“ಶ್ರೀಮಠದ ಸೇವೆಗೆ ಬದುಕಿನಲ್ಲಿ ಮೊದಲ ಆದ್ಯತೆ” : ಮಲ್ಲಿಕಾ ಕಲ್ಲಡ್ಕ

ಮಾತೃತ್ವಮ್

ವದ್ವ ಲಕ್ಷ್ಮೀ ನಾರಾಯಣ ಭಟ್ ಹಾಗೂ ಸರಸ್ವತಿ ಇವರ ಪುತ್ರಿಯಾದ ಮಲ್ಲಿಕಾ ಕಲ್ಲಡ್ಕ ಅವರಿಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಅತೀವ ಆಸಕ್ತಿ. ಮುಳಿಯ ಗೋಪಾಲಕೃಷ್ಣ ಭಟ್ ಅವರನ್ನು ವಿವಾಹವಾದ ನಂತರ ಶ್ರೀಮಠದ ಸಂಪರ್ಕ ದೊರಕಿತು. ಜೊತೆಗೆ ಶ್ರೀ ಮಠದ ವಿವಿಧ ಸೇವಾ ಯೋಜನೆಗಳಲ್ಲಿ ಭಾಗಿಯಾಗುವ ಸದವಕಾಶವೂ ಒದಗಿಬಂತು. ಪ್ರಸ್ತುತ ಮಾತೃತ್ವಮ್ ನ ವಿವೇಕ ಲಕ್ಷ್ಮಿ ವಿಭಾಗದ ಕೇಂದ್ರ ಮಟ್ಟದ ಅಧ್ಯಕ್ಷೆಯಾಗಿರುವ ಮಲ್ಲಿಕಾ ಅವರು ತಮ್ಮ ಸೇವೆಯ ಸಂದರ್ಭದಲ್ಲಿ ವೈವಿಧ್ಯಮಯ ಅನುಭವಗಳನ್ನು ಪಡೆದುಕೊಂಡವರು.

“ಹಿರಿಯ ಗುರುಗಳ ಕಾಲದಿಂದಲೂ ಶ್ರೀಮಠದ ಸಂಪರ್ಕದಲ್ಲಿದ್ದವರು ನಾವು. ಆದರೂ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪೀಠಾರೋಹಣದ ನಂತರ ಮಠಕ್ಕೆ ಮತ್ತಷ್ಟು ನಿಕಟವಾದೆವು.
ಶ್ರೀ ಸಂಸ್ಥಾನದವರ ಮೊದಲ ಭೇಟಿಯ ಸಂದರ್ಭದಲ್ಲಿ ಮಗನಿಗೆ ಸೂಕ್ತ ಕೆಲಸ ಸಿಗಲಿಲ್ಲವೆಂಬ ಕೊರಗಿನಲ್ಲಿದ್ದೆ. ಅದೇ ನೋವನ್ನು ಶ್ರೀಗಳ ಮುಂದೆ ಭಿನ್ನವಿಸಿಕೊಂಡು ಅವರ ಅಭಯ ನುಡಿಗಳ ಶ್ರೀರಕ್ಷೆಯ ಮಂತ್ರಾಕ್ಷತೆಯನ್ನೂ ಪಡೆದುಕೊಂಡೆ. ತಿಂಗಳೊಳಗೆ ಮಗನಿಗೆ ಅವನ ವಿದ್ಯಾಭ್ಯಾಸಕ್ಕೆ ಪೂರಕವಾದ ಸೂಕ್ತ ಕೆಲಸ ದೊರಕಿತು. ಈ ಘಟನೆಯಿಂದ ಶ್ರೀಗುರುಗಳ ಮೇಲೆ,ಶ್ರೀರಾಮ ದೇವರ ಮೇಲೆ ಶ್ರದ್ಧೆ ,ಭಕ್ತಿ ಮತ್ತಷ್ಟು ದೃಢವಾಗಿ ನನ್ನ ಮೊದಲ ಆದ್ಯತೆ ಏನಿದ್ದರೂ ಶ್ರೀಮಠದ ಸೇವೆಗೆ ಎಂದು ಭಾವಿಸಿಕೊಂಡಿದ್ದೇನೆ ಎನ್ನುವ ಅವರ ಮಾತುಗಳಲ್ಲಿ ಶ್ರೀ ಮಠದ ಮೇಲಿನ ಶ್ರದ್ಧಾಭಾವ ತುಂಬಿ ತುಳುಕುತ್ತಿದೆ.

