ಭಾಗವತಿಕೆಯ ಕಣ್ಮಣಿ ಚಿಂತನಾ ಹೆಗಡೆ

ಅಂಕುರ

 

ಈ ವಾರದ ಅಂಕುರ ಸಾಧಕಿಯ
ಕಂಚಿನ ಕಂಠ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಹುಟ್ಟುವುದು ಸಹಜ. ಈಗಾಗಲೇ ಯುವ ಭಾಗವತರಾಗಿ ,ಯಕ್ಷಗಾನದಲ್ಲಿ ಆಸಕ್ತಿ ಉಳ್ಳವರು ಮನವನ್ನು ಗೆದ್ದಿರುವ ಚಿಂತನ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳಕೋಡಿನ ಶ್ರೀ ಉದಯ ಹೆಗಡೆ ಮತ್ತು ಶ್ರೀಮತಿ ಪಲ್ಲವಿ ಹೆಗಡೆ ಅವರ ಸುಪುತ್ರಿ.
ಇವರ ತಂದೆ ಉದಯ ಹೆಗಡೆಯವರು ಯಕ್ಷಗಾನದಲ್ಲಿ ಹಿರಿಯ ಕಲಾವಿದರು. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಇವರ ತಂದೆಯೇ ಗುರು. ಯಕ್ಷಗಾನ ಕ್ಷೇತ್ರಕ್ಕೆ ಕಾಲಿಡಲು ಪ್ರೇರಣೆ ನೀಡಿದ್ದು ಹಾಗೂ ಈ ಕಲೆಯಲ್ಲಿ ಸಾಧಿಸ ಬೇಕೆಂಬ ಛಲವನ್ನು ಮೂಡಿಸಿದ್ದು ನಮ್ಮ ತಂದೆಯವರು ಎಂಬುವುದು ಚಿಂತನ ಹೆಗಡೆಯವರ ಅಭಿಮತ.


ಕಳೆದ ನಾಲ್ಕು ವರ್ಷಗಳಿಂದ ಕಲಿಕೆಯ ಜೊತೆ ಜೊತೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರದ್ದೇ ಸಂಸ್ಥೆಯಾದ ಯಕ್ಷ ಪಲ್ಲವ ಮೇಳದ ಕಾರ್ಯಕ್ರಮ ದಲ್ಲಿ ಕಳೆದ ಮೂರು ವರ್ಷಗಳಿಂದ ಭಾಗವತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ‌. ಇಷ್ಟಲ್ಲದೆ ಬಡಗಿನ ಬಯಲು ಮತ್ತು ಬೇರೆ ಮೇಳದಲ್ಲಿ ಅತಿಥಿಯಾಗಿ ಕೆಲವು ಕಾರ್ಯಕ್ರಮಗಳಿಗೆ ಸೇವೆ ಸಲ್ಲಿಸಿದ್ದಾರೆ.
ಹಲವಾರು ಕಾರ್ಯಕ್ರಮಗಳಲ್ಲಿ ಪ್ರಸಿದ್ಧವಂತ ಭಾಗವತರಾದ
ಜಾನಸಲೆ ರಾಘವೇಂದ್ರ ಆಚಾರ್ಯ, ವಿಧವಾನ ಗಣಪತಿ ಭಟ್ಟರು, ಕಾವ್ಯಶ್ರೀ ಅಜೆರು, ಅಮೃತ ಅಡಿಗ ಜೊತೆ ಭಾಗವತಿಗೆಗೆ ಭಾಗಿಯಾಗಿದ್ದಾರೆ.
ಹಲವಾರು ಪ್ರಸಂಗಗಳಲ್ಲಿ ಪಾಲ್ಗೊಂಡಿದ್ದು, ಕಂಸವಧೆ, ಚಂದ್ರಾವಳಿ ವಿಲಾಸ, ಭೃಗುಲಾಂಛನ, ದಕ್ಷಯಜ್ಞೆ, ಸುದರ್ಶನ ವಿಜಯ, ಸುಧನ್ವ, ವೃಷಸೇನಾ ಕಾಳಗ ಪ್ರಸಂಗಗಳು ತನ್ನ ನೆಚ್ಚಿನ ಪ್ರಸಂಗಗಳಾದರೆ ಶ್ರೀಕಾಳಿಂಗ ನಾವುಡರು, ಶ್ರೀ ಸುಬ್ರಮಣ್ಯ ಧಾರೇಶ್ವರರು,ಗೋಪಾಲ ಗಾಣಿಗರು, ಶ್ರೀ ಸುಬ್ರಮಣ್ಯ ಆಚಾರ್ಯರು ನೆಚ್ಚಿನ ಭಗವತರು ಎನ್ನುತ್ತಾರೆ ಚಿಂತನಾ ಹೆಗಡೆ.
*”ಚಿಂತಾನಾ ಹೆಗಡೆ ಗೆ ಅರಸಿ ಬಂದ ಪ್ರಶಸ್ತಿಗಳು ಹಾಗು ಸನ್ಮಾನಗಳು*”
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ “ಕಲಾಶ್ರೀ ಪ್ರಶಸ್ತಿ, ದಕ್ಷಿಣ ಕನ್ನಡದ ಸಿದ್ದಪುರದಲ್ಲಿ ಯಕ್ಷನುಡಿಸಿರಿ ಬಳಗದವರಿಂದ ಸನ್ಮಾನ, ಯಕ್ಷಗಾನದ ಮಹಾನ್ ಪ್ರೇಮಿಯಾದ ನಾವುಡರ ಆಪ್ತರಾದ ಶ್ರೀ ಕುಶಲ್ ಶೆಟ್ಟಿ ಅವರು ಕಂಚಿನ ತಾಳವನ್ನು ನೀಡಿ ಯಕ್ಷಮಾಣಿಕ್ಯ ಎಂದು ನುಡಿಸಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಇನ್ನೂ ಹಲವಾರು ಕಡೆಯಲ್ಲಿ ಸನ್ಮಾಸಿದ್ದಾರೆ.
ಯಕ್ಷರಂಗದಲ್ಲಿ ಭಾಗವತಿಕೆಯ ಅಭ್ಯಾಸದ ಜೊತೆಜೊತೆಯಲ್ಲಿ ಬಡಗಿನಲ್ಲಿ ಯಕ್ಷ ಸಂಪ್ರದಾಯವನ್ನು ಉಳಿಸಿ, ಯಕ್ಷ ಪ್ರೇಕ್ಷಕರ ಮನಗೆಲ್ಲುವ ಅತ್ಯುತ್ತಮ ಮಹಿಳಾ ಭಾಗವತೆ ಆಗಬೇಕೆಂಬ ಆಸೆಯನ್ನು ಹೊತ್ತಿರುವ ಚಿಂತನಾ ಹೆಗಡೆಯವರ ಎಲ್ಲಾ ಕನಸುಗಳು ನನಸಾಗಲಿ ಎಂಬ ಶುಭಹಾರೈಕೆ ನಮ್ಮದ್ದು.

 

Author Details


Srimukha

Leave a Reply

Your email address will not be published. Required fields are marked *