ಕಪ್ಪು ಚಿನ್ನದಿಂದ ರೈತರಿಗೆ ಆರ್ಥಿಕ ಭದ್ರತೆ: ಕೃಷಿವಿಜ್ಞಾನಿ ಸಲಹೆ

ಇತರೆ

ಗೋಕರ್ಣ: ಕಪ್ಪು ಚಿನ್ನ ಎಂದೇ ಪರಿಗಣಿಸಲಾಗುವ ಕಾಳುಮೆಣಸು ಕೃಷಿಗೆ ಆದ್ಯತೆ ನೀಡುವ ಮೂಲಕ ರೈತರು ಆರ್ಥಿಕ ಭದ್ರತೆ ಕಂಡುಕೊಳ್ಳಲು ಸಾಧ್ಯ ಎಂದು ಕಲ್ಲಿಕೋಟೆಯ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ವಿಜ್ಞಾನಿ ಡಾ,ಎಂ.ಎನ್.ಆರ್.ವೇಣುಪಾಲ್ ಅಭಿಪ್ರಾಯಪಟ್ಟರು.
ಶ್ರೀ ರಾಮಚಂದ್ರಾಪುರ ಮಠದ ಗೋಫಲ ಟ್ರಸ್ಟ್, ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹವ್ಯಕ ಮಹಾಮಂಡಲ, ಕಾಮದುಘಾ ಟ್ರಸ್ಟ್ ಹಾಗೂ ಭಾರತೀಯ ಗೋ ಪರಿವಾರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ‘ಕಾಳುಮೆಣಸು ಕೃಷಿ- ಸವಾಲುಗಳು ಮತ್ತು ಅವಕಾಶಗಳು’ ಎಂಬ ರಾಜ್ಯಮಟ್ಟದ ವೆಬಿನಾರ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಹಿಂದೆ ಭಾರತದಲ್ಲಿ ವಾರ್ಷಿಕ ಒಂದು ಲಕ್ಷ ಟನ್‍ಗೂ ಅಧಿಕ ಕಾಳು ಮೆಣಸು ಬೆಳೆಯಲಾಗುತ್ತಿತ್ತು. ಆದರೆ ಇಂದು ಈ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಹೆಚ್ಚಿನ ಭೂಮಿ ಅಥವಾ ಇತರ ಪರಿಕರಗಳ ಅಗತ್ಯವಿಲ್ಲದ ಕಾಳುಮೆಣಸನ್ನು ಬೆಳೆಯುವ ಮೂಲಕ ರೈತರು ಆದಾಯವನ್ನೂ ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಸಲಹೆ ಮಾಡಿದರು.
ರೈತರ ಆರ್ಥಿಕ ಸ್ವಾತಂತ್ರ್ಯಕ್ಕೆ ಕಾಳುಮೆಣಸು ಸಹಕಾರಿ. ಪಶ್ಚಿಮಘಟ್ಟ ದೇಶದ ಕಾಳುಮೆಣಸಿನ ಕಣಜ; ವಿಜ್ಞಾನಿಗಳು ಗುರುತಿಸಿದ ಅಸಂಖ್ಯಾತ ತಳಿಗಳು ಇಲ್ಲಿವೆ. ಉದಾಹರಣೆಗೆ ಕೇರಳದಲ್ಲಿ 150ಕ್ಕೂ ಹೆಚ್ಚು ಮತ್ತು ಕರ್ನಾಟಕದಲ್ಲಿ 24 ತಳಿಗಳು ಇವೆ. ಆರ್ಥಿಕವಾಗಿ ತೀರಾ ಲಾಭದಾಯಕವಾದ ಕಾಳುಮೆಣಸು ಕೃಷಿಯತ್ತ ಗಮನ ಹರಿಸಲು ಇದು ಸಕಾಲ. ಕಾಳುಮೆಣಸು ಕೃಷಿ ಜೀವನಾಧಾರವಾಗುವ ಜತೆಗೆ ಪ್ರಕೃತಿಗೂ ಪೂರಕ ಎಂದು ವಿವರಿಸಿದರು.
