ಬೆಳೆಯುವ ಸಿರಿ ಮೊಳಕೆಯಲ್ಲಿ

ಅಂಕುರ

 

ಕಲೆಯು ಭಾವನೆಗಳ ಪ್ರತಿಬಿಂಬ. ಎಳೆವಯಸ್ಸಿನಲ್ಲಿಯೇ ಕಲೆ ಸಂಸ್ಕೃತಿಯೆಡೆಗೆ ಇರುವ ಒಲುಮೆ ಮನುಜನನ್ನು ಎತ್ತರಕ್ಕೆ ಏರಿಸುವಲ್ಲಿ ಏಣಿಯಂತೆ ಸಹಕಾರಿಯಾಗುತ್ತದೆ. ತನ್ನ ಎಳವೆಯಲ್ಲಿ ಮನಸ್ಸಿಗೆ ಮುದ ನೀಡುವ ಕಲೆಯೆಡೆಗೆ ಅಭಿರುಚಿ ಬೆಳೆಸಿಕೊಳ್ಳುತ್ತಿರುವ ಪುಟ್ಟ ಪ್ರತಿಭೆ ಅಭಿರಾಮ್.ಎಸ್.ಭಟ್.

ಈತ ಬೆಂಗಳೂರು ನಿವಾಸಿಗಳಾದ ಶ್ರೀಯುತ ಸುರೇಶ್ ಕುಕ್ಕಾಜೆ ಹಾಗೂ ಶ್ರೀಮತಿ ಗೀತಾಂಜಲಿ ದಂಪತಿಯ ಸುಪುತ್ರ. ಪ್ರಸ್ತುತ ಪೂರ್ಣಪ್ರಜ್ಞಶಾಲೆಯಲ್ಲಿ ಎರಡನೇ ತರಗತಿಯಂದ ವೈಶಿಷ್ಟ್ಯ ಶ್ರೇಣಿಯೊಂದಿಗೆ ಉತ್ತೀರ್ಣನಾಗಿರುತ್ತಾನೆ.

ಬಾಲ್ಯದಿಂದಲೇ ತನ್ನ ತಾಯಿಯಿಂದ ಕಥೆಗಳನ್ನು ಕೇಳುತ್ತಾ ಚಿಗುರುತ್ತಿರುವ ಅಭಿರಾಮ ತನ್ನೆದುರಿಗೆ ಇರುವವರು ಮಂತ್ರಮುಗ್ಧರಾಗುವ ಹಾಗೆ ಕಥೆ ಹೇಳುವುದರಲ್ಲಿ ನಿಸ್ಸೀಮನಾಗುತ್ತಿದ್ದಾನೆ. ಪೂರ್ಣಪ್ರಜ್ಞ ಶಾಲೆಯಲ್ಲಿ ಆಯೋಜಿಸಲಾದ ಕನ್ನಡ ಹಾಗೂ ಇಂಗ್ಲಿಷ್ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ ಹಾಗೂ 2020 ರ ಲಾಕ್ ಡೌನ್ ಸಮಯದಲ್ಲಿ “ನಿಯತಿ ನೃತ್ಯನಿಕೇತನ” ಸಂಸ್ಥೆಯಿಂದ ಆಯೋಜಿಸಲಾದ “ಚಿಣ್ಣರ ಬೆಳಕು” ಎಂಬ ರಾಮಾಯಣ ಪಾತ್ರಗಳನ್ನು ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ ಎನ್ನುವುದು ಆತನೊಳಗಿರುವ ಕಥೆಯ ಕೇಳುಗನ ಆಸಕ್ತಿಗೆ ಸಾಕ್ಷಿ. ಹಾಗೂ ಮಹಾವಿಷ್ಣುವಿನ ದಶಾವತಾರದ ಕಥೆಗಳನ್ನು ಸುಲಲಿತವಾಗಿ ಹೇಳುವ ಈ ಪುಟಾಣಿ ಅದ್ಭುತ ಪ್ರತಿಭೆಯೇ ಸರಿ.

ತನ್ನ ಹವ್ಯಾಸದ ಬಗೆಗೆ ಕೇಳಿದ ಕೂಡಲೇ ಉತ್ಸಾಹದಿಂದ ಅನುಕ್ಷಣ ಚಿತ್ರಕಲೆ ಎಂದುತ್ತರಿಸುವ ಮುದ್ದು ಪುಟಾಣಿ ಅಭಿರಾಮ ಶ್ರೀರಾಮಾಯಣ ಹಕ್ಕಿನೋಟ ಎಂಬ ಸರಣಿಗೆ ತಾನೇ ಆಲೋಚಿಸಿ 70ಕ್ಕೂ ಹೆಚ್ಚು ರಾಮಾಯಣ ಪಾತ್ರಗಳನ್ನು ಚಿತ್ರಿಸಿರುವುದು ಈತನ ಹೆಗ್ಗಳಿಕೆ. ಅಷ್ಟಲ್ಲದೆ ಹಲವಾರು ಪೌರಾಣಿಕ ಪಾತ್ರಗಳನ್ನು ಚಿತ್ರಿಸಿರುತ್ತಾನೆ. ರಾಮಾಯಣ ಪಾತ್ರಗಳ ಚಿತ್ರ ಸರಣಿ, ಶ್ರೀಸಂಸ್ಥಾನದವರು ಗೋವಿನೊಂದಿಗಿರುವ ಚಿತ್ರಗಳನ್ನು ಚಿತ್ರಿಸಿ ಶ್ರೀಸಂಸ್ಥಾನದವರ ಆಶೀರ್ವಾದಕ್ಕೆ ಪಾತ್ರನಾಗಿರುತ್ತಾನೆ.

