” ಗೋಮಾತೆಯನ್ನು ಮಾತೆಯಂತೆ ಪ್ರೀತಿಸಬೇಕು ” : ಸರಸ್ವತಿ ಎಸ್. ಭಟ್, ತೆಕ್ಕೆಕರೆ

ಮಾತೃತ್ವಮ್

 

” ನಮ್ಮ ಪೂಜ್ಯ ಶ್ರೀ ಗಳು ಗೋರಕ್ಷಾ ಅಭಿಯಾನ ಆರಂಭಿಸಿದ ಮೇಲೆ ಗೋಮಾತೆಯನ್ನು ಆರ್ಥಿಕ ದೃಷ್ಟಿಯಿಂದ ನೋಡುವವರಲ್ಲಿ ಒಂದಿಷ್ಟು ಬದಲಾವಣೆ ಕಾಣಿಸುತ್ತಿದೆ. ದನ ಎಂದರೆ ಧನ ಎಂಬ ಭಾವನೆಯನ್ನು ಬದಿಗೆ ಸರಿಸಿ ಗೋಮಾತೆ ಎಂದರೆ ಶ್ರೀಮಾತೆ ಎಂಬ ಪೂಜ್ಯ ಭಾವ ಹೊಂದಿದ್ದಾರೆ , ಕೆಲವೇ ವರ್ಷಗಳಲ್ಲಿ ಮರೆಯಾಗಿ ಹೋಗಲಿದ್ದ ಅನೇಕ ಭಾರತೀಯ ಗೋತಳಿಗಳ ಸಂರಕ್ಷಣೆಯ ದೃಷ್ಟಿಯಿಂದ ಶ್ರೀಗುರುಗಳು ಕೈಗೊಂಡ ವ್ಯವಸ್ಥಿತವಾದ ಯೋಜನೆಯು ಇಂದು ಅನೇಕ ಮಂದಿಗೆ ಭಾರತೀಯ ತಳಿಯ ಹಸುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ” ಬೆಂಗಳೂರು ದಕ್ಷಿಣ ಮಂಡಲದ ಜಯಪ್ರಕಾಶ ವಲಯದ ಸರಸ್ವತಿ ಭಟ್ ತೆಕ್ಕೆಕರೆ ಅವರ ಮಾತುಗಳು ಇವು‌.

ಹಾಲುಮಜಲು ಈಶ್ವರ ಭಟ್ ಹಾಗೂ ಶಂಕರಿ ಅಮ್ಮ ದಂಪತಿಗಳ ಪುತ್ರಿಯಾದ ಸರಸ್ವತಿ ಅವರು ಖ್ಯಾತ ವಿದ್ವಾಂಸರಾದ ಶ್ರೀ ತೆಕ್ಕೆಕರೆ ಸುಬ್ರಹ್ಮಣ್ಯ ಭಟ್ ಇವರ ಪತ್ನಿ.

ಬೆಂಗಳೂರಿನ ಚಾತುರ್ಮಾಸ್ಯದ ಸಂದರ್ಭಗಳಲ್ಲಿ ಎರಡು ತಿಂಗಳು ಸಂಪೂರ್ಣ ಶ್ರೀಮಠದ ಸೇವೆಗೆ ಮೀಸಲಾಗಿಟ್ಟಿರುವ ಸರಸ್ವತಿ ಭಟ್ ಶ್ರೀಗುರು ಸೇವೆ ಮತ್ತು ಗೋಸೇವೆಯನ್ನು ಶ್ರದ್ಧಾಭಕ್ತಿಯಿಂದ ಮಾಡುವವರು. ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನವನ್ನು ಸ್ವೀಕರಿಸಿದವರು. ಮನೆ ಕೆಲಸಗಳಷ್ಟೇ ಆದ್ಯತೆ ಶ್ರೀಮಠದ ಸೇವೆಗೆ ನೀಡಿರುವ ಇವರ ಮೊದಲ ಆದ್ಯತೆ ಶ್ರೀಗುರುಸೇವೆ .

” ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಹೊಸನಗರದಲ್ಲಿ ಹತ್ತುದಿನಗಳ ಕಾಲ ಸೇವೆ ಮಾಡುವ ಅವಕಾಶ ದೊರಕಿದ್ದು ಬದುಕಿಗೆ ವಿಶಿಷ್ಟ ಅನುಭವ ನೀಡಿತು. ಶ್ರೀಗುರು ಭಿಕ್ಷಾಸೇವೆಯ ಸೌಭಾಗ್ಯವೂ ನಮಗೆ ದೊರಕಿದ್ದು ಪೂರ್ವ ಜನ್ಮದ ಸುಕೃತ. ಅಂದಿನಿಂದ ಇಂದಿನವರೆಗೂ ಶ್ರೀಮಠದ ವಿವಿಧ ಯೋಜನೆಯಲ್ಲಿ ಸೇವೆ ಮಾಡುತ್ತಿದ್ದೇನೆ. ಕೃಷಿ ಕುಟುಂಬದಿಂದ ಬಂದ ನನಗೆ ಎಳವೆಯಿಂದಲೇ ಹಸುಗಳೆಂದರೆ ವಿಶೇಷ ಪ್ರೀತಿ, ಬಿಡುವಿನ ವೇಳೆಗಳಲ್ಲಿ ಗಿರಿನಗರದ ಶ್ರೀರಾಮಾಶ್ರಮಕ್ಕೆ ಹೋಗಿ ಅಲ್ಲಿರುವ ಹಸುಗಳನ್ನು ಕಂಡು ಬರುವೆ. ಆದರೆ ಇತ್ತೀಚೆಗೆ ಕೊರೋನಾ ಮಹಾಮಾರಿಯ ಕಾರಣದಿಂದಾಗಿ ಹಿಂದಿನಂತೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೂ ದೇಶೀಯ ಗೋವುಗಳ ಮಹತ್ವದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಮಾಜದ ಜನ ಅರಿತುಕೊಂಡಿದ್ದಾರೆ. ಶ್ರೀಮಠದ ಯೋಜನೆಗೆ ತುಂಬು ಮನದಿಂದ ಸಹಕರಿಸುತ್ತಿದ್ದಾರೆ ” ಎನ್ನುವ ಸರಸ್ವತಿ ಭಟ್ ಅವರು ಮಾಡಿದ ಸೇವೆಗಳ ವಿವರಗಳನ್ನು ಅಕ್ಷರಗಳಲ್ಲಿ ಮೂಡಿಸಲು ಅಸಾಧ್ಯ.

” ಹಳ್ಳಿಯ ಕೃಷಿ ಆಧಾರಿತ ಬದುಕಿಗೆ ಗೋವೇ ಮೂಲ. ಗೋವಿನಿಂದ ಕೃಷಿ ಬದುಕು ಸಮೃದ್ಧಿಯಾಗುತ್ತದೆ. ಹಸುವನ್ನು ಮಾತೆಯಂತೆ ಪ್ರೀತಿಸಬೇಕು, ಮಕ್ಕಳ ಮನದಲ್ಲಿ ಬಾಲ್ಯದಿಂದಲೇ ಗೋವಿನ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುವಂತಹ ವಾತಾವರಣ ಪ್ರತೀ ಮನೆಯಲ್ಲೂ ನಿರ್ಮಾಣವಾಗಬೇಕು ” ಎನ್ನುವ ಸರಸ್ವತಿ ಭಟ್ ಅವರ ಗೋಸೇವೆಗೆ ಅನೇಕ ಗೋಪ್ರೇಮಿಗಳು ಕೈ ಜೋಡಿಸಿದ್ದಾರೆ. ಮನೆಯವರ ಹಾಗೂ ಮಕ್ಕಳ ಸಂಪೂರ್ಣ ಸಹಕಾರ ಅವರಿಗೆ ಲಭಿಸಿದೆ. ಕೊನೆ ಉಸಿರಿನ ತನಕವೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸೌಭಾಗ್ಯ ಆ ರಾಮದೇವರು ಒದಗಿಸಿ ಕೊಟ್ಟರೆ ಸಾಕು ‘ ಎಂದು ಹೃದಯ ತುಂಬಿ ನುಡಿಯುವ ಸರಸ್ವತಿ ಎಸ್ ಭಟ್ ತೆಕ್ಕೆಕರೆ ಅವರು ಅಪರೂಪದ ಶ್ರೀಚರಣ ಸೇವಕಿ .‌ಶ್ರೀಮಠದ ಸೇವೆ, ಗೋಮಾತೆಯ ಸೇವೆ ಎಂದು ಸದಾ ತುಡಿಯುವ ಮನಸ್ಸು ಇವರದ್ದು.

 

Author Details


Srimukha

Leave a Reply

Your email address will not be published. Required fields are marked *