ಶ್ರೀಗುರುಸೇವೆಯ ಸದವಕಾಶ ಪೂರ್ವ ಜನ್ಮದ ಸುಕೃತ : ಜಯಲಕ್ಷ್ಮಿ ವಿ. ಭಟ್ , ಪದ್ಯಾಣ

ಮಾತೃತ್ವಮ್

” ನಾವು ಮೈಸೂರಿನಲ್ಲಿರುವಾಗ ಮೊದಲ ಬಾರಿ ಶ್ರೀಗುರುಗಳ ದರ್ಶನ ಭಾಗ್ಯ ಪಡೆದೆವು. ಅಂದಿನಿಂದ ಇಂದಿನವರೆಗೂ ಶ್ರೀಮಠದ ವಿವಿಧ ಯೋಜನೆಗಳಿಗೆ ಕೈ ಜೋಡಿಸುತ್ತಾ ಸೇವೆ ಮಾಡುತ್ತಿದ್ದೇವೆ. ಶ್ರೀಗುರು ಸೇವೆ ಮಾಡುವ ಅವಕಾಶ ಮತ್ತು ಆರೋಗ್ಯವನ್ನು ಮಾತ್ರ ದೇವರಲ್ಲಿ ಬೇಡಿಕೊಳ್ಳುವುದು ನಾವು ” ಈ ಮಾತುಗಳು ಮಂಗಳೂರು ಮಂಡಲ ಬಾಯಾರು ವಲಯದ ಮಾಣಿಲ ಮುರುವ ನಿವಾಸಿಗಳಾಗಿರುವ ವಿಶ್ವೇಶ್ವರ ಭಟ್ ಪದ್ಯಾಣ ಇವರ ಪತ್ನಿ ಜಯಲಕ್ಷ್ಮಿ ವಿ. ಭಟ್ ಅವರದ್ದು.

ಡೆಂಬಳದ ರಾಮ ಭಟ್ ,ಸರಸ್ವತಿ ದಂಪತಿಗಳ ಪುತ್ರಿಯಾದ ಜಯಲಕ್ಷ್ಮಿ ವಿ ಭಟ್ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಈ ಹಿಂದೆ ನಾವು ಬೆಂಗಳೂರಿನ ಮಾರ್ಥಳ್ಳಿಯಲ್ಲಿ ವಾಸಿಸುತ್ತಿದ್ದೆವು. ವರ್ತೂರು ವಲಯಾಧ್ಯಕ್ಷರಾಗಿ ನಮ್ಮವರು ಸೇವೆ ಸಲ್ಲಿಸುತ್ತಿದ್ದರು. ನಾನು ಅಲ್ಲಿ ಮಾತೃಪ್ರಧಾನೆಯಾಗಿದ್ದೆ. ಇತ್ತೀಚೆಗೆ ಒಂದೂವರೆ ವರ್ಷದಿಂದ ಹಳ್ಳಿಯ ಬದುಕನ್ನು ಆಯ್ಕೆ ಮಾಡಿದ್ದೇವೆ. ಊರಿನಲ್ಲಿ ಗೋಮಾತೆಯ ಸೇವೆಯನ್ನು ಮಾಡುತ್ತಾ ನೆಮ್ಮದಿಯ ನಿವೃತ್ತ ಜೀವನ ನಮ್ಮದು ” ಎನ್ನುವ ಇವರು ಬೆಂಗಳೂರಿನಲ್ಲಿ ಮಾತೃ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ತಮ್ಮ ವಲಯದ ಪ್ರತೀ ಮನೆಯನ್ನು ಸಂಪರ್ಕ ಮಾಡಿ ಶ್ರೀಗುರುಗಳ ವಿವಿಧ ಯೋಜನೆಗಳ ಬಗ್ಗೆ ಜನ ಸಾಮಾನ್ಯರ ಮನೆಮನಗಳಿಗೆ ತಲುಪಿಸಿದವರು.

ತಾವು ವಾಸವಿದ್ದ ವಸತಿ ಸಮುಚ್ಚಯದ ನಿವಾಸಿಗಳಿಗೆಲ್ಲ ಗೋಮಾತೆಯ ಸೇವೆಯ ಮಹತ್ವವನ್ನು ತಿಳಿಸಿ ದೇಶೀಯ ಹಸುಗಳ ಉಳಿವಿಗಾಗಿ ಶ್ರೀಮಠದ ಯೋಜನೆಗಳನ್ನು ತಿಳಿಸಿ ಗೋಮಾತೆಯ ಸೇವೆಗೆ ಮನ ಒಲಿಸಿದವರು.

” ಅಭಯಾಕ್ಷರ ಅಭಿಯಾನದಲ್ಲಿ ಭಾಗವಹಿಸಿದ ಕಾರಣ ಅನೇಕ ಮಂದಿಗೆ ದೇಶೀಯ ಹಸುಗಳ ಮಹತ್ವದ ಬಗ್ಗೆ ತಿಳಿಸಲು ಅನುಕೂಲವಾಯಿತು. ಕೇಳಿದವರೆಲ್ಲ ಸಂತೋಷದಿಂದಲೇ ನಮ್ಮ ಯೋಜನೆಗೆ ಸಹಕರಿಸಿದ್ದಾರೆ‌ ” ಎನ್ನುವ ಜಯಲಕ್ಷ್ಮಿ ವಿ ಭಟ್ ಅವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿದವರು.

ಮಾರ್ಥಳ್ಳಿಯಲ್ಲಿರುವಾಗ ಎರಡು ವರ್ಷಗಳ ಕಾಲ ಪ್ರತಿದಿನವೂ ಇವರ ಪತಿ ವಿಶ್ವೇಶ್ವರ ಭಟ್ ಶ್ರೀಗಿರಿನಗರದ ರಾಮಾಶ್ರಮಕ್ಕೆ ಬಂದು ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಜಯಲಕ್ಷ್ಮಿ ಭಟ್ ಅವರು ಸಹಾ ಹೆಚ್ಚಾಗಿ ಪತಿಯ ಜೊತೆ ಶ್ರೀಮಠದ ಸೇವೆಯಲ್ಲಿ ಭಾಗಿಯಾಗುತ್ತಿದ್ದರು.

ಪ್ರಸ್ತುತ ಮಾಣಿಲ ಸಮೀಪದಲ್ಲಿ ನೂತನ ಗೃಹ ನಿರ್ಮಿಸಿ ವಾಸಿಸುತ್ತಿರುವ ಇವರು ಎರಡು ಹಸುಗಳನ್ನು ಸಾಕುತ್ತಿರುವುದು ಇವರಿಗೆ ಗೋಮಾತೆಯ ಮೇಲಿರುವ ಪ್ರೀತಿಗೆ ಸಾಕ್ಷಿ. ಶ್ರೀಮಠದ ,ಶ್ರೀಗುರುಗಳ ಸೇವೆಯ ಸದವಕಾಶವು ಪೂರ್ವ ಜನ್ಮದ ಸುಕೃತ ಎಂದು ನಂಬಿರುವ ಇವರಿಗೆ ಇನ್ನಷ್ಟು ಮಂದಿಗೆ ಗೋಸೇವೆ, ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುವ ಅಭಿಲಾಷೆ ಇದೆ.

Leave a Reply

Your email address will not be published. Required fields are marked *