ಶ್ರೀಮಠದ ಕಾರ್ಯಕರ್ತೆಯಾಗಿ ಘಟಕ ಪ್ರಧಾನೆ,ವಲಯ ಮಾತೃಪ್ರಧಾನೆ ,ಮಂಡಲ ಮಾತೃಪ್ರಧಾನೆ ಹಾಗೂ ಮಹಾಮಂಡಲ ಮುಷ್ಟಿ ಭಿಕ್ಷಾ ಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ ಮಲ್ಲಿಕಾ ಅವರು ಮಾತೃತ್ವಮ್ ಮೂಲಕ ಒಂದು ಹಸುವಿನ ನಿರ್ವಹಣಾ ವೆಚ್ಚದ ಹೊಣೆಯನ್ನು ಎರಡು ವರ್ಷಗಳ ಕಾಲ ಭರಿಸುವ ಮೂಲಕ ತಮ್ಮ ಗುರಿ ತಲುಪಿದವರು.

ಮಾಸದ ಮಾತೆಯಾಗಿ ಅವರು ಗಳಿಸಿದ ಅನುಭವಗಳು ಇತರ ಮಾತೆಯರಿಗಿಂತ ತುಸು ಭಿನ್ನವಾಗಿದೆ. “ಮಲ್ಲಿಕಾ ಮಾತೃತ್ವಮ್” ಎಂಬ ವ್ಯಾಟ್ಸಪ್ ಗ್ರೂಪ್ ಮಾಡಿ ಗೋಸೇವೆಗೆ ಸಂಬಂಧಿಸಿದ ವೀಡಿಯೋ ಹಾಗೂ ಇತರ ಮಾಹಿತಿಗಳನ್ನು ಜನರಿಗೆ ಬಹಳ ಸುಲಭವಾಗಿ ತಲುಪುವಂತೆ ಮಾಡಿದ ಹಿರಿಮೆ ಇವರದ್ದು. ಸಮಾಜದ ಎಲ್ಲಾ ವಿಭಾಗದ ಜನರನ್ನು ಸಂಪರ್ಕ ಮಾಡುವ ಮೂಲಕ ಮಾತೃತ್ವಮ್ ಯೋಜನೆಯನ್ನು ಹೆಚ್ಚು ಜನರಿಗೆ ಮನವರಿಕೆ ಮಾಡಿಸಿದವರು.

ತಮ್ಮ ಮೊಮ್ಮಗನ ಹುಟ್ಟು ಹಬ್ಬದಂದು ಒಂದು ಮೊತ್ತವನ್ನು ಗೋಸ್ವರ್ಗಕ್ಕೆ ನೀಡುವ ಮೂಲಕ ಇತರರಿಗೆ ಮಾದರಿಯಾದ ಮಲ್ಲಿಕಾ ಕಲ್ಲಡ್ಕ ಅವರು ತಮಗೆ ಎದುರಾದ ಒಂದು ವಿಶೇಷ ಘಟನೆಯನ್ನು ಈ ರೀತಿಯಾಗಿ ವಿವರಿಸಿದ್ದಾರೆ

“ಈ ವಯಸ್ಸಿನಲ್ಲಿ ಡ್ರೈವಿಂಗ್ ಕಲಿತು ಒಬ್ಬಳೇ ಕಾರು ಕೊಂಡೊಯ್ಯುವ ಧೈರ್ಯ ಮೂಡುವಂತಾಗಿದ್ದು ಶ್ರೀಮಠದ ಸೇವೆ ಮಾಡಬೇಕೆಂಬ ತುಡಿತದಿಂದ. ಇತ್ತೀಚೆಗೆ ಪೆರಾಜೆ ಮಾಣಿ ಮಠದಿಂದ ಮುಷ್ಟಿ ಭಿಕ್ಷೆಯ ಅಕ್ಕಿಯನ್ನು ಕೊಂಡೊಯ್ಯುತ್ತಿದ್ದಾಗ ಬಸ್ ಓವರ್ ಟೇಕ್ ಮಾಡುತ್ತಿರುವ ಸಂದರ್ಭದಲ್ಲಿ ಪುಟ್ಟ ಅಪಘಾತ ಸಂಭವಿಸಿತು. ಶ್ರೀಗುರುಗಳ ಕಾರುಣ್ಯದಿಂದ ಕಾರಿನೊಳಗಿದ್ದ ನನಗೆ ಏನೂ ಆಗಲಿಲ್ಲ. ಆದರೆ ಕಾರಿಗೆ ಸ್ವಲ್ಪ ಪೆಟ್ಟಾಯಿತು.
ಬಸ್ ಡ್ರೈವರ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕಾರು ಸರಿಪಡಿಸಲು ಎಷ್ಟು ಹಣ ಬೇಕಾಗಬಹುದು ಎಂದು ಶೋರೂಮ್ ನವರಲ್ಲಿ ವಿಚಾರಿಸಿ ಅಷ್ಟು ಮೊತ್ತದ ಹಣವನ್ನು ನನಗೆ ಕೊಟ್ಟದ್ದು ಬಹುಶಃ ನಾನು ಅಂದು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾರಣವೇ ಇರಬಹುದು. ಯಾವುದೋ ಅದೃಶ್ಯ ಶಕ್ತಿ ನನ್ನನ್ನು ಅಂದು ಪಾರುಮಾಡಿತು. ಆದರೆ ಕಾರು ರಿಪೇರಿಗೆ ಅಷ್ಟು ಹಣವೂ ಬೇಕಾಗಲಿಲ್ಲ. ಎಲ್ಲವೂ ಶ್ರೀಗುರುಗಳ, ಗೋಮಾತೆಯ ಕೃಪೆ ಎಂದು ಕೊಂಡು ಉಳಿದ ಹಣವನ್ನು ಹಾಗೆಯೇ ಮಾತೃತ್ವಮ್ ಗೆ ಹಾಕಿದೆ” ಎಂದು ತಮ್ಮ ವಿಶಿಷ್ಟ ಅನುಭವವನ್ನು ರೋಮಾಂಚಕಾರಿಯಾಗಿ ವಿವರಿಸುತ್ತಾರೆ ಅವರು.

ಪುತ್ತೂರಿನ ಖ್ಯಾತ ಡಾಕ್ಟರ್ ಗೌರಿ ಪೈ ಅವರ ಬಳಿಗೆ ತಮ್ಮ ತಂಡದೊಂದಿಗೆ ತೆರಳಿ ಮಾತೃತ್ವಮ್ ಬಗ್ಗೆ ವಿವರಿಸಿದಾಗ ಗೋಸ್ವರ್ಗದ ಬಗ್ಗೆ ಮೆಚ್ಚುಗೆ ಸೂಚಿಸಿ,ನೋಡುವ ಹಂಬಲವನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಒಂದು ವರ್ಷಕ್ಕೆ ಒಂದು ಹಸುವಿಗೆ ತಗಲುವ ವೆಚ್ಚವನ್ನು ನೀಡಿದ್ದು ಸಹಾ ಒಂದು ವಿಶೇಷ ಅನುಭವ ಎನ್ನುತ್ತಾರೆ ಮಲ್ಲಿಕಾ ಕಲ್ಲಡ್ಕ.

ಬದುಕಿನಲ್ಲಿ ಕಷ್ಟಗಳು ಬಂದಾಗ ಶ್ರೀಚರಣಗಳನ್ನು ಸ್ಮರಿಸಿದರೆ ಖಂಡಿತಾ ಅದರಿಂದ ಪಾರಾಗಬಹುದು ಎಂದು ಭರವಸೆಯಿಂದ ನುಡಿಯುವ ಇವರು ತಮ್ಮ ಗೆಳತಿಯರಿಗೂ ಶ್ರೀಮಠದ ಬಗ್ಗೆ, ಶ್ರೀರಾಮದೇವರ,ಗೋಮಾತೆಯ ಮಹಿಮೆಯ ಬಗ್ಗೆ ವಿವರಿಸಿ ಅವರು ಸಹಾ ತಮ್ಮ ಕಷ್ಟಗಳಿಂದ ಪಾರಾಗಲು ಶ್ರೀಮಠದ ಸೇವೆಯಲ್ಲಿ ಕೈ ಜೋಡಿಸಿದಾಗ ಅವರ ಕಷ್ಟಗಳು ಬಗೆಹರಿದವು ಎಂದು ಕೆಲವು ಉದಾಹರಣೆಗಳನ್ನು ನೀಡಿದರು.