ಅಡಿಕೆ ಬೆಳೆಯನ್ನು ಬಯಲು ಸೀಮೆಯಲ್ಲೂ ಹೆಚ್ಚಿಸಲಾಗುತ್ತಿದ್ದು, ಬೆಲೆ ಚಂಚಲವಾಗುವ ಸಂದರ್ಭದಲ್ಲಿ ಕಾಳುಮೆಣಸು ನಮ್ಮ ಆರ್ಥಿಕತೆಗೆ ಸ್ಥಿರತೆ ಒದಗಿಸಬಲ್ಲದು. ಜತೆಗೆ ಅಡಿಕೆ- ತೆಂಗಿನಂಥ ಮೂಲ ಬೆಳೆಯ ಇಳುವರಿ ಹೆಚ್ಚಳಕ್ಕೂ ಕಾಳುಮೆಣಸು ಕೊಡುಗೆ ನೀಡುತ್ತದೆ. ಹೆಚ್ಚಿನ ಬಂಡವಾಳ ಅಥವಾ ಜಾಗದ ಅಗತ್ಯ ಇಲ್ಲ. ನುಗ್ಗೆ ಗಿಡವನ್ನು ಆಧಾರವಾಗಿಟ್ಟು ಕಾಳುಮೆಣಸಲು ಬೆಳೆಸಲೂ ಅವಕಾಶವಿದೆ ಎಂದರು.
ಬಹಳಷ್ಟು ದೇಶಗಳು ಆದ್ಯತೆಯ ಮೇಲೆ ಕಾಳುಮೆಣಸು ಬೆಳೆಯುತ್ತಿವೆ. ಭಾರತ ಕೂಡಾ ಗತವೈಭವ ಮರಳಿ ಗಳಿಸಲು ಹಸಿರು ಕಾಳುಮೆಣಸು ಹೆಚ್ಚು ಹೆಚ್ಚು ಬೆಳೆಯಬೇಕು. ಸಾವಯವ ಗೊಬ್ಬರ, ಬಸಿಗಾಲುವೆ, ತೇವಾಂಶ ಸಂರಕ್ಷಣೆ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು.
ಗೋ ಆಧರಿತ ಕೃಷಿವಿಧಾನದಲ್ಲಿ ಕಾಳು ಮೆಣಸು ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಸೆಗಣಿ, ಗಂಜಳ ಬಳಸಿ ಜೀವಾಮೃತವಾಗಿ ತಯಾರಿಸಿ ಹಲವು ತೋಟಗಳಲ್ಲಿ ಬಳಸಿ ಅತ್ಯುತ್ತಮ ಇಳುವರಿ ಪಡೆಯಲಾಗುತ್ತಿದೆ. ಕಾಫಿ ಮತ್ತು ಕಾಳು ಮೆಣಸನ್ನು 32 ವರ್ಷದಿಂದ ಗೋ ಗೊಬ್ಬರವನ್ನು ಬಳಸಿಯೇ ಬೆಳೆಸುತ್ತಿದ್ದೇವೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಕಾಂಪೋಸ್ಟ್ ಮತ್ತು ಜೈವಿಕ ಗೊಬ್ಬರ ಬಳಕೆ ಮೂಲಕ ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬಹುದು. ಅನಾದಿ ಕಾಲದಿಂದಲೂ ಗೋವುಗಳು ರೈತರ ಸಂಗಾತಿಗಳು. ಆ ಪರಿಸ್ಥಿತಿ ಮರಳಿ ಬಂದಾಗ ನಾವು ರಸಗೊಬ್ಬರದ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು ಎಂದು ಸಲಹೆ ಮಾಡಿದರು.
ರೋಗಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಜೈವಿಕ ಕೀಟನಾಶಕಗಳ ಮೂಲಕ ನಿಯಂತ್ರಿಸುವ ಪ್ರಯತ್ನ ಮಾಡಬೇಕು. ಆಡುಸೋಗೆ, ಲೆಕ್ಕಿ, ಹರಳು ಮತ್ತಿತರ ಸಸ್ಯಗಳನ್ನು ಬಳಸಿ ಜೈವಿಕ ಕೀಟನಾಶಕಗಳನ್ನು ತಯಾರಿಸುವ ಪ್ರಯತ್ನಗಳೂ ಯಶಸ್ಸು ಕಂಡಿವೆ ಎಂದರು.
