ಸಂಗೀತ ಮತ್ತು ಯೋಗ ಕ್ಷೇತ್ರದ ಅರಳು ಪ್ರತಿಭೆ – ಸಾನ್ವಿ ಜಿ. ಭಟ್

ಅಂಕುರ

 

ಯೋಗ ಮತ್ತು ಸಂಗೀತ ಕ್ಷೇತ್ರದಲ್ಲಿ
ಸಾಧನೆಗೈಯ್ಯುತ್ತಿರುವ ಬಾಲಪ್ರತಿಭೆ ಸಾನ್ವಿ ಜಿ.ಭಟ್.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಎಳೆಯ ವಯಸ್ಸಿನಲ್ಲೇ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಪುಟಾಣಿ
ಪೋರಿ ಈಕೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾರೇಕೊಪ್ಪ ಎಂಬ ಊರಿನ ಗಣೇಶ ಎಚ್.ಎನ್.ಮತ್ತು ಚಂದ್ರಿಕಾ ಕೆ.ಎನ್. ದಂಪತಿಗಳ ಸುಪುತ್ರಿಯಾಗಿರುವ ಸಾನ್ವಿ ಜಿ.ಭಟ್ ಕಿರಿಯ ವಯಸ್ಸಿನಲ್ಲೇ ಹಿರಿಯ
ಸಾಧನೆಗೈಯ್ಯುತ್ತಿರುವುದು ಸಂತಸದ ವಿಷಯ.

ವಿದುಷಿ ವಸುಧಾ ಶರ್ಮ ಇವರಿಂದ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಸಾನ್ವಿ ಹಲವಾರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಪ್ರತಿವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯು ಏರ್ಪಡಿಸುವ ಪ್ರತಿಭಾ ಕಾರಂಜಿಯಲ್ಲಿ ವಿವಿಧ ರೀತಿಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕು ಮಟ್ಟ , ಜಿಲ್ಲಾ ಮಟ್ಟದವರೆಗೂ ತಲುಪಿ ಬಹುಮಾನ ಪಡೆದುಕೊಂಡಿದ್ದಾರೆ.

28-07-2018ರ ಸಾಗರ ತಾಲೂಕು ಮಟ್ಟದ ಮಕ್ಕಳ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪದ್ಯ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಲಭವನ ಬೆಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನಡೆಸಿದ 2019-20ನೇ ಸಾಲಿನ ಕಲಾಶ್ರೀ ಪ್ರಶಸ್ತಿ ಪ್ರದರ್ಶನ ಕಲೆಯಲ್ಲಿ ಭಾವಗೀತೆಯನ್ನು ಹಾಡಿ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಗಳಿಸಿ , ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.
ಈ ಚಿಕ್ಕ ವಯಸ್ಸಿನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರು ನಡೆಸಿದ ಚಿಗುರು ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಛೇರಿಯನ್ನು ಕೊಟ್ಟಿರುತ್ತಾರೆ.

ಬೆಂಗಳೂರಿನ ರೋಟರಿ ಕ್ಲಬ್ ನವರು ನಡೆಸಿರುವ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಅತಿ ಕಿರಿಯ ಸ್ಪರ್ಧಿಯಾಗಿ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಹಿಂದೂಸ್ತಾನಿ ಸಂಗೀತದಲ್ಲಿ ಗಂಧರ್ವ ವಿದ್ಯಾಲಯದ ಪರೀಕ್ಷೆಗಳಾದ ಪ್ರಾರಂಭಿಕ ಮತ್ತು ಪ್ರಾವೇಶಿಕದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ..

2019ರಲ್ಲಿ ಎಲ್ಐಸಿ ಅವರು ನಡೆಸಿದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿ ಹಾಗೂ ವಿವಿಧ ರೀತಿಯ ಆನ್ಲೈನ್ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ.

