ಗೋವು ಎಂದರೆ ಮಮತೆಯ ಇನ್ನೊಂದು ರೂಪ,ಗೋಮಾತೆಯ ಹಾಲು ಅದು ಅಮೃತ ಸಮಾನ, ಗೋಮೂತ್ರವೂ ಹಲವು ವ್ಯಾಧಿ ನಿವಾರಕ ಎಂಬುದು ನಮಗೆಲ್ಲ ತಿಳಿದಿದೆ, ಗೋರಕ್ಷಣೆಗಾಗಿ ದೀಕ್ಷಾಬದ್ಧರಾದರೆ ಮಾತ್ರ ದೇಶೀ ಗೋವುಗಳ ರಕ್ಷಣೆ ಸಾಧ್ಯ. ಇದಕ್ಕಾಗಿ ನಮ್ಮ ಶ್ರೀಗಳು ತೋರಿದ ಹಾದಿಯಲ್ಲಿ ಮುಂದುವರಿಯುವ ಅಭಿಲಾಷೆ ನನ್ನದು ,ಹಳ್ಳಿಗಳಂತೆ ನಗರಗಳಲ್ಲಿ ಪ್ರತೀ ಮನೆಯಲ್ಲೂ ಹಸು ಸಾಕಣೆ ಅಸಾಧ್ಯ. ಆದರೂ ಗೋಮಾತೆಯ ಸೇವೆ ಮಾಡಲು ಶ್ರೀ ಸಂಸ್ಥಾನದವರ ಮಾರ್ಗದರ್ಶನದಂತೆ ಮುನ್ನಡೆಯುತ್ತಿದ್ದೇನೆ ” ಶ್ರೀಗುರುಗಳ ತತ್ವಗಳ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಜೀವನದ ಸುಖದುಃಖಗಳಲ್ಲಿ ಶ್ರೀಚರಣವೇ ಶರಣು ಎಂದು ನಂಬಿರುವ ದೇಲಂತಬೆಟ್ಟು ಮೂಲದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲದ ಸರ್ವಜ್ಞ ವಲಯ ನಿವಾಸಿಗಳಾಗಿರುವ ಡಾ. ಸೀತಾರಾಮ ಪ್ರಸಾದ್ ಅವರ ಪತ್ನಿ ಡಾ. ಅಮೃತಾ ಪ್ರಸಾದ್ ಅವರ ಮಾತುಗಳಿವು.
ಕುಂದಾಪುರದ ಶಂಕರ್ ಪುರಾಣಿಕ್ ಹಾಗೂ ಸವಿತಾ ಇವರ ಪುತ್ರಿಯಾಗಿರುವ ಅಮೃತಾ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಗೋ ಸಂರಕ್ಷಣಾ ಅಭಿಯಾನದ ಬಗ್ಗೆ ಅತ್ಯಂತ ಆಸಕ್ತಿ ಹೊಂದಿದ ಇವರು ಅಭಯಾಕ್ಷರ ಸಂಗ್ರಹ ಅಭಿಯಾನ, ವಿಶ್ವ ಮಂಗಲ ಗೋಯಾತ್ರೆಯ ಅಭಿಯಾನ, ಗೋಸಂಧ್ಯಾ, ಹಾಲುಹಬ್ಬವೇ ಮೊದಲಾದ ಕಾರ್ಯಕ್ರಮಗಳಲ್ಲಿ ಅತ್ಯಂತ ಆಸಕ್ತಿಯಿಂದ ಭಾಗವಹಿಸಿದವರು. ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀ ಗುರುಗಳಿಂದ ಬಾಗಿನವನ್ನು ಸ್ವೀಕರಿಸಿದವರು.
ಡಾ. ಅಮೃತಾ ಪ್ರಸಾದ್ ಅವರ ಪುತ್ರಿ ಈಶಾನ್ಯ ಶ್ರೀಮಠದ ಮೊತ್ತ ಮೊದಲ ಕನ್ಯಾ ಸಂಸ್ಕಾರಪಡೆದ ಬಾಲಿಕೆಯಾಗಿದ್ದಾಳೆ. ಶ್ರೀಗುರುಗಳ ಎಲ್ಲಾ ಯೋಜನೆಗಳಲ್ಲೂ ಪಾಲ್ಗೊಳ್ಳುವ ಇವರು ದೇಶೀ ಗೋವುಗಳ ಔಷಧೀಯ ಗುಣಗಳನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪತಿ ಡಾ. ಸೀತಾರಾಮ ಪ್ರಸಾದರು ಈ ಹಿಂದೆ ಆರೋಗ್ಯ ಪ್ರಧಾನರಾಗಿ ಸೇವೆ ಸಲ್ಲಿಸುತ್ತಿದ್ದವರು ಪ್ರಸ್ತುತ ಮಹಾನಂದಿ ಗೋಲೋಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
” ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳಾಗಿದೆ,ಶ್ರೀಗುರುಗಳ ತತ್ವಗಳು ಬದುಕಿಗೆ ದಾರಿದೀಪವಾಗಿದೆ. ನನ್ನ ತಂದೆಯ ಅನಾರೋಗ್ಯದ ಸಂದರ್ಭದಲ್ಲಿ ಶ್ರೀಗುರು ಚರಣಗಳಿಗೆ ಶರಣಾದೆವು. ತುರ್ತು ಆಪರೇಷನ್ ಆಗಬೇಕಾದ ಅನಾರೋಗ್ಯವೂ ಶ್ರೀಗುರು ಕಾರುಣ್ಯದಿಂದ ಪವಾಡ ಸದೃಶವಾಗಿ ಗುಣವಾಗಿದೆ. ಶ್ರೀಗುರು ಕೃಪೆಯಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ” ಎನ್ನುವ ಅಮೃತಾ ಪ್ರಸಾದ್ ಅವರು ಮಾತೃತ್ವಮ್ ಯೋಜನೆಯ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ದೇಶೀ ಗೋವುಗಳ ಮಹತ್ವವನ್ನು ಅರಿತ ಅನೇಕ ಮಂದಿ ಗೋ ಸಂರಕ್ಷಣೆಯ ಯೋಜನೆಗೆ ಕೈ ಜೋಡಿಸಿದ್ದಾರೆ, ಬಹಳಷ್ಟು ಮಂದಿ ಆತ್ಮೀಯರು, ನೆಂಟರು ,ಸ್ನೇಹಿತರು ಸಹಕಾರ ನೀಡಿದ್ದಾರೆ, ಇತರ ಸಮಾಜದವರು ಸಹಾ ಭಾರತೀಯ ಗೋತಳಿಗಳ ಔಷಧೀಯ ಗುಣಗಳನ್ನು ತಿಳಿದು ಗೋ ಉತ್ಪನ್ನಗಳನ್ನು ಔಷಧಿಯಾಗಿಯೂ ಬಳಸುತ್ತಿದ್ದಾರೆ ಎಂಬುದು ಖುಷಿ ನೀಡುವ ವಿಚಾರ ” ಎನ್ನುವ ಅಮೃತಾ ಪ್ರಸಾದ್ ಅವರಿಗೆ ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಹಂಬಲವಿದೆ. ಶ್ರೀಗುರುಗಳ ವಿವಿಧ ಯೋಜನೆಗಳಿಗೆ ಸಾಧ್ಯವಿರುವಷ್ಟು ರೀತಿಯಲ್ಲಿ ಸಹಕಾರ ನೀಡುವ ಅಭಿಲಾಷೆಯಿದೆ.