” ಶ್ರೀಗುರು ಸನ್ನಿಧಿಯ ಸಂಪರ್ಕದಿಂದ ಗೋಮಾತೆಯ ಸೇವೆ ಸಾಧ್ಯವಾಯಿತು: ಹೇಮಾ ಭಟ್, ಬೆಂಗಳೂರು

ಮಾತೃತ್ವಮ್

 

” ಮಾತೃ ಸ್ವರೂಪಿಯಾದ ಗೋಮಾತೆಯ ಒಡನಾಟ ಬಾಲ್ಯದಿಂದಲೇ ದೊರಕಿತ್ತು. ತವರುಮನೆಯಲ್ಲಿ ಈಗಲೂ ಹಸು ಸಾಕಣೆ ಇದೆ.ನಾವು ನಗರ ನಿವಾಸಿಗಳಾಗಿರುವುದರಿಂದ ಹಸು ಸಾಕಣೆ ಸುಲಭವಲ್ಲ. ಆದರೂ ಶ್ರೀಗುರುಗಳ ಪರಮಾನುಗ್ರಹದಿಂದ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡುತ್ತಿರುವ ನೆಮ್ಮದಿ ಮನಸ್ಸಿಗೆ ದೊರಕುತ್ತಿದೆ ” ಎಂಬ ಸಾರ್ಥಕ ಭಾವದ ನುಡಿಗಳು ಬೆಂಗಳೂರಿನ ಹೇಮಾ ಭಟ್ ಅವರದ್ದು.

 

ಮೂಲತಃ ಕಾಸರಗೋಡಿನ ಪೆಲತ್ತಡ್ಕದವರಾದ ಇವರು ಪ್ರಸ್ತುತ ಬೆಂಗಳೂರು ಉತ್ತರ ಮಂಡಲದ ಸಂಜಯ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

 

ಕಾಸರಗೋಡಿನ ಕುಂಡೇರಿ ಮನೆತನದ ಪರಮೇಶ್ವರ ಭಟ್, ಸರಸ್ವತಿ ಅಮ್ಮ ದಂಪತಿಗಳ ಪುತ್ರಿಯಾದ ಹೇಮಾ ಭಟ್ ಪೆಲತ್ತಡ್ಕದ ಶಂಕರನಾರಾಯಣ ಭಟ್ ಇವರ ಪತ್ನಿ.

 

” ಹಿಂದೆ ಪ್ರತಿಯೊಂದು ಮನೆಯಲ್ಲೂ ಹಟ್ಟಿ ಇತ್ತು. ಹಟ್ಟಿ ತುಂಬಾ ಹಸುಗಳೂ ಇದ್ದವು. ಪುಟ್ಟ ಕರುಗಳ ಒಡನಾಟ ಮನಸ್ಸಿಗೆ ಮುದ ನೀಡುತ್ತಿತ್ತು. ಆದರೆ ವರ್ಷಗಳು ಉರುಳಿದಂತೆ ಹತ್ತು ಹಲವು ಕಾರಣಗಳಿಂದಾಗಿ ಅದಕ್ಕೆ ಚ್ಯುತಿ ಬಂದಿದೆ. ಹಟ್ಟಿ ತುಂಬಾ ಹಸುಗಳಿದ್ದ ಮನೆಯಲ್ಲಿ ಕೇವಲ ಒಂದೋ, ಎರಡೋ ಹಸುಗಳು ಮಾತ್ರ ಇವೆ. ಕೆಲವು ಕಡೆಗಳಲ್ಲಿ ಅದೂ ಇಲ್ಲ. ದೇಶೀಯ ಗೋವುಗಳ ಸಂತತಿ ಅಳಿಯುತ್ತಿರುವ ಹಂತದಲ್ಲಿ ನಮ್ಮ ಶ್ರೀ ಗುರುಗಳು ಮಾತೆಯರಿಗೆ ಒಂದು ಉತ್ತಮ ಅವಕಾಶವನ್ನು ಒದಗಿಸಿಕೊಟ್ಟು ಗೋಸೇವೆಯ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಅನುಕೂಲತೆ ನೀಡಿದ್ದಾರೆ, ನಾವು ಮನೆಯಲ್ಲೇ ಇದ್ದುಕೊಂಡು ಈ ಸೇವೆ ಮಾಡಬಹುದು ಎಂಬುದೇ ಈ ಗೋಸೇವೆಯ ವಿಶೇಷತೆ. ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಮಾಡಲು ತುಂಬಾ ಆನಂದವಾಗುತ್ತಿದೆ ” ಎನ್ನುವ ಹೇಮಾ ಭಟ್ ಅವರು ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ,ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ಸರಳ ಜೀವನಕ್ಕೆ ಮಾರು ಹೋಗಿ ತಮ್ಮ ಬದುಕಿನಲ್ಲಿ ಸಾಧ್ಯವಾದಷ್ಟು ರೀತಿಯಲ್ಲಿ ಅದನ್ನು ಅಳವಡಿಸಿ ಕೊಂಡಿದ್ದಾರೆ.

