” ಗೋಮಾತೆ ನಮ್ಮ ಬದುಕಿಗೆ ಹತ್ತಿರವಾಗಬೇಕು ” : ವೀಣಾ ನಾರಾಯಣ ಭಟ್ ಹೊಸಮನೆ

ಮಾತೃತ್ವಮ್

 

 

” ನಮ್ಮ ದೇಶದ ಸಂಸ್ಕೃತಿಯ ಭಾಗ ಗೋಮಾತೆ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಮೈ ಮನಸ್ಸು ಉಲ್ಲಸಿತವಾಗುತ್ತದೆ. ಆಧುನಿಕ ಜೀವನದ ಜಂಜಾಟದ ನಡುವೆ ಗೋಸಾಕಣಿಗೆ ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಅಮೃತ ನೀಡುವ ಗೋಮಾತೆಯನ್ನು ಸಂರಕ್ಷಿಸುವ ಯೋಜನೆಯಾದ ಮಾತೃತ್ವಮ್ ನಿಂದಾಗಿ ಅನೇಕ ಮಂದಿಗೆ ಗೋಸೇವೆಯ ಸೌಭಾಗ್ಯ ಒದಗಿಬಂದಿದೆ. ಗೋಮಾತೆ ಮತ್ತೆ ನಮ್ಮೆಲ್ಲರ ಬದುಕಿಗೆ ಹತ್ತಿರವಾಗಿದ್ದಾಳೆ. ಶ್ರೀಗುರುಗಳ ಈ ಒಂದು ಯೋಜನೆ ಗೋಜಾಗೃತಿಯಲ್ಲಿ ಹೊಸಪಥವನ್ನು ಸೃಷ್ಟಿಸುತ್ತಿದೆ ” ಎಂದವರು ಮಂಗಳೂರು ಮಂಡಲ ಬಾಯಾರು ವಲಯದ ಮೂಲತಃ ಪೈವಳಿಕೆ ಸಮೀಪದ ಹೊಸಮನೆಯವರಾದ ಡಾ. ನಾರಾಯಣ ಭಟ್ ಅವರ ಪತ್ನಿ ವೀಣಾ ಭಟ್.

 

ಪೆರ್ಣೆ ಸುಬ್ರಹ್ಮಣ್ಯ ಭಟ್,ಸುಮತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.

 

” ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವಳು ನಾನು. ಅಪ್ಪಟ ದೇಶೀಯ ತಳಿಗಳು ಸಂಕರಕ್ಕೊಳಗಾಗಿ ಭಾರತೀಯ ತಳಿಯ ಹಸುಗಳು ವಿನಾಶದಂಚಿಗೆ ಸರಿಯುತ್ತಿರುವಾಗ ಗೋಮಾತೆಯ ರಕ್ಷಣೆಗಾಗಿ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ನಮ್ಮ ಗುರುಗಳು ಕೈಗೊಂಡಿರುವ ಸಿಂಧುವಿನಂತಹ ಯೋಜನೆಗಳಲ್ಲಿ ಒಂದು ಬಿಂದುವಾಗಿ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದು ಶ್ರೀಗುರುಕೃಪೆಯೇ ಸರಿ . ನನ್ನ ಅತ್ತೆಯವರು ಇರುವ ತನಕವೂ ಪ್ರತೀ ದಿನ ಗೋಮಾತೆಗೆ ಗೋಗ್ರಾಸ ನೀಡದೆ ಆಹಾರ ಸೇವಿಸುತ್ತಿರಲಿಲ್ಲ. ಇದೂ ನನ್ನ ಗೋಸೇವೆಗೆ ಪ್ರೇರಣೆ ನೀಡಿದೆ ” ಎನ್ನುವ ಇವರು ಈ ಹಿಂದೆ ವಿಟ್ಲ ಸೀಮಾ ಕುಂಕುಮಾರ್ಚನೆ ಸಂಚಾಲಕಿಯಾಗಿ, ಬಾಯಾರು ವಲಯ ಬಿಂದು – ಸಿಂಧು ಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

 

ಶ್ರೀರಾಮಾಯಣ ಮಹಾಸತ್ರ, ವಿಶ್ವಗೋಸಮ್ಮೇಳ‌ನ, ಕೋಟಿ ನೀರಾಜನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಇವರು ಬದುಕಿನ ಕಷ್ಟಸುಖಗಳಲ್ಲಿ ಶ್ರೀಗುರು ಚರಣಗಳನ್ನೇ ನಂಬಿದವರು. ಈ ಹಿಂದೆ ಶ್ರೀಗುರುಗಳು ಶ್ರೀವಾರಿ ಮೆಟ್ಟಿಲುಗಳ ಮೂಲಕ ತಿರುಪತಿಗೆ ತೆರಳುವಾಗ ಪರಿವಾರದ ಜೊತೆ ಹೋದ ಇವರಿಗೆ ಕಾಲುನೋವಿದ್ದರೂ ಶ್ರೀಗುರುಗಳ ಕೃಪೆಯಿಂದ ಶ್ರೀವಾರಿ ಮೆಟ್ಟಿಲುಗಳನ್ನೇರಲು ಯಾವುದೇ ತೊಡಕಾಗಲಿಲ್ಲ ಎಂಬ ನಂಬಿಕೆ ಇವರದ್ದು.

 

” ಶ್ರೀಗುರು ಕಾರುಣ್ಯದಿಂದ ಮಗನಿಗೆ ಅವನು ಬಯಸಿದ ಉದ್ಯೋಗವೇ ಲಭಿಸಿದೆ. ಶ್ರೀಗುರುಗಳ ಕೃಪೆಯ ಬಗ್ಗೆ ಮನಸ್ಸು ತುಂಬಿ ಬರುತ್ತಿದೆ. ಮಗಳು, ಅಳಿಯ , ಮಗ ಹಾಗೂ ಕೆಲವು ಆತ್ಮೀಯರು ಗೋಸೇವೆಗೆ ಕೈ ಜೋಡಿಸಿದ್ದಾರೆ ” ಎನ್ನುವ ಇವರಿಗೆ ಆರೋಗ್ಯಭಾಗ್ಯ ಇರುವ ವರೆಗೂ ಶ್ರೀಮಠದ ಸೇವೆಯಲ್ಲಿ ನಿರತರಾಗಿರಬೇಕೆಂಬ ಅಭಿಲಾಷೆಯಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *