” ಸಮರ್ಪಣಾ ಭಾವದ ಸೇವೆಯಿಂದ ಮನಸ್ಸಿಗೆ ನೆಮ್ಮದಿ ” ಸರಸ್ವತಿ ಪ್ರಭಾಕರ ಹೆಗಡೆ, ಸಾಗರ

ಮಾತೃತ್ವಮ್

 

” ಸಾವಿರದ ಸುರಭಿ ಯೋಜನೆಯಲ್ಲಿ ಗೋಮಾತೆಯ ಸೇವೆ ಮಾಡುವ ಮಾತೆಯರಿಗೆ ಸಹಕಾರ ನೀಡುತ್ತಾ ಸುರಭಿ ಸೇವಿಕೆಯಾಗಿ ಸೇವೆ ಮಾಡಿದೆ. ಮಾತೃತ್ವಮ್ ನ ಮಾಸದ ಮಾತೆಯರಿಗೂ ಸಹಕಾರ ನೀಡಿದೆ. ನಮ್ಮ ವಲಯ ಕೋಶಾಧ್ಯಕ್ಷೆ ರುಕ್ಮಾವತಿ ರಾಮಚಂದ್ರ ಅವರು ‘ ನೀನೇ ಮಾಸದ ಮಾತೆಯಾಗು ‘ ಎಂದು ಪ್ರೋತ್ಸಾಹ ನೀಡಿದರು. ಅವರ ಮಾರ್ಗದರ್ಶನದ ಮೂಲಕ ನಾನೂ ಮಾಸದ ಮಾತೆಯಾಗಿ ಸೇವೆ ಮಾಡಲು ನಿರ್ಧರಿಸಿದೆ. ” ಎನ್ನುವವರು ಸಾಗರ ಮಂಡಲದ ಪೂರ್ವ ವಲಯದ ‘ ಅರುಣೋದಯ’ ಅಗ್ರಹಾರದ ನಿವಾಸಿಗಳಾಗಿರುವ ಪ್ರಭಾಕರ ಅವರ ಪತ್ನಿಯಾಗಿರುವ ಸರಸ್ವತಿ ಹೆಗಡೆಯವರು.

ಕೊಲ್ಲೂರು ಸುಬ್ರಾಯ ಹೆಗಡೆ ಹಾಗೂ ಮಹಾಲಕ್ಷ್ಮಿ ದಂಪತಿಗಳ ಪುತ್ರಿಯಾದ ಇವರು ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು ಕೆಲವು ವರ್ಷಗಳ ಹಿಂದಷ್ಟೇ ನಿವೃತ್ತಿ ಹೊಂದಿದವರು.

” ಮಾತೃತ್ವಮ್ ಸಭೆಗೆ ಹೋಗಿ ಬಂದು ಮಾಸದ ಮಾತೆಯಾದರೆ ಗುರಿ ಮುಟ್ಟಲು ಸಾಧ್ಯವೇ ಎಂಬ ಯೋಚನೆಯನ್ನು ಮನೆಯವರ ಮುಂದಿಟ್ಟಾಗ ಅಲ್ಲೇ ಇದ್ದ ನಮ್ಮ ಮನೆ ಕೆಲಸದಾಕೆ ತನಗೂ ಪ್ರತೀ ತಿಂಗಳು ಒಂದಿಷ್ಟು ಕಾಣಿಕೆ ಅರ್ಪಿಸುವ ಅವಕಾಶ ದೊರಕಿದಂತಾಯ್ತು ‘ ಎಂದಾಗ ಮನಸ್ಸಿಗೆ ಧೈರ್ಯ ಬಂತು. ಒಂದಿಬ್ಬರು ಆತ್ಮೀಯರು ಸಹಕಾರ ನೀಡಿದರು, ಉಳಿದ ಹಣವನ್ನು ನಾನೇ ಹಾಕಿದೆ ” ಎನ್ನುವ ಸರಸ್ವತಿ ಹೆಗಡೆಯವರು ಶ್ರೀಗುರು ಸೇವೆಯಲ್ಲಿ ಅಪಾರ ಶ್ರದ್ಧಾಭಕ್ತಿ ಉಳ್ಳವರು.

ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಇವರು ಯಾವುದೇ ಕಾರ್ಯ ಮಾಡುವುದಕ್ಕೂ ಮುನ್ನ ಶ್ರೀಗುರುಗಳನ್ನು ಮನಸಾರೆ ಸ್ಮರಿಸಿ ಮುನ್ನಡೆಯುವವರು. ಶ್ರೀಗುರುಗಳ, ಶ್ರೀರಾಮ ದೇವರ ಅನುಗ್ರಹದಿಂದ ಬದುಕಿನಲ್ಲಿ ಅನೇಕ ತೊಡಕುಗಳು ನಿವಾರಣೆಯಾಗಿವೆ. ಶ್ರೀಚರಣಗಳ ಮೇಲಿನ ನಂಬಿಕೆ, ಸಮರ್ಪಣಾ ಭಾವದ ಸೇವೆಯಿಂದ ಮನಸ್ಸಿಗೆ ನೆಮ್ಮದಿ ದೊರಕಿದೆ ಎಂಬ ಅಚಲ ನಂಬಿಕೆ ಇವರದ್ದು.

ಧಾರ್ಮಿಕ ವಿಚಾರಗಳಲ್ಲಿ ಅತೀವ ಆಸಕ್ತಿ ಹೊಂದಿರುವ ಸರಸ್ವತಿ ಹೆಗಡೆಯವರು ಶ್ರೀಮಠದ ವಿವಿಧ ಯೋಜನೆಗಳಿಗೆ ಅನೇಕ ಬಾರಿ ದೇಣಿಗೆ ಸಮರ್ಪಣೆ ಮಾಡಿದವರು. ಮಾತೃತ್ವಮ್ ಯೋಜನೆಯಲ್ಲಿ ತಾವು ಗುರಿ ತಲುಪಿದ ನಂತರ ಇತರ ಮಾಸದ ಮಾತೆಯರಿಗೆ ಗುರಿ ತಲುಪಲು ಸಹಕಾರವನ್ನೂ ನೀಡಿದವರು. ತಮ್ಮ ಸೋದರಿಗೆ ಮಾತೃತ್ವಮ್ ಯೋಜನೆಯ ಬಗ್ಗೆ ಮಾಹಿತಿ ನೀಡಿ ಅವರನ್ನೂ ಮಾಸದ ಮಾತೆಯಾಗಿಸುವಲ್ಲಿ ಯಶಸ್ವಿಯಾದ ಇವರಿಗೆ ೨೦೧೭ರಲ್ಲಿ ಶ್ರೀಗುರುಗಳ ಪಾದಪೂಜೆ ಮಾಡುವ ಅವಕಾಶವು ತಮ್ಮ ಮನೆಯಲ್ಲೇ ದೊರಕಿದ್ದು ಜೀವನದಲ್ಲಿ ಮರೆಯಲಾರದ ಅನುಭವ ಎನ್ನುತ್ತಾರೆ.

