ತವರುಮನೆ ಸೂರ್ಯಂಬೈಲು ಮನೆಯವರು ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳ ಕಾಲದಿಂದಲೇ ಗ್ರಾಮದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಾ ಬಂದವರು. ತಾಯಿಯ ತಂದೆ ಬೈಪ್ಪದವು ರಾಮಚಂದ್ರ ಭಟ್ ಅವರು ಪೆರಾಜೆಯ ಮಾಣಿ ಮಠ ಕಟ್ಟುವ ಕಾರ್ಯದಲ್ಲಿ ಮುಂದಾಳತ್ವ ವಹಿಸಿದವರು. ಇದರಿಂದಾಗಿ ಬಾಲ್ಯದಿಂದಲೇ ವಿದ್ಯಾ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿತು. ಶ್ರೀ ಮಠ,ಗುರುಗಳು ಎಂಬ ಅಭಿಮಾನ ಮೂಡಿ ಭಕ್ತಿ ಶ್ರದ್ಧೆ ಮೂಡಲು ಕಾರಣವಾಯಿತು. ನಿರಂತರ ಶ್ರೀ ಮಠದ ಸಂಪರ್ಕ, ಗುರುಸೇವೆ,ಗೋಸೇವೆಗಳು ಪೂರ್ವ ಜನ್ಮದ ಸುಕೃತದಿಂದ ಲಭಿಸುತ್ತದೆ ಎಂಬುದು ಏಳ್ಕಾನದ ಡಾ. ರವಿಶಂಕರ್ ಅವರ ಪತ್ನಿಯಾದ ವಿದ್ಯಾ ಅವರ ಅನಿಸಿಕೆ.
ಪಾಣಾಜೆ ಸೂರ್ಯಂಬೈಲು ಎಸ್.ಆರ್ ನರಸಿಂಹ ಭಟ್,ಮನೋರಮಾ ದಂಪತಿಗಳ ಪುತ್ರಿಯಾದ ವಿದ್ಯಾ ಅವರ ತವರುಮನೆಯವರು ಶ್ರೀ ಮಠದ ನಿಕಟ ಸಂಪರ್ಕ ಹೊಂದಿದವರು. ಇದರಿಂದಾಗಿ ಶ್ರೀಗುರುಗಳ ಪಾದಪೂಜೆಯ ಸುದಿನವೇ ಮಗಳು ವಿದ್ಯಾಳ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಶ್ರೀ ಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವಂತಾಯಿತು.
೨೦೦೨ ಮಾರ್ಚ್ ತಿಂಗಳ ೭ ರಂದು ತನ್ನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವು ಶ್ರೀಗುರುಗಳ ಸಮ್ಮುಖದಲ್ಲಿ ನೆರವೇರಿದ್ದು ಬದುಕಿನ ಅತ್ಯಂತ ಆನಂದದ ಕ್ಷಣ ಎಂದು ಮನದುಂಬಿ ನುಡಿಯುವ ವಿದ್ಯಾ ಮಹಿಳಾ ಪರಿಷತ್ ಆರಂಭವಾದಂದಿನಿಂದಲೂ ಶ್ರೀಮಠದ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವವರು.
೨೦೦೨ ರಲ್ಲಿ ಮಹಿಳಾ ಪರಿಷತ್ತಿನ ಕುಂಕುಮಾರ್ಚನೆಯ ಸಂಚಾಲಕಿಯಾಗಿ ಸೇವೆಗೈಯಲು ಆರಂಭಿಸಿದ ಇವರು ಪ್ರಸ್ತುತ ಪುತ್ತೂರು ದರ್ಭೆ ನಿವಾಸಿಯಾಗಿದ್ದು ಶ್ರೀ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಉಪ್ಪಿನಂಗಡಿ ಮಂಡಲದ ಪುತ್ತೂರು ನಗರ ಸಮಿತಿಯ ಕೋಶಾಧ್ಯಕ್ಷೆಯಾಗಿಯೂ ಇದ್ದಾರೆ.
ಮದುವೆಯ ನಂತರ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು ಪಡೆದ ವಿದ್ಯಾ ಗೆ harerama.in ಜಾಲತಾಣದಲ್ಲಿ ಸೇವೆ ಸಲ್ಲಿಸಿದ ಅನುಭವ ಇದೆ. ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರು ಶ್ರೀ ಸಂಸ್ಥಾನದವರ ವಿವಿಧ ಯೋಜನೆಗಳ ಬಗ್ಗೆ ಬ್ಲಾಗ್ ನಲ್ಲಿ ಲೇಖನಗಳನ್ನು ಬರೆದಿದ್ದಾರೆ.
ಪೆರಾಜೆಯ ಮಾಣಿ ಮಠದಲ್ಲಿ ಶ್ರೀಗುರುಗಳ ಚಾತುರ್ಮಾಸ್ಯದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ಶ್ರೀ ಸಂಸ್ಥಾನದವರ ವಿವಿಧ ಯೋಜನೆಗಳಲ್ಲಿ ಸೇವೆ ಮಾಡುವ ