” ಆತ್ಮ ಸಾಕ್ಷಾತ್ಕಾರದ ಹಾದಿ ತೋರುವವರು ಶ್ರೀಗುರು ” : ರುಕ್ಮಾವತಿ ಆರ್. ಚಂದ್ರ, ಸಾಗರ

ಮಾತೃತ್ವಮ್

 

ಮೂಲತಃ ರಾಮಚಂದ್ರಾಪುರ ಮಂಡಲದ ಗಡಿಕಟ್ಟೆಯವರಾದ ಪ್ರಸ್ತುತ ಸಾಗರ ಪೂರ್ವ ವಲಯದ ನಿವಾಸಿಗಳಾಗಿರುವ ರಾಮಚಂದ್ರ ಅವರ ಪತ್ನಿ ರುಕ್ಮಾವತಿ ಆರ್. ಚಂದ್ರ ಅವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು.

 

” ಬಾಲ್ಯದಲ್ಲೇ ಹಸುಗಳ ಮೇಲೆ ವಿಶೇಷ ಮಮತೆಯಿತ್ತು.  ಗೋವುಗಳ ಮೇಲೆ ಪೂಜ್ಯ ಭಾವನೆ ಮೂಡುವಂತಹ ವಾತಾವರಣದಲ್ಲಿ ಹುಟ್ಟಿ ಬೆಳೆದವಳು ನಾನು. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಶ್ರೀಗುರುಗಳ ಪ್ರವಚನಗಳನ್ನು ಕೇಳಿ ಈ ಶ್ರದ್ಧೆ ಇನ್ನಷ್ಟು ಹೆಚ್ಚಾಗಿದೆ ” ಎನ್ನುವ ರುಕ್ಮಾವತಿ ಅವರು ಬ್ಯಾಂಕ್ ಉದ್ಯೋಗಿಯಾಗಿರುವಾಗಲೂ ಮನೆಯಲ್ಲಿ ಹಸುಗಳನ್ನು ಸಾಕಿದವರು.

 

ಮಟ್ಟುಗುಪ್ಪೆ ರಾಮಚಂದ್ರ ಭಟ್ ,ಲಕ್ಷ್ಮಮ್ಮ ದಂಪತಿಗಳ ಪುತ್ರಿಯಾದ ರುಕ್ಮಾವತಿ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದ ನಂತರ ಶ್ರೀಮಠದ ವಿವಿಧ ಸೇವೆಗಳಿಗೆ ಕೈ ಜೋಡಿಸಿದವರು.

 

” ಮಹಾಮಂಡಲದ ಬಿಂದು ಸಿಂಧು ‘ ವಿಭಾಗದಲ್ಲಿ ಮೂರು ವರ್ಷ ಸೇವೆ ಮಾಡಿದ್ದೇನೆ.‌ ವಿದ್ಯಾ ವಿಭಾಗದಲ್ಲೂ ಸೇವೆ ಮಾಡಿದ ಅನುಭವವಿದೆ. ಸುಮಾರು ಹನ್ನೊಂದು ವರ್ಷಗಳ ಕಾಲ ನಮ್ಮ ಮನೆಯಲ್ಲಿ ದೇಶೀಯ ತಳಿಯ ಹಸುವಿತ್ತು. ಮಗಳ ಬಾಣಂತನಕ್ಕೆ ಅಮೇರಿಕಾಗೆ ತೆರಳಬೇಕಾದ ಅನಿವಾರ್ಯತೆ ಬಂದಾಗ ಹಸುವನ್ನು ಗೋಸ್ವರ್ಗಕ್ಕೆ ನೀಡಿ ಅದರ ನಿರ್ವಹಣೆಯ ವ್ಯವಸ್ಥೆಯನ್ನು ಮಾಡಿದೆವು.‌ ಅಲ್ಲಿಂದ ಬಂದ ನಂತರವೂ ಗೋಸ್ವರ್ಗಕ್ಕೆ ಕಾಣಿಕೆ ನೀಡಿದ್ದೇವೆ. ಹಸುಗಳಿಗೆ ನಮ್ಮಂತೆ ಒಡವೆ, ಬಟ್ಟೆಗಳ ಅಗತ್ಯವಿಲ್ಲ. ಓಡಾಡಲು ವಾಹನಗಳ ಅಗತ್ಯವೂ ಇಲ್ಲ. ಹಾಗಿರುವಾಗ ಅವುಗಳಿಗೆ ಒಂದು ಮುಷ್ಟಿ ಹುಲ್ಲು, ಒಂದಿಷ್ಟು ನೀರು ಕೊಡಲು ನಮ್ಮಿಂದ ಸಾಧ್ಯವಿಲ್ಲವೇಕೆ ‘ ಎಂದು ಪ್ರತಿಯೊಬ್ಬರೂ ಯೋಚಿಸಿದರೆ ಯಾರಿಗೂ ಗೋಸಾಕಣೆ ಕಷ್ಟವಲ್ಲ ಎಂದು ನನ್ನ ಅಭಿಪ್ರಾಯ ” ಎಂದು ನುಡಿಯುವ ಅವರು ಆಧ್ಯಾತ್ಮಿಕ ವಿಚಾರದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ.

 

” ಪೂರ್ವ ಜನ್ಮದ ಸುಕೃತದಿಂದ ಶ್ರೀಗುರುಗಳನ್ನು ಮನೆಗೆ ಕರೆಸಿ ಭಿಕ್ಷೆ ನೆರವೇರಿಸುವ ಅವಕಾಶ ಒದಗಿ ಬಂತು. ಆತ್ಮ ಸಾಕ್ಷಾತ್ಕಾರದ ಹಾದಿಯನ್ನು ತೋರುವ ನಮ್ಮ ಗುರುಗಳ ಶಿಷ್ಯರಾಗಿ ಬದುಕುವುದೇ ಮನಸ್ಸಿಗೆ ಆನಂದ. ಶ್ರೀಗುರುಗಳ ಸಮಾಜಮುಖಿ ಸೇವೆಗಳು ತುಂಬಾ ಇಷ್ಟವಾಗಿವೆ. ಇದಕ್ಕಾಗಿಯೇ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಪೂರ್ಣ ಪ್ರಮಾಣದ ದಾನಿಯಾಗಿ ಲಕ್ಷಭಾಗಿನಿಯಾಗಿದ್ದೇನೆ ” ಎನ್ನುವ ರುಕ್ಮಾವತಿ ಕಳೆದ ವರ್ಷ ಗೋಸ್ವರ್ಗದಲ್ಲಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿದ್ದಾರೆ.

 

” ಇನ್ನಷ್ಟು ಕಾಲ ಶ್ರೀಮಠದ ವಿವಿಧ ಸೇವೆಗಳಿಗೆ ಕೈ ಜೋಡಿಸಿ ಸೇವೆ ಮಾಡಬೇಕೆಂಬ ಹಂಬಲವಿದೆ ” ಎನ್ನುವ ಇವರ ಎಲ್ಲಾ ಕಾರ್ಯಗಳಿಗೂ ಮನೆಯವರ, ಮಕ್ಕಳ ಸಂಪೂರ್ಣ ಸಹಕಾರವಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *