ಭಾವ ಇಲ್ಲದ ಅರ್ಚನೆಗೆ ಯಾವುದೇ ಫಲ ಇಲ್ಲ : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು

ಇತರೆ

ಸಾಗರ: ಭಾವ ಇಲ್ಲದ ಅರ್ಚನೆಗೆ ಯಾವುದೇ ಫಲ ಇಲ್ಲ. ಪೂಜೆಯಲ್ಲಿ ದೇವರಿಗೆ ಎಷ್ಟು ವಸ್ತು ಸಮರ್ಪಿಸುತ್ತಿದ್ದೇವೆ ಎನ್ನುವುದಕ್ಕಿಂತ ಭಕ್ತಿಯಲ್ಲಿ ಭಾವಿಸಿ ಪೂಜೆ ಮಾಡುತ್ತಿದ್ದೇವೆಯೇ? ಎನ್ನುವುದು ಅತೀ ಮುಖ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.

ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ 10 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು.

ಯಾರ ಕುರಿತು ಪೂಜಿಸುತ್ತೇವೋ ಆ ಕುರುಣಾಮಯಿಯ ಕುರಿತು ನಮ್ಮ ಚಿತ್ತಭಿತ್ತಿಯಲ್ಲಿ ಭಾವನೆಯೇ ಇಲ್ಲದಿದ್ದರೆ ಆ ಪೂಜೆ ಪರಿಪೂರ್ಣವಲ್ಲ ಎಂದರು. ದೇವಿಯ ಪ್ರತಿ ಸ್ತೋತ್ರ ಹೇಳುವಾಗ ಸೃಷ್ಟಿಯ ನೆಮ್ಮದಿಗಾಗಿ ಆಕೆ ಮಾಡಿದ ಪ್ರತಿ ಕಾರ್ಯವೂ ನಮ್ಮ ಮನದಲ್ಲಿದ್ದರೆ ಅದನ್ನು ಸ್ಮರಿಸಿ ಧ್ಯಾನಿಸಿದರೆ ಮಾತ್ರ ಅನುಗ್ರಹ ದೊರೆಯಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಪತ್ನಿ ಪ್ರೇಮಾರೊಟ್ಟಿಗೆ ಆಗಮಿಸಿ ಲಲಿತಾದೇವಿ ಪೂಜೆಯಲ್ಲಿ ಪಾಲ್ಗೊಂಡರು ಹಾಗೂ ಉಡಿ ಸಮರ್ಪಣೆಗೈದು ನಂತರ  ಶ್ರೀಗಳವರಿಂದ ಆಶೀರ್ವಾದ ಪಡೆದರು.

ಬೆಳಗ್ಗೆ ಶುಂಭಹಾ ಉಪಾಸನೆ, ಜಾತವೇದಸೇ ಮಂತ್ರ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ಹಾಗೂ ಚಂಡಿಕಾ ಪಾರಾಯಣ ನೆರವೇರಿತು.

 

-ರಮೇಶ್ ಹೆಗಡೆ ಗುಂಡೂಮನೆ

Leave a Reply

Your email address will not be published. Required fields are marked *