ಪ್ರಾಣಿಗಳ ಚಿತ್ರವನ್ನು ಬಿಡಿಸುವುದರಲ್ಲಿ ಆಸಕ್ತಿ ಹೊಂದಿರುವ ಈತ ಸಿಂಹದ ಚಿತ್ರ ಬಿಡಿಸುವುದು ತನಗೆ ಅತಿಪ್ರಿಯ ಎಂದು ನಗು-ನಗುತ್ತಾ ಹೇಳುತ್ತಾನೆ. ಶಾಲೆಯಿಂದ ನಡೆಸಲ್ಪಟ್ಟ ಚಿತ್ರರಚನೆ ಸ್ಪರ್ಧೆಯಲ್ಲಿ ಪ್ರಥಮ, ಕ್ಲೇ ಮಾಡೆಲಿಂಗ್, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಶಿಶುಗೀತೆ ಹಾಡುವುದು, ಡೈನೋಸಾರ್ ಗಳ ಬಗ್ಗೆ ವಿವರಣೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾನೆ. ಇಸ್ಕಾನ್ ನವರು ಆಯೋಜಿಸಿದ ಬಣ್ಣ ಹಾಕುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ 2019 ರಲ್ಲಿ ಶ್ರೀಮಠವು ಆಯೋಜಿಸಿದ ರಾಮಾಯಣದ ಕುರಿತು ಚಿತ್ರಬಿಡಿಸುವ ಬಾಲವಿಭಾಗದ ಸ್ಪರ್ಧೆಯಲ್ಲಿ ತೃತೀಯಬಹುಮಾನ ಪಡೆದಿರುತ್ತಾನೆ. ಧರ್ಮಭಾರತಿಯ ಶಿವರಾತ್ರಿಯ ಸಂಚಿಕೆಯಲ್ಲಿ ಅಭಿರಾಮ ಬಿಡಿಸಿದೆ ಶಿವನ ಚಿತ್ರ ಪ್ರಕಟವಾಗಿರುತ್ತದೆ.

*ಧಾರಾ ರಾಮಾಯಣದ ಕಾಂಡ ವಿರಾಮದಲ್ಲಿ ಸೇವೆ*

ಇಷ್ಟೇ ಅಲ್ಲದೆ ಒಂದನೇ ತರಗತಿಯಲ್ಲಿರುವಾಗಲೇ ಧಾರಾರಾಮಾಯಣದ ಕಾಂಡ ವಿರಾಮದ ವೇಳೆಯಲ್ಲಿ ಶ್ರೀ ಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ರಾಮಾಯಣದ 4 ಕಾಂಡಗಳ ಕಥೆಯನ್ನು ಹಾಗೂ ಹನುಮಾನ್ ಚಾಲೀಸವನ್ನು ತನ್ನ ಮುಗ್ಧ ಮಧುರ ಮಾತುಗಳಿಂದ ಶ್ರೀ ಸಂಸ್ಥಾನದವರಿಗೆ ಅರ್ಪಿಸಿ ಶ್ರೀ ಸಂಸ್ಥಾನರ ದಿವ್ಯಾಶೀರ್ವಾದಕ್ಕೆ ಪಾತ್ರನಾಗಿದ‍್ದಾನೆ.

ಇದಲ್ಲದೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಅಭಿರಾಮ ಮುಂದಿನ ದಿನಗಳಲ್ಲಿ ನೀನು ಏನಾಗಬೇಕು ಎಂಬ ಪ್ರಶ್ನೆಗೆ ಇನ್ಸ್ಪೆಕ್ಟರ್ ಎಂದು ಮುಗ್ಧವಾಗಿ ಉತ್ತರಿಸುತ್ತಾನೆ. ಈ ಪುಟಾಣಿ ಅಭಿರಾಮನು ಮರ್ಯಾದಾಪುರುಷೋತ್ತಮನಾದ ಭಗವಾನ್ ಅಭಿರಾಮನ ದಿವ್ಯಾನುಗ್ರಹದಿಂದ ಇನ್ನಷ್ಟು ಕಲಾಭಿವೃಧ್ಧಿ ಹೊಂದಲಿ, ಸಂಸ್ಕೃತಿ ಸಂಸ್ಕಾರಗಳೊಡಗೂಡಿ ಉನ್ನತ ಸಾಧನೆಗೈಯುವಂತಾಗಲಿ ಎಂದು ಹಾರೈಸೋಣ.

Author Details


Srimukha

Leave a Reply

Your email address will not be published. Required fields are marked *