ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಧಾನ ಪ್ರಾಚಾರ್ಯರಾದ ಡಾ. ಹರೀಶ ಹೆಗಡೆ ಅವರು 2025ರ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಯಲ್ಲಾಪುರದ ವಜ್ರಳ್ಳಿಯಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಮಾಡುವಾಗಲೇ ದತ್ತಾತ್ರೇಯ ಗಾಂವಕರರ ಬಳಿ ಸಂಗೀತದ ಓಂಕಾರ ಪ್ರಾರಂಭಿಸಿದರು. ಮುಂದೆ ಉಡುಪಿಯಲ್ಲಿ ಸಂಸ್ಕೃತ ವಿದ್ವತ್ ಜೊತೆಗೆ ಪಂ. ಮಹಾಬಲೇಶ್ವರ ಭಾಗವತರಲ್ಲಿ ಸಂಗೀತ ಅಧ್ಯಯನ ನಡೆಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಮ್ಯೂಸಿಕ್ ಮತ್ತು ಎಂ.ಮ್ಯೂಸಿಕ್ ಪದವಿಗಳನ್ನು ಅಭ್ಯಸಿಸುವಾಗ, ಪಂ. ಶ್ರೀಪಾದ ಹೆಗಡೆ ಕಂಪ್ಲಿಯವರ ಮಾರ್ಗದರ್ಶನದಲ್ಲಿ ಮುಂದುವರಿದು ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತರಾದರು. ನೆಟ್ ಪರೀಕ್ಷೆ ಮುಗಿಸಿ ಪ್ರಬಂಧ ಮಂಡಿಸಿದ ಇವರು, ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ.
ಶ್ರೀಗಳ ಹಾರೈಕೆ:
ಅಶೋಕೆಯ ಸ್ಮರಾತ್ಮ ಗುರುಕುಲದ ಪ್ರಧಾನ ಪ್ರಾಚಾರ್ಯರಾದ ಡಾ. ಹರೀಶ ಹೆಗಡೆ ಅವರ ಸಾಧನೆಗೆ ಸಂದ ಯೋಗ್ಯ ಗೌರವವಾಗಿದೆ. ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಹಾರೈಸಿದ್ದಾರೆ. ವಿವಿವಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಗೋಳಗೋಡ ಅವರು ಹರೀಶ ಹೆಗಡೆ ಅವರ ಸಾಧನೆಯನ್ನು ಶ್ಲಾಘಿಸಿ, ಅಭಿನಂದಿಸಿದ್ದಾರೆ.