ಗಿಡಗಳನ್ನು ಆಯ್ಕೆ ಮಾಡುವುದೂ ಮುಖ್ಯ. ಯಶಸ್ವಿ ರೈತರು ತಮ್ಮ ಪರಿಣತಿಯಿಂದ ಅಭಿವೃದ್ಧಿಪಡಿಸಿದ, ನಂಜುಮುಕ್ತ ಗಿಡಗಳನ್ನು ಆಯ್ಕೆ ಮಾಡಿ. ವೈರಸ್ ಮುಕ್ತ ಅಧಿಕ ಇಳುವರಿಯ ತಳಿಗಳು ಇದೀಗ ಅಪರೂಪ. ಇದು ದೇಶದ ಸಂಪತ್ತು. ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಉತ್ತಮ ಗಿಡಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಬೋರ್ಡೋ ದ್ರಾವಣದಿಂದ ಸೊರಗು ರೋಗ ನಿಯಂತ್ರಣ ಮಾಡಬಹುದು. ದಕ್ಷ ಸಿಂಪಡಣೆದಾರರು, ಮರ ಏರುವವರು, ಏಣಿ ಸೌಲಭ್ಯ ಬಳಸಿಕೊಂಡು ಹೆಚ್ಚು ಪ್ರದೇಶಕ್ಕೆ ಬೋರ್ಡೋ ಸುರಕ್ಷೆ ಒದಗಿಸಬೇಕು. ಗೆದ್ದಲಿನ ಸಮಸ್ಯೆ ಇನ್ನೊಂದು ಸವಾಲು. ಗೆದ್ದಲು ಕಾಳುಮೆಣಸಿನ ಬೇರು ತಿನ್ನದಿದ್ದರೂ, ಮೂಲಮರದ ತೊಗಟೆ ತಿನ್ನುವುದರಿಂದ ಬಳ್ಳಿಯ ಬೇರುಗಳು ದುರ್ಬಲವಾಗುತ್ತವೆ. ಸುಣ್ಣದ ಮಿಶ್ರಣದಿಂದ ಇದನ್ನು ನಿಯಂತ್ರಿಸಬಹುದು. ಸೂಕ್ತ ನೀರಾವರಿ, ಸಾವಯವ ಗೊಬ್ಬರ, ಸೂಕ್ತ ಕೀಟನಾಶಕಳ ಬಳಕೆಯಂಥ ಬೆಳೆ ನಿರ್ವಹಣೆ ಸಮಗ್ರ ಕ್ರಮಗಳಿಂದ ಹೆಕ್ಟೇರ್‍ಗೆ 7-8 ಟನ್ ಕಾಳುಮೆಣಸು ಇಳುವರಿ ಪಡೆಬಹುದು. 10 ಟನ್‍ವರೆಗೂ ಇಳುವರಿ ಪಡೆದ ನಿದರ್ಶನ ಇದೆ. ಚಿಗುರು, ಹೂವುಗಳು ಚೆನ್ನಾಗಿ ಬೆಳೆಯಲು ಬಿಸಿಲು ಕೂಡಾ ಅಗತ್ಯ ಎಂದು ವಿವರಿಸಿದರು.
ಬೆಂಗಳೂರಿನ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಹರೀಶ್ ಬಿ.ಎಸ್ ಮಾತನಾಡಿದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಂದರ್ಯ ಕೊಲ್ಲಂಪಾರೆ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ಅಗಡಿ ಸ್ವಾಗತಿಸಿದರು. ಡಾ.ಹರೀಶ್ ಬಿ.ಎಸ್, ಶ್ರೀಮಠದ ಸಂಶೋಧನಾ ಖಂಡದ ಶ್ರೀ ಸಂಯೋಜಕ ಗುರುರಾಜ ಪಡೀಲ್ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಹಲವಾರು ಮಂದಿ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *