ಶ್ರೀಮಠದ ಸೇವೆಗೆ ಸದಾ ಬದ್ದ : ಚಂದ್ರಕಲಾ ಬೆಂಗಳೂರು

ಮಾತೃತ್ವಮ್

 

ಸೊರಬ ಬಳಿಯ ಕಂಪನಹಳ್ಳಿ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಚಂದ್ರಕಲಾ ಹಾಗೂ ಅವರ ಪತಿ ಲಕ್ಷ್ಮೀ ನಾರಾಯಣ ಹೆಗಡೆಯವರು ಸುಮಾರು ನಲುವತ್ತು ವರ್ಷಗಳ ಕಾಲ ಮುಂಬೈ ನಿವಾಸಿಗಳಾಗಿದ್ದವರು. ಮುಂಬೈಯಲ್ಲಿದ್ದುಕೊಂಡೇ ಶ್ರೀಮಠದ ವಿವಿಧ ಸೇವೆಗಳಲ್ಲಿ ಕೈ ಜೋಡಿಸಿದವರು.

ಮುಂಬೈಯ ಡೊಂಬಿವಿಲಿಯಲ್ಲಿ ಎರಡು ಬಾರಿ ಶ್ರೀಗುರುಗಳ ರಾಮಕಥೆಯನ್ನು ನಡೆಸಿದ ಇವರು ಶ್ರೀ ರಾಮಚಂದ್ರಾಪುರ ಮಠದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಅಯೋಧ್ಯೆ, ಕಾಶಿಯೇ ಮೊದಲಾದ ಉತ್ತರ ಭಾರತ ಭಾಗದಿಂದ ಸಂತರನ್ನು ಕರೆತಂದು ಅವರ ಸತ್ಕಾರದಲ್ಲಿ ಸ್ವಯಂ ಸೇವಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಿಶ್ವ ಗೋಸಮ್ಮೇಳನದಲ್ಲೂ ಸಕ್ರಿಯವಾಗಿ ಪಾಲ್ಗೊಂಡ ಚಂದ್ರಕಲಾ ದಂಪತಿಗಳು ಶ್ರೀಮಠದ ವಿವಿಧ ಯೋಜನೆಗಳಿಗೆ ತನು ಮನ ಧನಗಳಿಂದ ಸಹಕರಿಸಿದ್ದಾರೆ.

ಪತಿಯ ಜೊತೆ ಶ್ರೀಮಠದ ಎಲ್ಲಾ ಸೇವಾಕಾರ್ಯಗಳಿಗೂ ಸಹಭಾಗಿಯಾಗುವ ಚಂದ್ರಕಲಾ ಅವರ ತವರುಮನೆ ಸಿದ್ದಾಪುರ ಸಮೀಪದ ಸೀಗೆಹಳ್ಳಿ. ಸೀಗೆಹಳ್ಳಿ ಕೃಷ್ಣ ಹೆಗಡೆ ಹಾಗೂ ಸುಶೀಲಾ ಹೆಗಡೆಯವರ ಪುತ್ರಿಯಾದ ಇವರ ಇಬ್ಬರು ಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ತುಂಬಾ ಆಸಕ್ತಿಯಿದೆ.

ತಮ್ಮ ಉದ್ಯೋಗದ ನಿವೃತ್ತಿಯ ನಂತರ ಬೆಂಗಳೂರಿಗೆ ಬಂದಿರುವ ಇವರು ಪ್ರಸ್ತುತ ಬೆಂಗಳೂರಿನ ದಕ್ಷಿಣ ಮಂಡಲದ ಗಿರಿನಗರ ವಲಯದ ನಿವಾಸಿಗಳಾಗಿದ್ದಾರೆ.

” ಶ್ರೀಗುರುಗಳ ಮಾರ್ಗನಿರ್ದೇಶನದಂತೆ ನಡೆಯುವ ಶ್ರೀಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡವರು ನಾವು, ಅದೇ ಇಚ್ಛೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆಗೈಯಲಾರಂಭಿಸಿದೆ. ನೆಂಟರು, ಆತ್ಮೀಯರು, ಮಕ್ಕಳು ಸೇರಿದಂತೆ ಹಲವಾರು ಗೋಪ್ರೇಮಿಗಳ ಸಹಕಾರದಿಂದ ಬಹಳ ಬೇಗನೆ ಗುರಿ ತಲುಪಿದೆ, ಇದಕ್ಕೆ ಕಾರಣ ನಾವು ನಂಬಿರುವ ಶ್ರೀಚರಣ ” ಎಂದು ಭಕ್ತಿಭಾವದಿಂದ ನುಡಿಯುವ ಚಂದ್ರಕಲಾ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಬದುಕಿನಲ್ಲಿ ಶ್ರೇಯಸ್ಸುಂಟಾಗಿದೆ ಎಂಬ ನಂಬಿಕೆಯಿದೆ. ಮನದ ಸಂಕಲ್ಪಗಳೆಲ್ಲ ಈಡೇರಿವೆ ಎನ್ನುವ ಭರವಸೆಯಿದೆ. ಇನ್ನಷ್ಟು ಗೋಸೇವೆ, ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಗುರಿಯಿದೆ.

ಮನೆಯಲ್ಲಿ ಗವ್ಯೋತ್ಪನ್ನಗಳನ್ನೇ ಉಪಯೋಗಿಸುವ ಇವರು ತಮ್ಮ ಪರಿಚಿತರಿಗೆ ನೆಂಟರಿಗೆಲ್ಲ ಗವ್ಯೋತ್ಪನ್ನಗಳ ಮಹತ್ವವನ್ನು ತಿಳಿಸುವ ಮೂಲಕ ಗೋಮಾತೆಯ, ಗವ್ಯೋತ್ಪನ್ನಗಳ ಬಗ್ಗೆ ಜನಜಾಗೃತಿ ಮೂಡಿಸುವವರು. ಮುಂಬೈಯಲ್ಲೂ ಈ ವಿಚಾರದಲ್ಲಿ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ.
‘ಸದಾ ಶ್ರೀಮಠದ ಸೇವೆಗೆ ಬದ್ದ ‘ ಎನ್ನುವ ಈ ದಂಪತಿಗಳ ಸೇವೆ ಎಲ್ಲರಿಗೂ ಮಾದರಿಯಾಗಿದೆ.

Author Details


Srimukha

Leave a Reply

Your email address will not be published. Required fields are marked *