” ದೇಶೀ ತಳಿಯ ಗೋವುಗಳ ರಕ್ಷಣೆಗಾಗಿ ನಮ್ಮ ಶ್ರೀಗಳು ಹಾಕಿರುವ ಕಾರ್ಯಯೋಜನೆಗಳು ನಿಜಕ್ಕೂ ಅದ್ಭುತ. ಗೋ ಜಾಗೃತಿಗಾಗಿ ಗೋಯಾತ್ರೆ, ವಿಶ್ವ ಗೋ ಸಮ್ಮೇಳನ , ವಿಶ್ವ ಮಂಗಲ ಗೋಗ್ರಾಮ ಯಾತ್ರೆ……ಈ ರೀತಿಯ ಅನೇಕ ಅಭಿಯಾನಗಳಿಂದ ಸಮಾಜ ಎಚ್ಚರಗೊಳ್ಳುತ್ತಿದೆ. ದೇಶೀಯ ಗೋವಿನ ಉಪಯುಕ್ತತೆಯ ಬಗ್ಗೆ, ಗವ್ಯೋತ್ಪನ್ನಗಳ ಬಳಕೆಯ ಬಗ್ಗೆ ಜನರಿಗೆ ಆಸಕ್ತಿ ಮೂಡಲಾರಂಭಿಸಿದೆ. ಗೋವುಗಳ ಮೇಲೆ ಪ್ರೀತಿಯಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಗೋಸಾಕಣೆ ಅಸಾಧ್ಯವಾದ ಅನೇಕ ಮಂದಿಗೆ ಗೋಸೇವೆಗೆ ಅವಕಾಶ ಒದಗಿದ್ದು ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ಮಾತೃತ್ವಮ್ ಮೂಲಕ . ಬೆಂಗಳೂರು ನಿವಾಸಿಗಳಾಗಿರುವ ನಾವೂ ಗೋಮಾತೆಯ ಸೇವೆ ಮಾಡುತ್ತಿದ್ದೇವೆ ಎಂಬ ಸಂತೃಪ್ತ ಭಾವ ಮನದಲ್ಲಿದೆ ” ಹೀಗೆಂದವರು ಹೊನ್ನಾವರ ಮಾಲ್ಕೋಡು ಮೂಲದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ , ವಿದ್ಯಾರಣ್ಯ ವಲಯ ನಿವಾಸಿಗಳಾಗಿರುವ ಎಲ್. ಆರ್. ಹೆಗಡೆಯವರ ಪತ್ನಿ ರೂಪಾ.
ಹೊನ್ನಾವರ ಹಳದೀಪುರದ ಕೆ.ವಿ. ಭಟ್ ,ಗೌರಿ ಭಟ್ ದಂಪತಿಗಳ ಪುತ್ರಿಯಾದ ಇವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಇವರು ಮಠದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳಿದ್ದರೂ ಅಲ್ಲಿ ಹೋಗಿ ಸೇವೆ ಸಲ್ಲಿಸುವವರು. ಗೋವುಗಳ ಮೇಲೆ ತುಂಬಾ ಪ್ರೀತಿಯಿರುವ ರೂಪಾ ತಮ್ಮ ಬಿಡುವಿನ ವೇಳೆಗಳಲ್ಲಿ ಗೋಶಾಲೆಗಳಿಗೆ ಭೇಟಿ ನೀಡಿ ಹಸುಗಳ ಒಡನಾಟದಲ್ಲಿ ಸಂತಸ ಪಡೆಯುತ್ತಾರೆ.
” ವಿದ್ಯಾರಣ್ಯ ವಲಯದ ಶಿಷ್ಯಮಾಧ್ಯಮ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ನಾನು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿದ್ದೆ. ಅಭಯಾಕ್ಷರ ಅಭಿಯಾನದ ಸಂದರ್ಭದಲ್ಲಿ ಅಲ್ಲಲ್ಲಿ ಹೋಗಿ ಜನರಿಗೆ ದೇಶೀಯ ಗೋವುಗಳ ಮಹತ್ವವನ್ನು ತಿಳಿಸಿ ಅವರಿಂದ ಸಹಿ ಪಡೆದ ಅನುಭವ ಜೀವನದಲ್ಲಿ ಮರೆಯಲಾರದ ಕ್ಷಣಗಳು . ಶ್ರೀಗುರುಗಳ ಈ ಒಂದು ಯೋಜನೆಯಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಿದೆ ” ಎನ್ನುವ ರೂಪಾ ಅವರು ಎರಡು ವರ್ಷಗಳ ಮೊತ್ತವನ್ನು ತಾವೇ ಸ್ವಯಂ ಭರಿಸುವ ಮೂಲಕ ಮಾತೃತ್ವಮ್ ಯೋಜನೆಯ ಗುರಿ ತಲುಪಿದವರು.
ಬೆಂಗಳೂರು ಉತ್ತರ ಮಂಡಲ ಕಾರ್ಯದರ್ಶಿಯಾಗಿರುವ ಪತಿ ಹಾಗೂ ಇಬ್ಬರು ಮಕ್ಕಳ ಸಂಪೂರ್ಣ ಸಹಕಾರದಿಂದ ಗೋಸೇವೆ, ಶ್ರೀಮಠದ ಸೇವೆಗಳಲ್ಲಿ ನಿರತರಾಗಿರುವ ರೂಪಾ ಹೆಗಡೆ ಅವರಿಗೆ ಇದನ್ನು ನಿರಂತರವಾಗಿ ಮುಂದುವರಿಸುವ ಅಭಿಲಾಷೆಯಿದೆ.
ಪ್ರಸನ್ನಾ ವಿ ಚೆಕ್ಕೆಮನೆ