“ಶ್ರೀಮಠದ ಸೇವೆ – ಗೋ ಸೇವೆ ಬದುಕಿನ ಅವಿಭಾಜ್ಯ ಅಂಗ ” – ಸ್ವಾತಿ ಯು. ಯಸ್. ಭಟ್ ಮಿತ್ತೂರು

ಮಾತೃತ್ವಮ್

” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವಿನ ಜೊತೆ ಬಾಂಧವ್ಯವಿಲ್ಲದೆ ನಮ್ಮ ಬದುಕು ಸಂಪೂರ್ಣವಲ್ಲ. ದೇಶಿ ಗೋವಿನ ಉತ್ಪನ್ನಗಳು ನಮ್ಮ ಆರೋಗ್ಯವನ್ನು ಸಂರಕ್ಷಿಸುತ್ತವೆ. ಅನೇಕ ರೋಗಗಳಿಗೂ ಔಷಧವಾಗಿವೆ. ಇಂತಹ ಗೋವುಗಳನ್ನು ಸಂರಕ್ಷಿಸುವ ಮಹತ್ಕಾರ್ಯದ ದೀಕ್ಷೆ ತೊಟ್ಟಿರುವ ನಮ್ಮ ಗುರುಗಳ ಮಹತ್ವಪೂರ್ಣ ಯೋಜನೆಗೆ ಕೈಜೋಡಿಸುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎನ್ನುತ್ತಾರೆ ಮಂಗಳೂರು ಮಂಡಲ, ಮಂಗಳೂರು ಮಧ್ಯ ವಲಯದ ಮಿತ್ತೂರು ಉದಯಶಂಕರ್ ಭಟ್ ಅವರ ಪತ್ನಿ ಸ್ವಾತಿ ಯು ಎಸ್ ಭಟ್.

ಮೀಯಪದವು ನಾರಾಯಣ ಭಟ್, ಗೌರಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಅನೇಕ ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದವರು. ಕೆಲವು ವರ್ಷಗಳ ಹಿಂದೆ ನಡೆದ ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ ಶ್ರೀಮಠದ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಇವರು ಮಾತೃತ್ವಮ್ ಯೋಜನೆ ಆರಂಭವಾದಾಗಲೇ ಮಾಸದ ಮಾತೆಯಾಗಿ ಗೋಸೇವೆ ಮಾಡಲು ಆರಂಭಿಸಿದ್ದಾರೆ

ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅನೇಕ ಗುರುಬಂಧುಗಳು ನಮಗೆ ಆತ್ಮೀಯರಾಗಿದ್ದಾರೆ. ಮಾತೃತ್ವಮ್ ಯೋಜನೆಯಲ್ಲಿ ತೊಡಗಿಸಿಕೊಂಡಾಗ ಆರಂಭದಲ್ಲಿ ಗುರಿತಲುಪುವ ಬಗ್ಗೆ ಆತಂಕವಾಗಿತ್ತು. ಆದರೆ ಶ್ರೀಗುರುಕೃಪೆಯಿಂದ ಬಹಳ ಬೇಗನೆ ಗುರಿ ತಲುಪಿದೆ ” ಎನ್ನುವ ಸ್ವಾತಿ ಈಗಾಗಲೇ ಮೂರು ಹಸುಗಳ ಪೋಷಣೆಯ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದವಳು ನಾನು. ಗೋಸೇವೆಯಿಂದ, ಗೋವುಗಳ ಒಡನಾಟದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ನೆಲೆಸುತ್ತದೆ. ಲಕ್ಷ ಗುರಿ ತಲುಪಿ ಬಾಗಿನ ಪಡೆದಿದ್ದೇನೆ. ಈಗ ಮೂರು ಹಸುಗಳ ಗುರಿ ತಲುಪಿ ‘ತಾರೆ’ ಪದವಿಯನ್ನು ಸ್ವೀಕರಿಸಿದ್ದೇನೆ. ಮುಂದಿನ ತಲೆಮಾರು ಗೋವಿನ ಮಹತ್ವವನ್ನು ಅರಿತುಕೊಂಡು ಬಾಳುವಂತಾಗಬೇಕು ಎಂಬುದು ನನ್ನ ಅಭಿಲಾಷೆ ” ಎನ್ನುತ್ತಾರೆ ಸ್ವಾತಿ ಮಿತ್ತೂರು.

ಇವರ ಪತಿ ಉದಯಶಂಕರ ಮಿತ್ತೂರು ಶ್ರೀಮಠದ ಸೇವೆಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡವರು. ಕಳೆದ ಅವಧಿಯಲ್ಲಿ ಮಹಾಮಂಡಲ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ ಅವರು ಈ ಅವಧಿಯಲ್ಲಿಯೂ ಶ್ರೀಮಠದ ವಿವಿಧ ಅಂಗಸಂಸ್ಥೆಗಳ ಜವಾಬ್ದಾರಿಯ ಹೊಣೆಯನ್ನು ನಿಭಾಯಿಸುತ್ತಿದ್ದಾರೆ.

” ಕೊರೋನಾ ಕಾಲಿರಿಸುವುದಕ್ಕೂ ಮುನ್ನ ನಮ್ಮ ಮಂಗಳೂರು ನಿವಾಸದಲ್ಲಿ ಶ್ರೀಗುರುಭಿಕ್ಷೆ ನಡೆಸುವ ಸೌಭಾಗ್ಯ ಒದಗಿ ಬಂದಿತ್ತು. ಆ ದಿನಗಳು ನಮ್ಮ ಬದುಕಿನ ಅವಿಸ್ಮರಣೀಯ ಕ್ಷಣಗಳು. ನಮ್ಮಂತೆ ನಮ್ಮ ಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ಶ್ರದ್ಧಾಭಾವವಿದೆ. ನಮ್ಮ ಗುರುಸೇವೆ, ಶ್ರೀಮಠದ ಸೇವೆ ನಿರಂತರವಾಗಿ ಮುಂದುವರಿಸಲು ಶ್ರೀಗುರುಗಳ ಅನುಗ್ರಹ ಸದಾ ಇರಲಿ ಎಂಬುದೇ ನನ್ನ ಮನದಾಳದ ಕೋರಿಕೆ ” ಎನ್ನುವ ಸ್ವಾತಿ ಮಿತ್ತೂರು ಗೋಮಾತೆಯ ಸೇವೆಯನ್ನು ಈಗಲೂ ಮುಂದುವರಿಸುತ್ತಿದ್ದಾರೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *