ಪರಮಾನುಗ್ರಹದ ಪರಮಪದ ಬಯಸುವ ಸೇವಾಬಿಂದುಗಳು : ಸಾವಿತ್ರಿ ಜಿ. ಭಟ್ ಮತ್ತು ಪುತ್ರಿಯರು

ಮಾತೃತ್ವಮ್

ಮಂಗಳೂರು ಮಂಡಲದ , ವಿಟ್ಲ ವಲಯದ ಸಾವಿತ್ರಿ ಜಿ.ಭಟ್ ಹಾಗೂ ಪುತ್ರಿಯರ ಪರಿಚಯವಿಲ್ಲದ ಶ್ರೀಮಠದ ಶಿಷ್ಯರು ವಿರಳ ಎನ್ನಬಹುದು. ಈ ಮೂವರೂ ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯರಾಗಿದ್ದಾರೆ.

ಶ್ರೀಗುರುಸೇವೆಯಲ್ಲಿಯೇ ಬದುಕಿನ ನೆಮ್ಮದಿ, ಶಾಂತಿ ಕಾಣುತ್ತಿರುವ ಈ ಮಾತೆಯರ ಬದುಕಿನಲ್ಲಿ ಶ್ರೀಮಠದ ಸೇವೆಗೆ ಮೊದಲ ಆದ್ಯತೆಯನ್ನು ಕಾಣಬಹುದು. ಇವರ ಸೇವೆಗೆ ಪರಿಮಿತಿ ಎಂಬುದೇ ಇಲ್ಲ. ‘ಪೂರ್ಣತೆಯ ಬದುಕಿನೆಡೆಗೆ ಸಾಗಲು ಧರ್ಮ ಮಾರ್ಗವನ್ನು ತೋರಿ ಗುರುಗಳೇ ‘ ಎಂಬ ಪ್ರಾರ್ಥನೆ ಈ ಮೂರೂ ಕುಟುಂಬಗಳದ್ದು.

ಮನೆಗಳು ಬೇರೆ ಬೇರೆಯಾದರೂ ಮೂವರ ಮನದ ಭಾವನೆಗಳು ಒಂದೇ..! ಶ್ರೀಗುರುಸೇವೆಯಲ್ಲಿ ಸದಾ ಮಗ್ನರಾಗ ಬಯಸುವ ಅವರು ಹೆಸರು, ಪ್ರಚಾರಗಳಿಂದ ದೂರ ಇರಲು ಬಯಸುತ್ತಾರೆ. ಅವರ ಮನದ ಭಾವಗಳಿಗೆ,ಮಾತುಗಳಿಗೆ ಅಕ್ಷರ ರೂಪ ನೀಡುವುದು ಸುಲಭ ಸಾಧ್ಯವಿಲ್ಲ..! ಶ್ರೀಗುರು ಪೀಠದ ಮೇಲಿರುವ ಅಚಲ ನಂಬಿಕೆ, ಶ್ರದ್ದೆಗಳಲ್ಲಿ ಅವರಿಗೆ ಅವರೇ ಸಾಟಿ ಎಂಬುದೇ ಸತ್ಯ.

” ಬಾಳಿನ ಏರಿಳಿತಗಳಲ್ಲಿ ಹಿಗ್ಗದೆ, ಕುಗ್ಗದೆ ಮುನ್ನಡೆಯುವ ಭರವಸೆಯನ್ನು ತುಂಬುವುದು ಶ್ರೀಗುರುಗಳ ಆಶೀರ್ವಚನಗಳು, ಶ್ರೀ ಸಂಸ್ಥಾನದವರು ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೈಗೊಳ್ಳುವ ನೂರಾರು ಕಾರ್ಯಗಳಲ್ಲಿ ಅದೆಷ್ಟೋ ಮಂದಿ ನಮಗಿಂತಲೂ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ, ಅಂತಹ ಮಂದಿಗೆ ಹೋಲಿಸಿದರೆ ನಮ್ಮದೇನಿದೆ….? ದೇವರು ನೀಡಿರುವ ಈ ಬದುಕನ್ನು ಸಾರ್ಥಕ ಗೊಳಿಸುವ ಅವಕಾಶವನ್ನು ಮಾತ್ರ ಶ್ರೀಚರಣಗಳಲ್ಲಿ ನಿರಂತರ ಬೇಡಿಕೊಳ್ಳುವವರು ನಾವು ” ಶ್ರೀ ಗುರುಚರಣಗಳ ಮೇಲಿರುವ ಅನನ್ಯ ಭಕ್ತಿ ಸಾವಿತ್ರಿ ಭಟ್ ಕಜೆಹಿತ್ತಿಲು ಹಾಗೂ ಅವರ ಇಬ್ಬರು ಪುತ್ರಿಯರಾದ ವಿಜಯಾ ನೀರ್ಪಾಜೆ ಹಾಗೂ ವೀಣಾ ಸರಸ್ವತಿ ಅಳಕೆಮಜಲು ಅವರ ಮಾತುಗಳಲ್ಲಿ ಬೆರೆತು ಬಂದಿದೆ.

