” ಗೋಮಾತೆಯ ಸೇವೆ ಮಾಡಲು ಶ್ರೀಗುರುಕೃಪೆ ಬೇಕು ” : ದೀಪಾ ಸಹದೇವ , ಬೆಂಗಳೂರು

ಮಾತೃತ್ವಮ್

” ನಾವೆಲ್ಲರೂ ಗೋಮಾತೆಯ ಹಾಲನ್ನು ಕುಡಿದು ಬೆಳೆದವರು, ಚಲಿಸುವ ದೇವಾಲಯವಾದ ಗೋಮಾತೆಯ ರಕ್ಷಣೆಗಾಗಿ ಪುರಾಣೇತಿಹಾಸಗಳಲ್ಲಿ ಅನೇಕ ಮಂದಿ ಮಹಾತ್ಯಾಗಗಳನ್ನು ಮಾಡಿದ್ದಾರೆ. ನಮ್ಮ ಬದುಕಿಗೆ ಇವರೆಲ್ಲರೂ ಮಾರ್ಗದರ್ಶಿಗಳಾಗಬೇಕು. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಶ್ರೀಗುರುಗಳ ಮಾತುಗಳೇ ನನ್ನ ಗೋಸೇವೆಗೆ ಪ್ರೇರಣೆ ” ಎಂದು ನುಡಿದವರು ಗುತ್ತಿಗಾರು ಸಮೀಪದ ಕಟ್ಟ ಮೂಲದ ಪ್ರಸ್ತುತ ದಕ್ಷಿಣ ಬೆಂಗಳೂರು ಮಂಡಲದ ,ಗಿರಿನಗರ ವಲಯದಲ್ಲಿ ವಾಸಿಸುತ್ತಿರುವ ಸಹದೇವ ಕಟ್ಟ ಇವರ ಪತ್ನಿ ದೀಪಾ.

ಮಂಗಳೂರಿನ ವಿಜಯ ಭಟ್ ಹಾಗೂ ಜಯಶ್ರೀ ದಂಪತಿಗಳ ಪುತ್ರಿಯಾದ ದೀಪಾ ಸಹದೇವ ಅವರಿಗೆ ಜೀವನದಲ್ಲಿ ಶ್ರೀಗುರುಗಳ ಆಶೀರ್ವಚನಗಳೇ ದಾರಿದೀಪ.

ಸುಮಾರು ಇಪ್ಪತ್ತು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಇವರ ಬದುಕಿನ ಶ್ರೀರಕ್ಷೆ ಶ್ರೀಗುರುಗಳ ಅನುಗ್ರಹ ಎಂಬ ನಂಬಿಕೆ ಇವರದ್ದು. ಶ್ರೀಗುರುಗಳ ಸಮಾಜಮುಖೀ ಕಾರ್ಯಗಳಿಂದ ಪ್ರೇರಣೆಗೊಂಡ ಇವರು ಈಗಾಗಲೇ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನವನ್ನು ಸ್ವೀಕರಿಸಿದವರು. ಅಭಯಾಕ್ಷರ ಅಭಿಯಾನ, ಬನಶಂಕರಿ ದೇವಾಲಯದ ದೀಪಸೇವೆ, ಹಾಲುಹಬ್ಬಗಳಲ್ಲಿ ಭಾಗವಹಿಸಿದವರು. ತಮ್ಮ ಇಬ್ಬರು ಪುತ್ರಿಯರಾದ ಸಮೀಕ್ಷಾ ಹಾಗೂ ಸಾನ್ವಿಯರಿಗೂ ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕುವಂತೆ ಮಾಡಿದ್ದಾರೆ. ಇಬ್ಬರು ಪುತ್ರಿಯರೂ ಕನ್ಯಾ ಸಂಸ್ಕಾರ ಪಡೆದವರು.

ದೀಪಾ ಸಹದೇವ ಅವರ ಕಿರಿಯ ಪುತ್ರಿ ಸಾನ್ವಿ ಕೆಲವು ವರ್ಷಗಳ ಹಿಂದೆ ಹಾಲು ಹಬ್ಬದ ಸಂದರ್ಭದಲ್ಲಿ ಕರಕುಶಲ ಕಲೆಯಿಂದ ತಾನೇ ಕೈಯಾರೆ ತಯಾರಿಸಿದ ಕಿವಿಯೋಲೆಗಳನ್ನು ವಿಕ್ರಯಿಸಿ ದೊರಕಿದ ಮೌಲ್ಯವನ್ನು ಪೂರ್ತಿಯಾಗಿ ಶ್ರೀಮಠದ ಗೋಸಂರಕ್ಷಣಾ ಯೋಜನೆಗೆ ಸಮರ್ಪಿಸುವ ಮೂಲಕ ತನ್ನ ಗೋಪ್ರೇಮವನ್ನು ಮೆರೆದಿದ್ದಾಳೆ.

” ಶ್ರೀಗುರುಗಳ ಅನುಗ್ರಹದಿಂದ ಮನದಲ್ಲಿ ಭಾವಿಸಿದ ಅನೇಕ ಕಾರ್ಯಗಳು ಸುಲಲಿತವಾಗಿ ಕೈಗೂಡಿವೆ. ಬೆಟ್ಟದಂತೆ ಬಂದ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗಿದ್ದು ಶ್ರೀರಾಮ ದೇವರ ಕೃಪೆಯಿಂದ ಎಂಬ ನಂಬಿಕೆ ನಮ್ಮದು. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದೇನೆ, ಅಮ್ಮ, ಅಪ್ಪ, ತಂಗಿ ಮಾತ್ರವಲ್ಲದೆ ಅನೇಕ ಮಂದಿ ಸ್ನೇಹಿತರು, ಗೋಪ್ರೇಮಿಗಳು ಈ ಯೋಜನೆಗೆ ಕೈ ಜೋಡಿಸಿದ್ದಾರೆ ” ಎನ್ನುವ ದೀಪಾ ಅವರು ಈ ಸಂದರ್ಭದಲ್ಲಿ ಕೆಲವು ಕಹಿ ಅನುಭವಗಳನ್ನು ಎದುರಿಸಿದವರು.

ಎರಡು ಬಾರಿ ಶ್ರೀಗುರುಗಳ ಭಿಕ್ಷಾ ಸೇವೆ, ಪಾದಪೂಜೆಗಳನ್ನು ನಡೆಸುವ ಸೌಭಾಗ್ಯ ಒದಗಿ ಬಂದಿರುವುದು ಜೀವನದ ಸುಕೃತ ಎಂಬ ಭಾವನೆ ಇವರದ್ದು.

” ಹಸುಗಳನ್ನು ಸಾಕಲು ಅನುಕೂಲವಿಲ್ಲದ ನಗರ ನಿವಾಸಿಗಳಿಗೆ ಶ್ರೀಗುರುಗಳ ಈ ಯೋಜನೆ ತುಂಬಾ ಉಪಯೋಗಪ್ರದವಾಗಿದೆ. ಗೋಸೇವೆ, ಶ್ರೀಗುರು ಸೇವೆಗಳಿಂದ ಮನಸ್ಸು ಸದಾ ನೆಮ್ಮದಿಯಿಂದ ಇರುತ್ತದೆ ” ಎನ್ನುವ ದೀಪಾ ಸಹದೇವ ಅವರಿಗೆ ಈ ಸೇವೆಯಲ್ಲಿ ಇನ್ನಷ್ಟು ಮುಂದುವರಿಯುವ ಹಂಬಲವಿದೆ.

 

Leave a Reply

Your email address will not be published. Required fields are marked *