ಮೂಡಿಸಿದ್ದಾಳೆ. ವಿ. ವಿದ್ಯಾ ಈಶ್ವರಚಂದ್ರ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಗಾನಸಿರಿ ಕಿರಣ್ ಕುಮಾರ ಅವರಿಂದ ಸುಗಮ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಪ್ರಸ್ತುತ ೧೪೪೦ ಅಂತಾರಾಷ್ಟ್ರೀಯ ಚೆಸ್ ರೇಟಿಂಗ್ ಹೊಂದಿರುವ ದೀಪ್ತಿಲಕ್ಷ್ಮಿಗೆ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥ್ ಆನಂದ ಮುಂತಾದವರ ಜೊತೆ ಆಡಬೇಕೆಂಬ ಮಹದಾಸೆ ಇದೆ.

ಕಾಮನ್‌ವೆಲ್ತ್‌ನಲ್ಲಿ ಸಾಧನೆ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಈ ಪ್ರತಿಭೆ ೨೦೧೮ ರಲ್ಲಿ ದೆಹಲಿಯಲ್ಲಿ ನಡೆದ ೫೪ ರಾಷ್ಟ್ರಗಳ ಕಾಮನ್‌ವೆಲ್ತ್ ಚೆಸ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿ ೧೧ನೇ ಸ್ಥಾನ ಪಡೆದಿದ್ದಾಳೆ. ಇದೊಂದು ಚೆಸ್ ಪಯಣದಲ್ಲಿ ಅವಿಸ್ಮರಣೀಯ ಕ್ಷಣ ಎಂದು ಹೆಮ್ಮೆಯಿಂದ ಹೇಳುತ್ತಾಳೆ ದೀಪ್ತಿಲಕ್ಷ್ಮೀ. ಮಗಳಿಗೆ ತುಂಬಾ ಆಸಕ್ತಿ ಇರುವ ಕಾರಣ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಆದರೆ ಇದು ದುಬಾರಿ ಆಟ. ಸರ್ಕಾರದ ಮಟ್ಟದಿಂದಲೂ ಸಹಾಯ ಅಗತ್ಯ. ಇಲ್ಲದಿದ್ದರೆ ಇಂತಹ ಪ್ರತಿಭೆಗಳು ಮುಂದೆ ಬರುವುದೇ ಕಷ್ಟ ಎನ್ನುತ್ತಾಎ ದೀಪ್ತಿಲಕ್ಷ್ಮೀಯ ತಾಯಿ ಉಷಾ ಪ್ರಸಾದ್.

Leave a Reply

Your email address will not be published. Required fields are marked *