ಎಳವೆಯಿಂದಲೇ ಶ್ರೀಮಠದ ಸಂಪರ್ಕ ಹೊಂದಿರುವ ಸಾವಿತ್ರಿ ಭಟ್ ಅವರಿಗೆ ಮದುವೆಯ ನಂತರವೂ ಅದನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ದೊರಕಿತು. ಬ್ಯಾಂಕ್ ಉದ್ಯೋಗಿಯಾಗಿದ್ದ ಪತಿ ಗೋವಿಂದ ಭಟ್ ಅವರ ಸಂಪೂರ್ಣ ಸಹಕಾರ ಸಾವಿತ್ರಿ ಭಟ್ ಅವರಿಗೆ ದೊರಕಿದೆ. ಈ ಇಳಿ ವಯಸ್ಸಿನಲ್ಲಿಯೂ ಶ್ರೀಗುರು ಸೇವೆ, ಗೋಮಾತೆಯ ಸೇವೆ ಎಂದರೆ ಅವರಿಗೆ ಮತ್ತೊಮ್ಮೆ ಎಳೆ ಹರೆಯ ಮರುಕಳಿಸಿದಂತಹ ಭಾವನೆ. ಬಹಳ ವರ್ಷಗಳ ಕೋರಿಕೆಯಾದ ಶ್ರೀಗುರು ಭಿಕ್ಷಾಸೇವೆಯನ್ನು ತಮ್ಮ ಮನೆಯಲ್ಲಿ ನೆರವೇರಿಸಲು ದೈವಕೃಪೆ ಒದಗಿ ಬಂದಿದೆ ಎಂಬ ಸಾರ್ಥಕ ಭಾವ ಅವರ ನುಡಿಗಳಲ್ಲಿ ಅಡಗಿದೆ.

‘ ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮಾ ‘ ಎಂಬ ಕವಿವಾಣಿಯಂತೆ ಸಾವಿತ್ರಿ ಜಿ.ಭಟ್ ಬಯಸುವುದು ಏನು ಎಂಬುದನ್ನು ಅವರ ಮಾತುಗಳಿಂದಲೇ ತಿಳಿಯೋಣ.

” ಎರಡು ದಶಕಗಳಿಂದ ನಾನು ಹಾಗೂ ಮಕ್ಕಳು ಶ್ರೀಮಠದ ಸೇವೆಯಲ್ಲಿ ಸಂಪೂರ್ಣ ನಿರತರಾಗಿದ್ದೇವೆ. ಸೇವೆ ಮಾಡುವುದು ನಾವಲ್ಲ, ನಮಗೆ ಅಂತಹ ಅವಕಾಶ ಒದಗಿಸುವುದೇ ದೇವರು, ಶ್ರೀಗುರುಗಳ ಪರಮಾನುಗ್ರಹದ ಆಶೀರ್ವಾದ ಮಂತ್ರಾಕ್ಷತೆಗಿಂತ ಮಿಗಿಲಾಗಿ ಯಾವುದಿದೆ ? ನನ್ನ ಆರೋಗ್ಯದ ರಹಸ್ಯವೇ ಮಂತ್ರಾಕ್ಷತೆ. ಪ್ರತಿದಿನವೂ ಅದನ್ನು ಸ್ವೀಕರಿಸುವಂತಾಗಬೇಕು ಎಂಬುದು ಮಾತ್ರ ನನ್ನ ಹಂಬಲ ” ಎನ್ನುವ ಸಾವಿತ್ರಿ ಜಿ. ಭಟ್ ಅವರ ಮಾತುಗಳು ಶ್ರೀಗುರು ಕಾರುಣ್ಯವನ್ನೇ ಸದಾ ಹಂಬಲಿಸುವ ಅವರ ಮನಸ್ಸನ್ನು ತೆರೆದಿಡುತ್ತದೆ.

