ಗೋಮಾತೆಯ ಮೇಲಿನ ಮಮತೆಯಿಂದ ಮಾಸದ ಮಾತೆಯಾದೆ: ಚಂದ್ರಮತಿ ಹೆಗಡೆ

ಮಾತೃತ್ವಮ್

ಬಾಲ್ಯದಿಂದಲೇ ಗೋವುಗಳ ಮೇಲೆ ವಿಶೇಷ ಪ್ರೀತಿ. ತವರುಮನೆಯಲ್ಲಿ ಹಸುಗಳ ಒಡನಾಟದ ನಡುವೇ ಬೆಳೆದವರು. ಮುಂದೆ ವಿದ್ಯಾಭ್ಯಾಸ, ಸರಕಾರಿ ಉದ್ಯೋಗ, ಮದುವೆ, ಮಕ್ಕಳು ಎಂದು ಜೀವನದ ಹಲವಾರು ಜವಾಬ್ದಾರಿಯುತ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಾಗ ಗೋ ಸಾಕಣೆ ಇಷ್ಟವಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಆ ಕಡೆಗೆ ಗಮನ ನೀಡಲು ಆಗಲಿಲ್ಲ.  ಆದರೂ ಶ್ರೀ ಮಠದ ಸಂಪರ್ಕಕ್ಕೆ ಬಂದ ನಂತರ ಗೋವುಗಳ ಸಾಂಗತ್ಯ ಮತ್ತೆ ದೊರಕಿತು. ಶ್ರೀ ಸಂಸ್ಥಾನದವರ ಗೋಸಂರಕ್ಷಣಾ ಕಾರ್ಯಗಳು ಮನಸ್ಸಿಗೆ ಬಹಳ ಆಪ್ತವಾಯಿತು. ಗೋಸ್ವರ್ಗ ನಿರ್ಮಾಣದ ನಂತರ ಅಲ್ಲಿನ ಒಂದು ಹಸುವಿನ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ತಾವೇ ಭರಿಸುವ ಮೂಲಕ ಇತರರಿಗೆ ಮಾದರಿಯಾದ ಅಪ್ರತಿಮ ಗೋ ಪ್ರೇಮಿ ಚಂದ್ರಮತಿ ಹೆಗಡೆ.

ಮಹಾಮಂಡಲ ಅಧ್ಯಕ್ಷರಾದ ಆರ್.ಎಸ್. ಹೆಗಡೆ ಅವರ ಪತ್ನಿಯಾದ ಚಂದ್ರಮತಿ ಹೆಗಡೆ ಪತಿಯೊಡನೆ ಶ್ರೀ ಮಠದ ವಿವಿಧ ಸೇವಾ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು ಎಂಬುದು ಸಂತಸ ತರುವ ವಿಚಾರ.

ಶ್ರೀ ಗುರುಸೇವೆ, ಶ್ರೀಮಠದ ಸೇವೆಗಳಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮನಸ್ಸಿಗೆ ಉಂಟಾಗುವ ಆನಂದ ಅವರ್ಣನೀಯ. ಶ್ರೀ ಮಠವೆಂದರೆ ತವರುಮನೆಗಿಂತಲೂ ಆಪ್ತವಾಗಿದೆ. ಬಿಡುವಿನ ವೇಳೆಗಳಲ್ಲಿ ನೆಂಟರ ಮನೆಗೆ ಹೋಗುವುದಕ್ಕಿಂತಲೂ ಇಷ್ಟ ಶ್ರೀ ಮಠಕ್ಕೆ ಬಂದು ನಮ್ಮ ಕೈಲಾದ ಸೇವೆ ಮಾಡುವಾಗ ದೊರಕುತ್ತದೆ ” ಎನ್ನುವ ಚಂದ್ರಮತಿ ಹೆಗಡೆ ಅವರು ಕೆಲವು ವರ್ಷಗಳಿಂದ ಶ್ರೀ ಮಠದ ನಿಕಟ ಸಂಪರ್ಕ ಹೊಂದಿರುವವರು.