 

ಉಡುಗೆ ತೊಡುಗೆ, ಅಲಂಕಾರ ವಸ್ತುಗಳು ಎಂದು ಹತ್ತು ಹಲವು ರೀತಿಯಲ್ಲಿ ಪೋಲಾಗುವ ಹಣವನ್ನು ಗೋಮಾತೆಗಾಗಿ ನೀಡಿದರೇನು ಎಂಬ ಯೋಚನೆ ಬಂದ ತಕ್ಷಣವೇ ಅದನ್ನು ಬದುಕಿನಲ್ಲಿ ರೂಢಿಸಿಕೊಂಡ ಹೇಮಾ ಭಟ್ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನವನ್ನು ಪಡೆದವರು.

 

” ಬೆಂಗಳೂರು ನಗರದಲ್ಲಿ ಸ್ವಂತ ಸೂರು ಎಂಬ ಕನಸು ಹೊತ್ತು ಹಲವಾರು ಅಡಚಣೆಗಳಿಂದಾಗಿ ಆಸೆ ಕೈಗೂಡದೆ ತೊಳಲಾಡುತ್ತಿರುವಾಗ ಹಿರಿಯರೊಬ್ಬರ ಸಲಹೆಯಂತೆ ಶ್ರೀಗುರುಗಳ ಮಂತ್ರಾಕ್ಷತೆಯನ್ನು ಪಡೆದೆವು. ಶ್ರೀ ಸಂಸ್ಥಾನದವರ ಅನುಗ್ರಹದಿಂದ ಮುಂದಿನ ಕಾರ್ಯಗಳೆಲ್ಲ ಸುಲಲಿತವಾಗಿ ಕೈಗೂಡಿ ಸ್ವಂತ ನಿವೇಶನವೆಂಬ ನಮ್ಮ ಕನಸು ನನಸಾಯಿತು. ಇದು ಬದುಕಿನಲ್ಲಿ ಎಂದೂ ಮರೆಯಲಾರದ ಅನುಭವ ” ಎನ್ನುವ ಹೇಮಾ ಭಟ್ ನಿರಂತರವಾಗಿ ಗೋಸೇವೆಯಲ್ಲಿ ಮುಂದುವರಿಯಬೇಕೆಂಬ ಗುರಿ ಹೊಂದಿದ್ದಾರೆ.

 

” ಮಾತೃತ್ವಮ್ ಯೋಜನೆಯ ಗುರಿ ತಲುಪಲು ಅನೇಕ ಸ್ನೇಹಿತರು, ಸಂಬಂಧಿಕರು,ಆತ್ಮೀಯರು ಸಹಕಾರ ನೀಡಿದ್ದಾರೆ, ಈಗ ಕೊರೋನಾ ಕಾರಣದಿಂದ ಸ್ವಲ್ಪ ಮಟ್ಟಿನ ಅಡಚಣೆಯಾಗುತ್ತಿದೆ. ಆದರೂ ಸಾಧ್ಯವಾದಷ್ಟು ರೀತಿಯಲ್ಲಿ ಸೇವೆ ಮಾಡುತ್ತಿದ್ದೇನೆ. ಗೋವುಗಳಿಗಾಗಿ ಎಂದಾಗ ಅದೆಷ್ಟೋ ಜನ ಖುಷಿಯಿಂದ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ, ಗೋಸೇವೆಯಲ್ಲಿ ಸಾರ್ಥಕ ಭಾವವಿದೆ, ಶ್ರೀಗುರುಗಳ ನಿರಂತರ ಅನುಗ್ರಹದಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮನೆಯವರ, ಮಕ್ಕಳ ಸಂಪೂರ್ಣ ಸಹಕಾರವಿದೆ. ಇನ್ನಷ್ಟು ಸೇವೆಗೈಯುವ ಅವಕಾಶ ಒದಗಿಬರಲಿ ಎಂಬುದೇ ನಿತ್ಯ ಪ್ರಾರ್ಥನೆ ” ಇದು ಹೇಮಾ ಭಟ್ ಅವರ ಮನದಾಳದ ನುಡಿಗಳು.

Author Details


Srimukha

Leave a Reply

Your email address will not be published. Required fields are marked *