” ಯೋಗ ಸಾಧಕಿ -ಸಾನ್ವಿ ಜಿ. ಭಟ್”

ತನ್ನ ಸಾಧನೆಯನ್ನು ಸಂಗೀತ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಿಸದೆ ಯೋಗದಲ್ಲಿಯೂ ಗಮನಾರ್ಹ ಸಾಧನೆಗೈಯುತ್ತಿದ್ದಾರೆ. ಶ್ರೀಧರ ಮೂರ್ತಿ ಹಾಗೂ ಸಂಧ್ಯಾ ಎಂ.ಎಸ್ ಇವರಿಂದ ಯೋಗಾಭ್ಯಾಸ ಮಾಡುತ್ತಿರುವ ಈಕೆ ಹಲವಾರು ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ನಮೋ ಗಂಗಾ ಇವರು ನಡೆಸಿದ ಗ್ರಾಂಡ್ ಮಾಸ್ಟರ್ ಆಫ್ ಯೋಗ 2019ರ ಸ್ಪರ್ಧೆಯಲ್ಲಿ ಹರಿಹರ ಮತ್ತು ದೆಹಲಿಯಲ್ಲಿ ಭಾಗವಹಿಸಿದ್ದಾರೆ.
2018ರ ಕಡೂರಿನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ನಡೆಸಿರುವ 2019-20ನೇ ಸಾಲಿನ ತಾಳಬದ್ದ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಮತ್ತು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೇ 2020ರ ಯೋಗ ರಂಗೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ನ್ಯೂಮ್ ಇಂಡಿಯಾ ನಡೆಸಿದ ಸೂರ್ಯ ನಮಸ್ಕಾರ ವರ್ಲ್ಡ್ ರೆಕಾರ್ಡ್ 2021ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.
ಮತ್ತೊಂದು ಹೆಮ್ಮೆಯ ವಿಷಯವೆಂದರೆ ಈಕೆಯ ಒಂದು ಯೋಗಾಸನ ಭಂಗಿಯು 2021 ಅಂತಾರಾಷ್ಟ್ರೀಯ ಮಕ್ಕಳ ಯೋಗ ಕ್ಯಾಲೆಂಡರ್ ಗೆ ಆಯ್ಕೆ ಆಗಿದೆ. ಹಾಗೇ ಗ್ಲೋಬಲ್ ವರ್ಲ್ಡ್ ರೆಕಾರ್ಡ್ 2021 ಅವರು ನಡೆಸಿರುವ ವೃಕ್ಷಾಸನ ಭಂಗಿಯಲ್ಲಿ ಮೂರು ನಿಮಿಷಗಳ ಕಾಲ ನಿಲ್ಲುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದಿರುತ್ತಾರೆ.
ದೊಡ್ಡಬಳ್ಳಾಪುರ,ಹರಿಹರ, ಹಾವೇರಿ, ಶಿರಸಿ, ಬೆಂಗಳೂರು, ಮುಂತಾದ ಸ್ಥಳಗಳಲ್ಲಿ ನಡೆಸಿದ ಯೋಗಾಸನ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದಾರೆ.
ಕೊರೋನ ಸಮಯವನ್ನು ಸದುಪಯೋಗ ಪಡಿಸಿಕೊಂಡು ಆನ್ಲೈನ್ ನಲ್ಲಿ ನಡೆದ ಹಲವಾರು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೂ ಸಹ ಭಾಗವಹಿಸಿದ್ದಾರೆ.

ಸಂಗೀತಗಾರ್ತಿ ಮತ್ತು ವೈದ್ಯೆ ಆಗಬೇಕೆಂಬ ಗುರಿ ನನ್ನದು ಎನ್ನುತ್ತಾರೆ ಸಾನ್ವಿ ಜಿ. ಭಟ್.

ಪ್ರಸ್ತುತ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಬಂದಗದ್ದೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರಿಗೆ ಇನ್ನಷ್ಟು ಯಶಸ್ಸು ದೊರಕುವಂತಾಗಲಿ ಎಂಬ ಹಾರೈಕೆ ನಮ್ಮದು.

Leave a Reply

Your email address will not be published. Required fields are marked *