ಸಾವಿತ್ರಿ ಭಟ್ ಅವರ ಮಕ್ಕಳು ವಿಜಯಾ ನೀರ್ಪಾಜೆ, ಮುರಳೀಕೃಷ್ಣ ಕಜೆಹಿತ್ತಿಲು ಹಾಗೂ ಕಿರಿಯ ಪುತ್ರಿ ವೀಣಾ ಸರಸ್ವತಿ ಅಳಕೆ ಮಜಲು.ಮೂವರೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು.

ನೀರ್ಪಾಜೆ ಮನೆತನದ ಉದಯಶಂಕರ ಅವರ ಪತ್ನಿಯಾದ ವಿಜಯಾ ಅಮ್ಮನ ಮಾರ್ಗದರ್ಶನದಲ್ಲಿ ಶ್ರೀಮಠದ ಸಂಪರ್ಕಕ್ಕೆ ಬಂದವರು. ಗೋಸೇವೆ, ಶ್ರೀಗುರುಸೇವೆಯಲ್ಲಿ ಸಂತಸ, ನೆಮ್ಮದಿ ಕಾಣುವವರು.

” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಲೌಕಿಕವಾದ ಆಸೆ ಆಕಾಂಕ್ಷೆಗಳು ಅಡಗಿ ಹೋಗಿವೆ. ಶ್ರೀಗುರುಗಳ ಪ್ರವಚನದ ತತ್ವ ಭಾಗವತ,ಸಾಧನಾ ಪಂಚಕಗಳ ಪುಣ್ಯ ಶ್ರವಣದ ಸೌಭಾಗ್ಯದಿಂದ ಬದುಕಿನ ಪಥವೇ ಬದಲಾದಂತಾಗಿದೆ, ಇಂದು ಉಣ್ಣುವ ಪ್ರತಿಯೊಂದು ತುತ್ತಿನಲ್ಲಿರುವ ಅಗುಳು ಶ್ರೀಗುರು ಕರುಣೆಯ ಕಣ, ಈ ಜನ್ಮದಲ್ಲಿ ತೀರಿಸಲಾರದ ಋಣ ಇದು, ಶ್ರೀ ಗುರುಗಳ ಪರಮಾಶೀರ್ವಾದವೇ ಈ ಬದುಕು. ಇನ್ನೆಷ್ಟು ಜನುಮಗಳಿದ್ದರೂ ಶ್ರೀಮಠದ ಶಿಷ್ಯೆಯಾಗಿ ಜನಿಸುವ ಸೌಭಾಗ್ಯ ಒದಗಿ ಬಂದು, ಸೇವೆ ಮಾಡುವ ಅವಕಾಶವೂ ದೊರಕುವಂತಾಗ ಬೇಕು ಎಂಬುದೇ ಜೀವನದ ಮಹತ್ವದ ಹಂಬಲ ” ಎನ್ನುವ ವಿಜಯಾ ನೀರ್ಪಾಜೆ ಶ್ರೀಚರಣಗಳನ್ನೇ ಸದಾ ಸ್ಮರಿಸುವವರು. ಇವರ ಪುತ್ರಿ ಅಂಕಿತಾ ನೀರ್ಪಾಜೆ ಸಹಾ ಮಾಸದ ಮಾತೆಯಾಗಿದ್ದಾಳೆ, ವಿದ್ಯಾಲಕ್ಷ್ಮಿ ವಿಭಾಗದ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಾ ತನ್ನ ಹಿರಿಯರ ಹಾದಿಯನ್ನು ಅನುಸರಿಸುತ್ತಿದ್ದಾಳೆ.

ಇವರ ಮನೆಯಲ್ಲಿ ನಡೆದ ಶ್ರೀಗುರು ಭಿಕ್ಷಾಸೇವೆಯ ಸಂದರ್ಭದಲ್ಲಿ ‘ ಶ್ರೀಗುರು ವಂದನೆ ‘ ಎಂಬ ವಿಶೇಷ ಕಾರ್ಯಕ್ರಮವೊಂದು ಗೋಕರ್ಣ ಮಂಡಲದಲ್ಲೇ ಪ್ರಥಮವಾಗಿ ನೆರವೇರಿತು. ಮಗ ಚಿನ್ಮಯನ ಮೂಲಕವಾಗಿ ನಡೆಸಿದ ಈ ಸೇವೆಯು ನೀರ್ಪಾಜೆ ಕುಟುಂಬದ ಶ್ರೀಗುರು ಭಕ್ತಿಗೆ ಮಾದರಿಯಾಗಿದೆ.

