“ತ್ಯಾಗದ ಪರ್ವಕ್ಕೆ ಪ್ರೇರಣೆ ಗುರುವಚನಗಳು” : ಸುಮಾ ರಮೇಶ್

ಮಾತೃತ್ವಮ್

“ಸೇವೆ ಮಾಡ ಬೇಕೆಂಬ ತುಡಿತವಿದ್ದರೆ ಯಾವುದಾದರೂ ಒಂದು ಹಾದಿ ತೆರೆಯುತ್ತದೆ. ಹಣದ ಮೂಲಕ ಸಹಕಾರ ನೀಡಬೇಕೆಂಬ ಮನಸ್ಸಿದ್ದರೆ ಯಾವುದೋ ಒಂದು ರೀತಿಯಲ್ಲಿ ಹಣ ಸಂಗ್ರಹವಾಗುತ್ತದೆ. ಇದು ನನ್ನ ಜೀವನದ ಅನುಭವ. ಶ್ರೀ ಮಠದ ಸೇವೆ, ಶ್ರೀ ಗುರುಗಳ ಸೇವೆ, ಗೋಸೇವೆ ಇವುಗಳಲ್ಲಿ ಆನಂದ ಕಂಡುಕೊಳ್ಳುವವಳು ನಾನು. ಇತರರಲ್ಲಿ ನಾನು ಕೇಳಿಕೊಳ್ಳುವುದು ಸಹಾ ಇದನ್ನೇ. ನಮ್ಮ ಗುರುಗಳ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಿ. ಆಗ ದೊರಕುವ ಆನಂದವೇ ನಿಜವಾದ ಸಂತೋಷ” ತುಂಬು ಹೃದಯದ ಈ ನುಡಿಗಳು ಸುಮಾ ರಮೇಶ್ ಅವರದ್ದು.

ಶ್ರೀ ಗುರುಗಳ ಮಹತ್ವಪೂರ್ಣ ಯೋಜನೆಯಾದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ನಿರ್ಮಾಣಕ್ಕಾಗಿ ವಜ್ರದ ಉಂಗುರ ಖರೀದಿಸಲೆಂದು ಇಟ್ಟ ಮೊತ್ತವನ್ನು ಉದಾರ ಮನಸ್ಸಿನಿಂದ ನೀಡಿದ ವಿಶೇಷ ವ್ಯಕ್ತಿತ್ವದ ಒಡತಿಯಾದ ಇವರ ನಡೆನುಡಿಗಳು ಇತರರಿಗೆ ಮಾದರಿ.
ಸರವು ಕುಕ್ಕೆಮನೆ ರಮೇಶ್ ಅವರ ಪತ್ನಿಯಾದ ಸುಮಾ ಅವರ ತವರುಮನೆ ಸಿದ್ದಮೂಲೆ. ಸುಬ್ರಹ್ಮಣ್ಯ ಭಟ್, ಸುಶೀಲಾ ದಂಪತಿಗಳ ಪುತ್ರಿಯಾದ ಇವರು ಪ್ರಸ್ತುತ ಮಂಗಳೂರು ನಗರ ನಿವಾಸಿಯಾಗಿದ್ದು ಮಾತೃತ್ವಮ್ ನ ಮಂಗಳೂರು ಪ್ರಾಂತ್ಯದ ಅಧ್ಯಕ್ಷೆಯಾಗಿದ್ದಾರೆ.

೨೦೦೭ ರಿಂದ ಮಹಿಳಾ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಮಾಡಲಾರಂಭಿಸಿದ ಇವರು ಮುಂದೆ ಶ್ರೀ ಮಠದ ವಿವಿಧ ಯೋಜನೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದವರು. ತಮ್ಮ ಸರ್ವ ಕಾರ್ಯಗಳಿಗೂ ಪತಿ ರಮೇಶ್ ಭಟ್ ಅವರ ಸರ್ವ ಸಹಕಾರ ದೊರಕಿದೆ ಎಂದು ನುಡಿಯುವ ಸುಮಾ ಅವರ ಮಗಳು ಅಂಬಿಕಾ ಪಾರ್ವತಿಯೂ ತಾಯ್ತಂದೆಯರ ಹಾದಿಯಲ್ಲೇ ಮುಂದುವರಿಯುತ್ತಾ ಶ್ರೀ ಮಠದ ಸೇವೆಯಲ್ಲಿ ಕೈ ಜೋಡಿಸುತ್ತಿದ್ದಾಳೆ.

ಬಾಲ್ಯದಿಂದಲೇ ಹಸುಗಳೆಂದರೆ ತುಂಬ ಇಷ್ಟಪಡುತ್ತಿದ್ದ ಅವರು ದನಗಳ ಹಾಲು ಹಿಂಡಲು ಅಭ್ಯಾಸ ಮಾಡಿದವರು. ಮುಂದೆ ಪತಿ ಗೃಹದಲ್ಲೂ ದನ ಸಾಕಾಣಿಕೆ ಇದ್ದರೂ ವೃತ್ತಿ ಸಂಬಂಧವಾಗಿ ಪೇಟೆ ವಾಸ ಆರಂಭವಾದ ಮೇಲೆ ಮನೆಯಲ್ಲಿ ದನ ಸಾಕಲು ಸಾಧ್ಯವಿಲ್ಲ ಎಂಬುದು ಅರಿವಾಯಿತು. ಆದರೂ ಗೋವುಗಳ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಯಕ್ಷಗಾನ, ಸಂಗೀತ, ಹೊಲಿಗೆ ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿರುವ ಸುಮಾ ಅವರಿಗೆ ಭಜನೆ ಹಾಡುಗಳನ್ನು ಹಾಡುವುದು ಅತ್ಯಂತ ಪ್ರಿಯವಾದ ಹವ್ಯಾಸ.

ಶ್ರೀ ಸಂಸ್ಥಾನದವರ ಗೋ ಸಂರಕ್ಷಣಾ ಕಾರ್ಯಕ್ಕೆ ಸರ್ವವಿಧವಾದ ಸಹಕಾರವನ್ನು ಸಲ್ಲಿಸುವ ಇಚ್ಛೆ ಹೊಂದಿದ್ದ ಇವರು ಹಿಂದೆ ಅಭಯಾಕ್ಷರ ಅಭಿಯಾನ, ಹಾಲುಹಬ್ಬ, ವಿಶ್ವ ಮಂಗಲ ಗೋಯಾತ್ರೆಗಳ ಸಂದರ್ಭಗಳಲ್ಲಿ ದೇಶೀಯ ಹಸುಗಳ ಮಹತ್ವವನ್ನು ಮನೆಮನೆಗಳಿಗೆ ತೆರಳಿ ವಿವರಿಸಿದವರು. ಈ ರೀತಿಯ ಗೋ ಸೇವೆಯಿಂದಲೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂಬುದು ಅವರ ಅಭಿಪ್ರಾಯ.

“ಶ್ರೀ ಗುರುಸೇವೆ ಎಂದು ಹೊರಟರೆ ಬಿರು ಬಿಸಿಲೂ ತಂಪಾದ ಅನುಭವ ನೀಡುತ್ತದೆ. ಅಭಯಾಕ್ಷರ ಅಭಿಯಾನದಲ್ಲಿ ಸಹಿ ಸಂಗ್ರಹಕ್ಕಾಗಿ ಬೆಂಗಳೂರಿನಲ್ಲಿ ನಾಲ್ಕು ದಿವಸ ಮಂಗಳೂರಿನಲ್ಲಿ ಮೂರು ತಿಂಗಳು ಮನೆಮನೆ ಭೇಟಿ ನೀಡಿದ್ದೇನೆ. ಉತ್ಸವ ,ಜಾತ್ರೆ ಎಂದು ಜನರು ಸೇರುವಲ್ಲೆಲ್ಲ ತೆರಳಿ ಅವರಲ್ಲಿ ದೇಶೀಯ ಹಸುಗಳ ವಿಶೇಷತೆಗಳ ಬಗ್ಗೆ ಮನವರಿಕೆ ಮಾಡಿಸಿ ಸಹಿ ಸಂಗ್ರಹ ಮಾಡಿದ ಅನುಭವ ನಿಜಕ್ಕೂ ಹರ್ಷ ನೀಡಿದೆ” ಎಂದು ತಮ್ಮ ಅನುಭವಗಳನ್ನು ಮೆಲುಕು ಹಾಕುತ್ತಾರೆ.

ಒಂದು ವರ್ಷಕ್ಕೆ ಒಂದು ಹಸುವಿನ ಸಂಪೂರ್ಣ ವೆಚ್ಚವನ್ನು ತಾವೇ ವಹಿಸಿಕೊಂಡಿರುವ ಸುಮಾ ಅವರು ಇನ್ನೊಂದು ಹಸುವಿನ ನಿರ್ವಹಣಾ ವೆಚ್ಚವನ್ನು ಹವ್ಯಕೇತರ ಸಮಾಜದಿಂದ ಸಂಗ್ರಹಿಸಿದ್ದಾರೆ. ಸ್ವದೇಶೀ ಹಸುಗಳ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆ ಇದೆ ಎನ್ನುವ ಇವರು ತಮಗೆ ಪರಿಚಯವಾದವರಲ್ಲೆಲ್ಲ ದೇಶೀಯ ಹಸುಗಳ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಅವರ ಮನವೊಲಿಸಿ ಗೋ ಸೇವೆಯ ಕೈಂಕರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ.