೨೦೦೧ರಲ್ಲಿ ತಮ್ಮ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದ ಚಂದ್ರಮತಿ ಹೆಗಡೆ ೨೦೦೪ರಲ್ಲಿ ಶ್ರೀ ಸಂಸ್ಥಾನದವರ ಕಿರೀಟೋತ್ಸವವು ಸಿದ್ಧಾಪುರದಲ್ಲಿ ಸಂಪನ್ನಗೊಂಡ ಸಂದರ್ಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಸಂಪರ್ಕಕ್ಕೆ ಬಂದವರು. ಮುಂದೆ ಪತಿ ಆರ್.ಎಸ್ ಹೆಗಡೆಯವರು ಸಿದ್ಧಾಪುರ ವಲಯದ ಅಧ್ಯಕ್ಷರಾದ ಸಂದರ್ಭದಲ್ಲಿ ಮಹಿಳಾ ಪರಿಷತ್ತಿನ ಮೂಲಕ ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಂಡರು.

“ಪ್ರತೀ ವರ್ಷವೂ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದ್ದೇನೆ. ಇದಕ್ಕೆ ನಿಶ್ಚಿತ ಕಾಲ ಪರಿಧಿ ಇಲ್ಲ. ಜೀವನದ ಕೊನೆ ತನಕವೂ ಇದೇ ರೀತಿಯಲ್ಲಿ ಗೋಸೇವೆ ಮಾಡುವ ಸೌಭಾಗ್ಯ ದೊರಕಬೇಕು” ಎನ್ನುವ ಮಾತುಗಳಲ್ಲಿ ಅವರಿಗೆ ಗೋವುಗಳ ಮೇಲಿನ ವಿಶೇಷ ಮಮತೆ ವ್ಯಕ್ತವಾಗುತ್ತದೆ.

ಸಮಾಜದಲ್ಲಿ ದೇಶೀ ಹಸುಗಳ ಬಗ್ಗೆ ಅರಿವು ಮೂಡಿಸಿ, ಅವುಗಳ ಮೌಲ್ಯವನ್ನು ತಿಳಿಸುವ  ಸಲುವಾಗಿ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದ ಇವರು ಒಂದು ಹಸುವಿನ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸುವ ಮೂಲಕ ಮಾಸದ ಮಾತೆಯ ಗುರಿ ತಲುಪಿದವರು.

“ಶ್ರೀ ಮಠದ ಸೇವೆ, ಗೋಸೇವೆ ಎಂದ ತಕ್ಷಣವೇ ಎಲ್ಲರೂ  ಸ್ಪಂದಿಸಿದ್ದಾರೆ. ಶ್ರೀ ಗುರುಗಳ ಯೋಜನೆಗಳೆಲ್ಲವೂ ಸಮಾಜದ ಉನ್ನತಿಯ ಗುರಿಯನ್ನು ಹೊಂದಿದೆ. ಶ್ರೀರಾಮದೇವರ, ಶ್ರೀ ಗುರುಗಳ ಅನುಗ್ರಹದಿಂದ ಅಸಾಧ್ಯ ಎನಿಸಿದ ಕಾರ್ಯಗಳು ಕೂಡ ಹೂವೆತ್ತಿದಷ್ಟು ಸುಲಭವಾಗಿ ಕೈಗೂಡುವಾಗ ಮನಸ್ಸಿಗೆ ಅತ್ಯಂತ ಹರ್ಷವುಂಟಾಗುತ್ತದೆ. ಬದುಕಿನಲ್ಲಿ ಆರೋಗ್ಯ, ನೆಮ್ಮದಿ, ಶಾಂತಿ ನೆಲೆಸುವಂತೆ ಮಾಡಿದ ಶ್ರೀರಾಮ ದೇವರಿಗೆ ಸದಾ ಶರಣು. ಸಾಧ್ಯವಿರುವಷ್ಟು ಕಾಲ ಶ್ರೀ ಮಠದ ಸೇವೆ, ಗೋಸೇವೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯಿದೆ. ಇದೇ ಜೀವನದ ಗುರಿ ಎನ್ನುವ ಸರಳ ವ್ಯಕ್ತಿತ್ವದ ಚಂದ್ರಮತಿ ಹೆಗಡೆಯವರ ನಡೆನುಡಿಗಳು ಇತರ ಮಾಸದ ಮಾತೆಯರಿಗೆ ಪ್ರೇರಣಾದಾಯಕವಾಗಿವೆ.

Leave a Reply

Your email address will not be published. Required fields are marked *