” ಹದಿನಾರು ವರ್ಷಗಳ ಹಿಂದೆ ಬೆಂಗಳೂರು ನಗರದಿಂದ ಬಂದು ಉಜಿರೆಯಲ್ಲಿ ವಾಸ್ತವ್ಯ ಹೂಡಿದವರು ನಾವು. ಶ್ರೀಗುರುಗಳ ಕೃಪೆಯಿಂದ ಬದುಕಿನ ಅನೇಕ ಕಷ್ಟಪರಂಪರೆಗಳು ದೂರವಾಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ ” ಎಂದು ನುಡಿದವರು ಉಜಿರೆ ಸಮೀಪದ ಕಾಶಿಬೆಟ್ಟು ಪ್ರಗತಿ ನಗರದ ಶ್ರೀಸನ್ನಿಧಿ ‘ ನಿವಾಸದ ಶೇಂತಾರು ಶ್ರೀಕೃಷ್ಣ ಭಟ್ ಇವರ ಪತ್ನಿ ವಾಣಿ.
ಪಂಜಸೀಮೆಯ ಭೀಮಗುಳಿ ಶಿವರಾಮ ಭಟ್ಟ, ಶಾರದಾ ದಂಪತಿಗಳ ಪುತ್ರಿಯಾದ ಇವರು ಉಪ್ಪಿನಂಗಡಿ ಮಂಡಲದ ಉಜಿರೆ ವಲಯದ ಮಾತೃಪ್ರಧಾನೆಯಾಗಿದ್ದಾರೆ.
ಮಂಡಲ ಮಾತೃ ಪ್ರಧಾನೆಯವರ ಮೂಲಕ ಮಾತೃತ್ವಮ್ ಯೋಜನೆಯ ಬಗ್ಗೆ ಮಾಹಿತಿ ಪಡೆದ ಇವರು ಆರಂಭದಲ್ಲಿ ಸುರಭಿ ಸೇವಿಕೆಯಾಗಿ ಸೇವೆ ಮಾಡಲು ಯೋಚಿಸಿದವರು. ಮಾಸದ ಮಾತೆಯಾದರೆ ಗುರಿ ಮುಟ್ಟಲು ಸಾಧ್ಯವೇ ಎಂಬ ಯೋಚನೆಯಲ್ಲಿರುವಾಗ ಪತಿ ಶ್ರೀಕೃಷ್ಣ ಭಟ್
‘ಮಾಸದ ಮಾತೆಯಾದರೆ ಗುರಿ ತಲುಪುವುದು ಕಷ್ಟವಲ್ಲ ‘ ಎಂದು ಭರವಸೆ ತುಂಬಿದ ಕಾರಣ ವಾಣಿಯವರು ಮಾಸದ ಮಾತೆಯಾಗಿ ಗೋಸೇವೆಯಲ್ಲಿ ತೊಡಗಿಸಿಕೊಂಡರು.
” ಕೆಲವು ವರ್ಷಗಳ ಹಿಂದೆ ಮಗಳ ಅನಾರೋಗ್ಯದ ಸಂದರ್ಭದಲ್ಲಿ ನಾವು ಮಾನಸಿಕವಾಗಿ ಸಂಪೂರ್ಣ ಕುಸಿದು ಹೋಗಿದ್ದೆವು. ಆ ಸಂದರ್ಭದಲ್ಲಿ ಸಮಾಜದಿಂದ ಎದುರಿಸಬೇಕಾಗಿ ಬಂದ ನೋವು ನಮ್ಮನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು. ಈ ಸಂದರ್ಭದಲ್ಲಿ ನಾವು ಸಂಪೂರ್ಣವಾಗಿ ಶರಣಾಗಿದ್ದು ಶ್ರೀ ಗುರುಚರಣಗಳನ್ನು. ಶ್ರೀಗುರುಗಳ ಅನುಗ್ರಹದಿಂದ ನಾವು ಮಾನಸಿಕವಾಗಿ ಸದೃಢರಾದೆವು. ಸಮಾಜವನ್ನು ಎದುರಿಸುವ ಧೈರ್ಯ ಬಂತು. ಮಗಳ ಆರೋಗ್ಯವೂ ಚೇತರಿಸಿತು. ಉತ್ತಮ ಸಂಬಂಧವೂ ಒದಗಿಬಂದು ಯೋಗ್ಯ ವರನ ಕೈ ಹಿಡಿದು ಈಗ ಮಗಳು ನೆಮ್ಮದಿಯ ಸಂಸಾರ ಜೀವನ ನಡೆಸುತ್ತಿದ್ದಾಳೆ , ಇದೆಲ್ಲವೂ ಒದಗಿ ಬಂದಿದ್ದು ಶ್ರೀಗುರುಗಳ ಕೃಪಾ ಕಟಾಕ್ಷದಿಂದ ಎನ್ನುವುದು ನಮ್ಮ ದೃಢವಾದ ನಂಬಿಕೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಶ್ರೀಗುರು ಸೇವೆಯಿಂದ ಅದನ್ನು ನಿವಾರಿಸಿ ಬದುಕಿನಲ್ಲಿ ಉನ್ನತಿ ಪಡೆಯಲು ಸಾಧ್ಯ ಎಂಬುದಕ್ಕೆ ನಮ್ಮ ಬದುಕೇ ಒಂದು ಉದಾಹರಣೆ ” ಎನ್ನುವ ವಾಣಿ ಶ್ರೀಕೃಷ್ಣ ಭಟ್ ಅವರ ಮಗಳು ಕೀರ್ತಿಶ್ರೀ ಅವರೂ ತಾಯಿಯ ಗೋಸೇವೆಗೆ ಕೈ ಜೋಡಿಸಿದ್ದಾರೆ.
ನಮ್ಮ ಸಮಾಜದ ಎಲ್ಲಾ ಬಾಂಧವರಿಗೂ ಗೋಸೇವೆಯ ಅವಕಾಶ ದೊರಕುವಂತಾಗಬೇಕು, ಎಲ್ಲರೂ ಗೋಮಾತೆಯ ಮಹತ್ವವನ್ನು ಅರಿಯಬೇಕು, ಮುಂದಿನ ಪೀಳಿಗೆಯೂ ಶ್ರೀಗುರು ಸೇವೆ, ಗೋಸೇವೆಗಳಲ್ಲಿ ಮುಂದುವರಿಯುವಂತಾಗಬೇಕು ಎಂಬ ಹಂಬಲವಿರುವ ಇವರು ತಮ್ಮ ಮನೆಯಲ್ಲಿ ಗವ್ಯೋತ್ಪನ್ನಗಳನ್ನೇ ಉಪಯೋಗಿಸುವವರು. ಗೋಸೇವೆ ಮತ್ತು ಶ್ರೀಗುರುಸೇವೆಯಲ್ಲಿ ಸದಾ ತೊಡಗಿಸಿಕೊಂಡಿರಬೇಕೆಂಬ ಅಭಿಲಾಷೆ ಹೊಂದಿರುವ ಇವರ ಎಲ್ಲಾ ಕಾರ್ಯಗಳಿಗೂ ಪತಿ ಶ್ರೀ ಕೃಷ್ಣ ಭಟ್ ಹಾಗೂ ಮಗ ಕೃಷ್ಣ ತೇಜಸ್ವಿಯವರ ಸಂಪೂರ್ಣ ಬೆಂಬಲವಿದೆ.