“ಯಾವುದೇ ಕೆಲಸಕ್ಕೆ ಹೊರಡುವಾಗಲೂ ಶ್ರೀಗುರುಗಳ ಸ್ಮರಣೆ ಮಾಡಿಯೇ ಹೊರಡುವವಳು ನಾನು. ಸುಖ ದುಃಖಗಳಲ್ಲೂ ಗುರುಗಳ ವಚನಗಳೇ ನೆನಪಿಗೆ ಬಂದು ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸುವಂತೆ ಮಾಡಿದೆ. ನಾಲ್ಕು ಬಾರಿ ಶ್ರೀ ಗುರುಭಿಕ್ಷಾ ಸೇವೆ ಮಾಡುವ ಅವಕಾಶ ದೊರಕಿದೆ. ಶ್ರೀ ಸಂಸ್ಥಾನದವರ ಆದೇಶದಂತೆ ಪತಿ ರಮೇಶ್ ಭಟ್ ಶ್ರೀ ರಾಮಾಯಣ ಪಾರಾಯಣವನ್ನೂ ಮಾಡಿದ್ದಾರೆ. ಮಗಳು ಅಂಬಿಕಾ ಪಾರ್ವತಿ ಧಾರಾ ರಾಮಾಯಣದ ಒಂದು ದಿನದ ಪ್ರಾಯೋಜಕತ್ವವನ್ನು ವಹಿಸಿದ್ದಾಳೆ. ಹಾಗೆಯೇ ಶಂಕರಾಚಾರ್ಯರಿಂದ ಆರಂಭಗೊಂಡು ಮೂವತ್ತಾರು ಯತಿವರೇಣ್ಯರ ನಾಮದಲ್ಲೂ ಗೋಸ್ವರ್ಗದಲ್ಲಿ ಏಕಪದ ಸೇವೆಯನ್ನು ಸಲ್ಲಿಸಿದ್ದಾಳೆ. ಇದೆಲ್ಲವೂ ಸಾಧ್ಯವಾಗಿದ್ದು ಶ್ರೀ ಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ. ಸದಾ ಗುರುಸೇವೆ ,ಗೋ ಸೇವೆ ಎಂದು ಮನ ತುಡಿಯುತ್ತಿರುತ್ತದೆ. ಪೂರ್ಣ ಸಮರ್ಪಣಾ ಭಾವದ ತ್ಯಾಗಕ್ಕೆ ಶ್ರೀ ಗುರುಸೇವೆಯೇ ಕಾರಣ” ಎಂಬ ಸುಮಾ ರಮೇಶ್ ಅವರ ಮಾತುಗಳು ಸಮಾಜದ ಎಲ್ಲರಿಗೂ ಮಾದರಿಯಾಗಿದೆ.

“ನಮ್ಮಿಂದ ಸಾಧ್ಯವಿರುವಷ್ಟು ಕಾಲ,ಸಾಧ್ಯವಾಗುವ ರೀತಿಯಲ್ಲಿ ಗುರುಸೇವೆಯ ಭಾಗ್ಯ ದೊರಕುವಂತಾಗ ಬೇಕೆಂಬುದೇ ಮನದ ಮಹೋನ್ನತ ಅಭಿಲಾಷೆ “ಎನ್ನುವ ಇವರಿಗೆ ಸಮಾಜದ ಮಾತೆಯರ ಮನದಲ್ಲಿ ದೇಶೀ ಗೋವುಗಳ ಮಹತ್ವದ ಅರಿವು ಮೂಡಿಸಿ ಇನ್ನಷ್ಟು ಮಾತೆಯರನ್ನು ಮಾಸದ ಮಾತೆಯಾಗಿಸಿ ಅವರ ಮೂಲಕ ಮತ್ತಷ್ಟು ಗೋಸೇವೆ ಸಲ್ಲುವಂತಾಗ ಬೇಕೆಂಬುದೇ ಮುಂದಿನ ಗುರಿ.
” ಒಡವೆಗಳನ್ನು ಧರಿಸುವುದಕ್ಕಿಂತಲೂ ಹೆಚ್ಚು ಸಂತಸ ಶ್ರೀ ಮಠದ ಒಂದು ಯೋಜನೆಗೆ ಸರ್ವ ಸಮರ್ಪಣಾ ಭಾವದಿಂದ ಕೈ ಜೋಡಿಸಿದಾಗ ಸಿಗುತ್ತದೆ” ಎಂಬ ಅವರ ಮಾತುಗಳು ಗುರುಭಕ್ತರಿಗೆ ದಾರಿದೀಪವಾಗಿದೆ.

Author Details


Srimukha

Leave a Reply

Your email address will not be published. Required fields are marked *