” ಶ್ರೀಗುರುಗಳನ್ನು ಮನೆಗೆ ಕರೆಸಬೇಕು ಎಂಬ ಅಭಿಲಾಷೆಯಿತ್ತು. ಆದರೆ ಸರಿಯಾದ ಅವಕಾಶ ದೊರಕಲಿಲ್ಲ. ಸಾಗರದಲ್ಲಿರುವ ಸಭಾಭವನದ ಲೋಕಾರ್ಪಣೆಯ ಸಂದರ್ಭದಲ್ಲಿ ಅವಕಾಶ ದೊರಕಿದ್ದರೆ ಎಂಬ ಅಭಿಲಾಷೆ ಮೂಡಿದಾಗ ಅಳಿಯ ಹೋಗಿ ವಿಚಾರಿಸಿದ.‌ ಆದರೆ ಸಮಯಾವಕಾಶವಿಲ್ಲ ‘ ಎಂಬ ಉತ್ತರ ಬಂತು. ನಮ್ಮ ಮನೆಗೆ ಶ್ರೀಗುರುಗಳನ್ನು ಕರೆಸುವ ಸೌಭಾಗ್ಯ ದೊರಕಲಿಲ್ಲ ‘ ಎಂದಷ್ಟೇ ಭಾವಿಸಿ ಶ್ರೀಕರಾರ್ಚಿತ ಪೂಜೆಯನ್ನು ನೋಡುತ್ತಾ ಮನದಲ್ಲೇ ಪ್ರಾರ್ಥಿಸುತ್ತಿದ್ದಾಗ ಒಬ್ಬರು ಬಂದು
‘ ನಾಳೆ ಮುಂಜಾನೆ ನಿಮ್ಮಲ್ಲಿ ಪಾದಪೂಜೆ ನೆರವೇರಲಿದೆ ‘ ಎಂದು ತಿಳಿಸಿದಾಗ ಮೊದಲು ನಂಬಿಕೆಯೇ ಬರಲಿಲ್ಲ. ನಂತರ ನಮ್ಮ ಮನದ ಪ್ರಾರ್ಥನೆ ಶ್ರೀಚರಣಗಳಿಗೆ ತಲುಪಿತು ಎಂಬ ಸಾರ್ಥಕ ಭಾವ ಮೂಡಿತು ” ಎನ್ನುವ ಸರಸ್ವತಿ ಹೆಗಡೆಯವರ ಮಗಳೂ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದವರು.

ತಮ್ಮ ಉದ್ಯೋಗದ ಮೊದಲ ಸಂಬಳವನ್ನು ಶ್ರೀಮಠಕ್ಕೆ ಸಮರ್ಪಣೆ ಮಾಡಿದ ಮಗಳಂತೆ ಮೊಮ್ಮಗಳು ಮೇಘಾ ಸಹಾ ಎಳವೆಯಿಂದಲೇ ಶ್ರೀಮಠಕ್ಕೆ ಸಮರ್ಪಣೆ ಮಾಡುವ ವಿಚಾರದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾಳೆ. ಹುಟ್ಟುಹಬ್ಬಕ್ಕೆ ಸೈಕಲ್‌ ನಿರಾಕರಿಸಿ ಆ ಮೊತ್ತವನ್ನು ಶ್ರೀಮಠಕ್ಕೆ ಸಮರ್ಪಣೆ ಮಾಡಲು ತಿಳಿಸಿದ ಮೇಘಾ ತನಗೆ ದೊರಕಿದ ಬಹುಮಾನದ ಮೊತ್ತವನ್ನು ಶ್ರೀಮಠದ ಸೇವೆಗೆ ಸಮರ್ಪಿಸಿದ್ದಾಳೆ.

” ಸಾಧ್ಯವಿರುವಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ಮುಂದುವರಿಯಬೇಕೆಂಬ ಅಭಿಲಾಷೆಯಿದೆ, ಇದಕ್ಕೆ ಶ್ರೀಗುರುಗಳ ಕೃಪೆಯನ್ನು ಸದಾ ಬಯಸುತ್ತೇನೆ ” ಎನ್ನುವ ಸರಸ್ವತಿ ಹೆಗಡೆಯವರಿಗೆ ಗೋಮಾತೆಯ ಸೇವೆಯಲ್ಲಿ ಇನ್ನಷ್ಟು ಮಂದಿಗೆ ಪ್ರೋತ್ಸಾಹ ನೀಡುವ ಹಂಬಲವಿದೆ.

 

Author Details


Srimukha

Leave a Reply

Your email address will not be published. Required fields are marked *