ತಮ್ಮ ಮನೆಯ ಸಮೀಪದಲ್ಲೇ ಇರುವ ಕಲ್ಕಡ್ಕ ಉಮಾಶಿವ ಕ್ಷೇತ್ರದಲ್ಲಿರುವ ಹಸುಗಳಿಗೆ ಪತಿ ಗೋಪಾಲಕೃಷ್ಣ ಭಟ್ ಅವರು ತಮ್ಮ ಮನೆಯಿಂದ ಮೇವು ಒದಗಿಸುವ ಮೂಲಕ ಗೋಸೇವಾ ಕೈಂಕರ್ಯ ಮಾಡುತ್ತಿರುವುದು ಹರ್ಷ ಮೂಡಿಸಿದೆ.

“ಪತಿಯ ಮಕ್ಕಳ ನಿರಂತರ ಪ್ರೋತ್ಸಾಹ,ಸಹಕಾರದಿಂದ ಸಾಧ್ಯವಿರುವಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳ ಬೇಕೆಂಬುದೇ ಜೀವನದ ಗುರಿ” ಎನ್ನುವ ಮಲ್ಲಿಕಾ ಅವರು ತಾವು ಮಾಸದ ಮಾತೆಯಾಗಿ ಗುರಿ ತಲುಪಿದ ನಂತರ ಸುಮಾರು ಹದಿನೈದಕ್ಕೂ ಮಿಕ್ಕಿ ಮಾತೆಯರನ್ನು ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆಯಲ್ಲಿ ತೊಡಗುವಂತೆ ಮಾಡಿದ್ದು ಮಾತ್ರವಲ್ಲದೆ ಅವರು ಗುರಿ ತಲುಪುವಂತಾಗಲು ಕೂಡ ತಮ್ಮ ಸಹಾಯ ನೀಡಿದವರು.

ಶ್ರೀಗುರುಗಳ ಅನುಮತಿಯೊಂದಿಗೆ ಮಾ ಗೋ ಪ್ರಾಡಕ್ಟ್ ನ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸುವ ಇವರು ಗೋ ಉತ್ಪನ್ನಗಳ ಪ್ರಚಾರಕ್ಕಾಗಿ ನಿರಂತರ ಶ್ರಮ ವಹಿಸುತ್ತಾರೆ. ಹಲಸಿನ ಮೇಳ,ಮಲೆನಾಡು ಗಿಡ್ಡ ಗೋಪ್ರದರ್ಶನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಮಾ ಗೋ ಪ್ರಾಡಕ್ಟ್ ನ ಪ್ರದರ್ಶನ ಹಾಗೂ ಮಾರಾಟದ ಮಳಿಗೆಯನ್ನು ಇರಿಸಿ ಪ್ರಚಾರ ನಡೆಸಿದ್ದಾರೆ.

“ಇತ್ತೀಚೆಗೆ ಜನರು ಗೋ ಉತ್ಪನ್ನಗಳ ಉಪಯೋಗದ ಮಹತ್ವವನ್ನು ಅರಿತಿದ್ದಾರೆ. ಒಂದು ಬಾರಿ ಕೊಂಡವರು ಮುಂದೆ ” ಇನ್ನೆಲ್ಲಿ ಸಿಗ್ತೀರಿ” ಎಂದು ಆಸಕ್ತಿಯಿಂದ ವಿಚಾರಿಸಿಕೊಂಡು ಗೋ ಉತ್ಪನ್ನಗಳನ್ನು ಕೊಂಡು ಕೊಳ್ಳುತ್ತಾರೆ. ಇದು ಮನಸ್ಸಿಗೆ ಸಂತೃಪ್ತಿ ನೀಡಿದೆ” ಎ‌ನ್ನುವ ಮಲ್ಲಿಕಾ ಕಲ್ಲಡ್ಕ ಅವರು ತಮ್ಮ ನಿರಂತರ ಚಟುವಟಿಕೆಯ ಮೂಲಕ ಇತರ ಮಾಸದ ಮಾತೆಯರಿಗೆ ಮಾರ್ಗದರ್ಶಕರಾಗಿದ್ದಾರೆ.

Author Details


Srimukha

Leave a Reply

Your email address will not be published. Required fields are marked *