” ಸತ್ಕರ್ಮದ ಸಂಕಲ್ಪಕ್ಕೆ ಪ್ರೇರಣೆ ನನ್ನಮ್ಮ ” : ರೂಪಶ್ರೀ ಸುರೇಶ್ ಕೋಡಿಮೂಲೆ

ಮಾತೃತ್ವಮ್

 

ಹಸುಗಳು ಸ್ವತಂತ್ರವಾಗಿ ವಿಹರಿಸುವ ಪುಟ್ಟ ಗೋಸ್ವರ್ಗದಂತಹ ವಾತಾವರಣವನ್ನು ತಮ್ಮ ಮನೆಯಲ್ಲೇ ನಿರ್ಮಿಸಿದ ಅಪ್ರತಿಮ ಗೋಪ್ರೇಮಿಗಳು ಹಾಗೂ ಕೃಷಿಕಾರ್ಯಗಳಿಗಾಗಿ ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಕಲ್ಲಕಟ್ಟ ವಿಜಯಲಕ್ಷ್ಮಿ, ನಾರಾಯಣ ಭಟ್ ದಂಪತಿಗಳ ಪುತ್ರಿಯಾದ ರೂಪಶ್ರೀ ಅವರಿಗೆ ಸಹಜವಾಗಿಯೇ ಗೋವುಗಳ ಮೇಲೆ ತುಂಬಾ ಮಮತೆ.

” ಅಮ್ಮ ಮಾಡುವ ಶ್ರೀಮಠದ ಸೇವೆ, ಗೋಸೇವೆಗಳನ್ನು ನೋಡುತ್ತಾ ಬೆಳೆದವಳು ನಾನು. ಹಸುಗಳ ಒಡನಾಟದಲ್ಲಿ ಬೆಳೆದ ನನಗೆ ಧಾರ್ಮಿಕ ವಿಚಾರಗಳ ಸೂಕ್ತ ಬೋಧನೆಯನ್ನು ನೀಡಿ ಎಲ್ಲಾ ಸತ್ಕರ್ಮಗಳ ಸಂಕಲ್ಪಕ್ಕೆ ಪ್ರೇರಣೆಯಾದವರು ನನ್ನ ಅಮ್ಮ ವಿಜಯಲಕ್ಷ್ಮಿ. ಅಮ್ಮನಿಂದಾಗಿಯೇ ಇಂದು ನಾನು ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಗುರಿ ತಲುಪುವಂತಾಗಿದ್ದು ” ಎನ್ನುತ್ತಾರೆ ಮುಳ್ಳೇರಿಯ ಮಂಡಲ, ಕುಂಬಳೆ ವಲಯದ ಕೋಡಿಮೂಲೆ ಡಾ. ಸುರೇಶ್ ಕುಮಾರ್ ಅವರ ಪತ್ನಿ ರೂಪಶ್ರೀ. ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆ.

” ಅಮ್ಮನ ಆದರ್ಶಗಳು ನನಗೆ ದಾರಿದೀಪವಾಗಿದೆ. ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಒಳಿತಾಗಿದೆ. ಭಾರತೀಯ ಗೋತಳಿಗಳ ಮಹತ್ವದ ಬಗ್ಗೆ ಇಂದಿನ ಸಮಾಜ ಎಚ್ಚರಗೊಳ್ಳುತ್ತಿದೆ. ದೇಶೀ ಗವ್ಯೋತ್ಪನ್ನಗಳ ಬಳಕೆ ಇಂದು ಹೆಚ್ಚಾಗುತ್ತಿದೆ. ಹಸುಗಳನ್ನು ಸಾಕುತ್ತಿರುವವರು, ವಿದೇಶೀ ಮೂಲದ ತಳಿಗಳನ್ನು ಬಿಟ್ಟು ದೇಶೀಯ ತಳಿಯ ಗೋಸಾಕಣಿಕೆಗೆ ಆದ್ಯತೆ ನೀಡುತ್ತಿದ್ದಾರೆ. ಇದಕ್ಕೆ ಕಾರಣ ಶ್ರೀಸಂಸ್ಥಾನದವರ ಮಾರ್ಗದರ್ಶನ ” ಎನ್ನುವ ರೂಪಶ್ರೀ ಸುರೇಶ್ ಈ ಹಿಂದೆ ಮಂಗಳೂರಿನಲ್ಲಿ ನಡೆದ ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ ತಾವು ಭಾಗಿಯಾದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ.

” ಗುರುಸೇವೆ ಗೋಸೇವೆಯಿಂದ ಮನಸ್ಸಿಗೆ ಸಂತೃಪ್ತಿ ದೊರಕುತ್ತದೆ. ದೇಶಿಯ ಗೋವುಗಳ ಮಹತ್ವದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿದಾಗ ಜನ ಅದರ ಮೌಲ್ಯವನ್ನು ಅರಿತುಕೊಳ್ಳುತ್ತಾರೆ. ಈ ಮೂಲಕ ಮಾತೃತ್ವಮ್ ಯೋಜನೆಗೆ ಕೈ ಜೋಡಿಸುತ್ತಾರೆ. ಮಾತೃತ್ವಮ್ ಯೋಜನೆಯ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ಜಂಗಮವಾಣಿ, ಸಾಮಾಜಿಕ ಜಾಲತಾಣಗಳು ತುಂಬಾ ಸಹಕಾರಿಯಾಗಿದೆ “ಎನ್ನುವ ಇವರು ಶ್ರೀಗುರುಗಳ ನಿರ್ದೇಶಾನುಸಾರವಾಗಿ ದೊರಕಿದ ಸ್ತೋತ್ರಗಳನ್ನು ಪಠಿಸುತ್ತಾ , ಶ್ರೀಗುರು ಸೇವೆ, ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಶ್ರೀಮಠದ ಅಂಗಸಂಸ್ಥೆಯಾದ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡಿದ ಅವರ ಇಬ್ಬರು ಮಕ್ಕಳಿಗೂ ಶ್ರೀಮಠದ ಬಗ್ಗೆ ವಿಶೇಷ ಶ್ರದ್ಧಾಭಾವವಿದೆ. ಗೋವುಗಳ ಮೇಲೆ ಮಮಕಾರವಿದೆ.
ಗೋಸೇವೆಯನ್ನು ಇನ್ನಷ್ಟು ಮುಂದುವರಿಸಬೇಕು ಎಂಬ ಅಭಿಲಾಷೆ ಹೊತ್ತಿರುವ ರೂಪಶ್ರೀಯ ಎಲ್ಲಾ ಕಾರ್ಯಗಳಿಗೂ ಮನೆಯವರೆಲ್ಲರ ಸಂಪೂರ್ಣ ಸಹಕಾರವಿದೆ.

– ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *