” ವಿಧಿ ವೈಪರೀತ್ಯಗಳು ನಮ್ಮ ಜೀವನದಲ್ಲಿ ಏರಿಳಿತಗಳನ್ನು ಸೃಷ್ಟಿಸುವಾಗಲೂ ಶ್ರೀಗುರುಗಳ ಮೇಲಿನ ಅಚಲ ಶ್ರದ್ಧಾಭಕ್ತಿಗಳು ನಮ್ಮನ್ನು ಬೆಂಬಿಡದೆ ಕಾಪಾಡುತ್ತವೆ. ಕಷ್ಟ ಪರಂಪರೆಗಳು ಮಂಜಿನಂತೆ ಕರಗಿಹೋಗಿ ಮನದ ಇಷ್ಟಾರ್ಥಗಳು ಈಡೇರುತ್ತವೆ ” ಶ್ರೀಗುರುಪೀಠದ ಮೇಲಿನ ಅಚಲ ನಂಬಿಕೆಯ ಈ ನುಡಿಗಳು ಉಪ್ಪಿನಂಗಡಿ ಮಂಡಲ ವೇಣೂರು ವಲಯದ ಅರ್ಕಳದ ಚಂದ್ರಶೇಖರ ಮುರುಗಜೆಯವರ ಪತ್ನಿ ಶಶಿಪ್ರಭಾ ಅವರದ್ದು.
ಪಾಲಾರು ರಾಮ ಭಟ್, ಸವಿತಾ ದಂಪತಿಗಳ ಪುತ್ರಿಯಾದ ಇವರು ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.
” ಗುರುಸೇವೆಯಲ್ಲಿ ,ಗೋಸೇವೆಯಲ್ಲಿ ತೊಡಗಿಸಿಕೊಂಡಾಗ ಮನಸ್ಸು ನಿರ್ಮಲವಾಗುತ್ತದೆ. ಸೇವೆಗೆ ನಮ್ಮನ್ನು ನಾವು ಸಮರ್ಪಿಸಿಕೊಂಡಾಗ ದೊರಕುವ ಆನಂದ ಅನಿರ್ವಚನೀಯ. ಶ್ರೀಗುರುಗಳ ಕೃಪೆಯಿಂದ ನಮ್ಮ ಬದುಕಿನ ಅನೇಕ ಸಂಕಷ್ಟಗಳು ಪರಿಹಾರವಾಗಿವೆ. ಹೊಸ ಜಾಗ ಖರೀದಿಸಿದ ಸಂದರ್ಭದಲ್ಲಿ, ನೀರಿನ ವ್ಯವಸ್ಥೆಗಾಗಿ ಬೋರ್ ವೆಲ್ ಮಾಡುವ ಸಂದರ್ಭದಲ್ಲಿ ಶ್ರೀಗುರುಗಳ ಮಂತ್ರಾಕ್ಷತೆಯ ಮಹಿಮೆ ನಮ್ಮ ಅರಿವಿಗೆ ಬಂದಿದೆ. ಗೋಮಾತೆಯ ಮೇಲಿನ ಪ್ರೀತಿಯಿಂದ ಮಾಸದಮಾತೆಯಾದೆ. ದೇಶೀಯ ಗೋವಿನ ಮಹತ್ವವನ್ನು ಸಮಾಜದ ವಿವಿಧ ಸ್ತರಗಳ ಜನರು ಮೆಚ್ಚಿಕೊಂಡಿದ್ದಾರೆ. ಶ್ರೀಮಠ, ಗೋಸ್ವರ್ಗಗಳಿಗೆ ಹೋಗುವಾಗ ಇತರ ಸಮಾಜದವರನ್ನೂ ಕರೆದೊಯ್ದಿದ್ದೇವೆ. ನಮ್ಮ ಮಠದ ವಿವಿಧ ಯೋಜನೆಗಳನ್ನು ಕಣ್ಣಾರೆ ಕಂಡ ಮೇಲೆ ಅನೇಕ ಮಂದಿ ತಾವಾಗಿಯೇ ಸಹಕಾರ ನೀಡಲು ಮುಂದೆ ಬಂದಿದ್ದಾರೆ ” ಎನ್ನುತ್ತಾರೆ ಶಶಿಪ್ರಭಾ. ಈ ದಂಪತಿಗಳು ಗುರುಕುಲ ಚಾತುರ್ಮಾಸ್ಯದ ದಾನಮಾನ ಕಾರ್ಯಕ್ರಮದಲ್ಲಿ ಶ್ರೀಗುರುಗಳಿಂದ ವಿಶೇಷ ಅನುಗ್ರಹಕ್ಕೆ ಪಾತ್ರರಾದವರು.
ಇವರ ಇಬ್ಬರು ಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ಆಸಕ್ತಿಯಿದೆ. ಮನೆಯವರ ಸಂಪೂರ್ಣ ಸಹಕಾರದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಈ ಹಿಂದೆ ವಲಯ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಮನೆಯಿಂದಲೇ ಗೋಸೇವೆ ಮಾಡುವ ಅವಕಾಶ ದೊರಕಿದೆ ಎಂದು ಹರ್ಷಿಸುವ ಶಶಿಪ್ರಭಾಗೆ ಗೋಸೇವೆ, ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ಮುಂದುವರಿಯುವ ಹಂಬಲವಿದೆ.
ಪ್ರಸನ್ನಾ ವಿ ಚೆಕ್ಕೆಮನೆ