ಅಳಕೆಮಜಲು ಗಣೇಶ್ ಪ್ರಸಾದ್ ಅವರ ಪತ್ನಿಯಾಗಿರುವ ವೀಣಾ ಸರಸ್ವತಿ, ಸಾವಿತ್ರಿ ಜಿ. ಭಟ್ ಅವರ ಕಿರಿಯ ಪುತ್ರಿ. ಅಮ್ಮ ಅಕ್ಕಂದಿರಿಗಿಂತ ಇವರ ಭಾವ ಭಕ್ತಿ ಇನಿತೂ ಕಡಿಮೆಯಲ್ಲ.

” ಅಕ್ಕನ ಮೂಲಕ ಶ್ರೀಮಠದ ಸಂಪರ್ಕ ದೊರಕಿತು. ಅಂದಿನಿಂದ ಶ್ರೀಸಂಸ್ಥಾನದವರ ಚರಣಗಳನ್ನೇ ಶ್ರದ್ದಾಭಕ್ತಿಗಳಿಂದ ನಂಬಿಕೊಂಡು ಒಳಿತಿನ ಕಡೆಗೆ ಮನವನ್ನು ಹರಿಸುವಂತಹ ಅವಕಾಶವನ್ನು ಪಡೆದುಕೊಂಡಿದ್ದೇವೆ, ಅಕ್ಕನ ಜೊತೆಗೆ ರಾಮಪದ ಕಾರ್ಯಕ್ರಮದಲ್ಲಿ ಹಾಡುವ ಅವಕಾಶವೂ ಒದಗಿ ಬಂದಿದೆ. ನಾವು ಮೂವರೂ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯರಾಗಿ ಲಕ್ಷದ ಗುರಿಯನ್ನು ತಲುಪಿದ್ದೇವೆ. ನಮ್ಮದು ನಿತ್ಯ ನಿರಂತರ ಸೇವೆ, ಶ್ರೀಗುರುಗಳ ಜ್ಞಾನವಾಹಿನಿಯು ಮನದ ಕೊಳೆಯನ್ನು ತೊಳೆದು ಅಲ್ಲಿ ಭಕ್ತಿಯೆಂಬ ಕುಸುಮಗಳನ್ನೇ ಅರಳಿಸಿದೆ. ಅದನ್ನೇ ರಾಮಪದತಲಕ್ಕೆ ಅರ್ಪಿಸಿ ಶರಣಾಗುವವರು ನಾವು ” ಎಂದು ನುಡಿಯುವ ವೀಣಾ ಸರಸ್ವತಿ ಅವರ ಅಳಕೆಮಜಲು ನಿವಾಸದ ಹೆಸರೇ ” ಶ್ರೀ ಶರಣಮ್ “. ನೂತನ ಗೃಹದಲ್ಲಿ ತಾವು ವಾಸಿಸುವುದಕ್ಕೂ ಮೊದಲೇ ಶ್ರೀಗುರುಗಳ ಭಿಕ್ಷಾಸೇವೆ ನಡೆದು, ಶ್ರೀಕರಾರ್ಚಿತ ದೇವರುಗಳ ಪೂಜೆಯನ್ನು ನೋಡಬೇಕೆಂಬ ಇವರ ಹಂಬಲ ನೆರವೇರಿದ್ದು ಶ್ರೀರಾಮಾನುಗ್ರಹದಿಂದ, ಶ್ರೀಗುರುಗಳ ಕೃಪೆಯಿಂದ ಎಂಬುದು ಇವರ ಅಚಲ ನಂಬಿಕೆ.

ಸದಾ ಶ್ರೀಮಠದ ಸೇವೆಗಾಗಿಯೇ ಮಿಡಿಯುವ ಹೃದಯವುಳ್ಳ ಈ ಮಾತೆಯರ ಶ್ರೀಗುರುಭಕ್ತಿ ಅನನ್ಯ.‌ಅದನ್ನು ವಿವರಿಸಲು, ಹೋಲಿಸಲು ಪದಗಳೇ ಸಿಗುತ್ತಿಲ್ಲ. ಅವರ ನಡೆನುಡಿಗಳಲ್ಲಿ ಸಮರ್ಪಣಾ ಭಾವವಿದೆ. ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಅನನ್ಯ ಸೇವೆಯ ಅನುಪಮ ಭಾವಬಿಂದುಗಳಾದ ಇವರ ಸೇವೆ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ.

Author Details


Srimukha

Leave a Reply

Your email address will not be published. Required fields are marked *