” ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ವಿಶ್ವ ಗೋಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸಮರ್ಪಿಸುವ ಸೌಭಾಗ್ಯ ಒದಗಿಬಂತು. ಅಂದು ಶ್ರೀ ಸಂಸ್ಥಾನದವರು ‘ ಗೋಮಾತೆಯ ಅನುಗ್ರಹದಿಂದ ಬದುಕು ಹಸನಾಗಲಿ ‘ ಎಂದು ಹರಸಿದರು. ಆ ಆಶೀರ್ವಾದವು ನಮ್ಮ ಬದುಕಿನ ಪಥವನ್ನು ಬದಲಿಸಿತು. ಅಂದಿನಿಂದ ಇಂದಿನವರೆಗೂ ಶ್ರೀಮಠದ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದೇವೆ. ನಮ್ಮ ಬದುಕು ಹಸನಾಗಲು ಕಾರಣ ಶ್ರೀಗುರುಗಳು ಮತ್ತು ಗೋಮಾತೆಯ ಕೃಪೆ ” ಈ ಭಾವಪೂರ್ಣ ನುಡಿಗಳು ಕುಮಟಾ ಮಂಡಲದ ಹೆಗಡೆ ವಲಯದ ಗೋದಾವರಿ ಪ್ರಕಾಶ್ ಹೆಗಡೆ ಅವರದ್ದು.
ಹೊಲನಗದ್ದೆ ಸತ್ಯನಾರಾಯಣ ಹೆಗಡೆ, ಲಕ್ಷ್ಮೀ ಹೆಗಡೆಯವರ ಪುತ್ರಿಯಾದ ಗೋದಾವರಿ , ಕುಮಟಾ ಮಂಡಲದ ಹೆಗಡೆ ವಲಯದ ಪ್ರಕಾಶ್ ಹೆಗಡೆಯವರ ಪತ್ನಿ.
ಬಾಲ್ಯದಿಂದಲೇ ಇವರಿಗೆ ಶ್ರೀಮಠದ ಸಂಪರ್ಕವಿತ್ತು.ತಂದೆ ಗುರಿಕ್ಕಾರರಾದುದರಿಂದ ಸಹಜವಾಗಿಯೇ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಮೂಡಿದ ಗೋದಾವರಿ ಅವರಿಗೆ ಎಳವೆಯಿಂದಲೇ ಹಸುಗಳ ಮೇಲೂ ತುಂಬಾ ಮಮತೆ. ತವರುಮನೆಯಲ್ಲಿ ಹಟ್ಟಿ ತುಂಬಾ ಹಸುಗಳಿದ್ದ ಕ್ಷಣಗಳನ್ನು ನೆನಪಿಸುವ ಅವರು ‘ ಆ ಕಾಲ ನಿಜಕ್ಕೂ ಅದ್ಭುತ. ಆ ದಿನಗಳ ಕಲ್ಪನೆಯೇ ಖುಷಿ ಎನಿಸುತ್ತದೆ, ಮಾತುಗಳಿಗೆ ನಿಲುಕದ ಭಾವ’ ಎನ್ನುತ್ತಾರೆ.
ಕೆಲವು ವರ್ಷಗಳಿಂದ ಹೆಗಡೆ ವಲಯದ ಮಾತೃ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಧಾರ್ಮಿಕ ವಿಚಾರಗಳಲ್ಲಿ ತುಂಬಾ ಆಸಕ್ತಿಯಿದೆ . ಬಿಡುವಿನ ವೇಳೆಗಳಲ್ಲಿ ಸ್ತೋತ್ರ ಪಾರಾಯಣ, ಪ್ರವಚನಗಳನ್ನು ಕೇಳುವ ಇವರು ಮಾತೃತ್ವಮ್ ಮೂಲಕ ಎರಡು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ತಾವು ಗುರಿ ತಲುಪಿದ ನಂತರ ತಮ್ಮ ವಲಯದ ಇತರ ಮಾತೆಯರನ್ನು ಮಾಸದ ಮಾತೆಯಾಗಿಸಿ ಗೋಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ ಗೋದಾವರಿ ಈಗಾಗಲೇ ತಮ್ಮ ವಲಯದಲ್ಲಿ ನಾಲ್ಕು ಮಂದಿಯನ್ನು ಮಾತೃತ್ವಮ್ ಯೋಜನೆಯಲ್ಲಿ ಕೈ ಜೋಡಿಸುವಂತೆ ಮಾಡಿದವರು.
” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮನೆ ಮಂದಿಯ ಸಂಪೂರ್ಣ ಸಹಕಾರ ಇದೆ ,ಮಾಸದ ಮಾತೆಯಾಗಿ ಗುರಿ ತಲುಪಲು ಸಮಾಜದ ಹಲವಾರು ಮಂದಿ ಸಹಕಾರ ನೀಡಿದ್ದಾರೆ, ನಾನು ಗುರಿ ತಲುಪಿದ ನಂತರ ಇತರ ಮಾಸದ ಮಾತೆಯರಿಗೆ ಗುರಿ ತಲುಪಲು ಸಹಕಾರ ನೀಡುತ್ತಿದ್ದೇನೆ ” ಎನ್ನುವ ಗೋದಾವರಿ ತಮ್ಮ ತಂಡದೊಂದಿಗೆ ವಿಷ್ಣು ಗುಪ್ತ ವಿಶ್ವವಿದ್ಯಾಪೀಠಕ್ಕೆ ಭೇಟಿ ನೀಡಿ ಅಲ್ಲಿರುವ ವಿದ್ಯಾರ್ಥಿಗಳ ಕುಶಲ ವಿಚಾರಿಸಿ ಬರುತ್ತಾರೆ , ಅಲ್ಲಿ ಅಗತ್ಯವಿರುವ ಕೆಲಸಗಳಿಗೆ ಕಾರ್ಯಕರ್ತೆಯಾಗಿ ಕೈ ಜೋಡಿಸುತ್ತಾರೆ.
ಇದಕ್ಕೂ ಮೊದಲು ಅಭಯಾಕ್ಷರ ಅಭಿಯಾನ, ವಿಶ್ವಮಂಗಲ ಗೋಯಾತ್ರೆಯೇ ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಗೋದಾವರಿ ಅವರು ಕಳೆದ ಬಾರಿ ಗೋಸ್ವರ್ಗದಲ್ಲಿ ನಡೆದ ಸರ್ವ ಸೇವಕ ಸಮಾವೇಶದಲ್ಲಿ ಲಕ್ಷಭಾಗಿನಿಯಾಗಿ ಬಾಗಿನವನ್ನು ಸ್ವೀಕರಿಸುವ ಸೌಭಾಗ್ಯ ಪಡೆದವರು. ಶ್ರೀ ಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ತುಂಬಾ ಆಸೆಯಿದೆ. ಯಾವ ಕಾರ್ಯವನ್ನಾದರೂ ಗುರುಸೇವೆ ಎಂದು ಭಕ್ತಿ ಭಾವದಿಂದ ಮಾಡುವ ಹಂಬಲವಿದೆ ಎನ್ನುವ ಗೋದಾವರಿ ಪ್ರಕಾಶ್ ಹೆಗಡೆಯವರ ಸೇವಾ ಕೌಶಲ್ಯ ಇತರ ಮಾಸದ ಮಾತೆಯರಿಗೆ ಮಾದರಿಯಾಗಿದೆ.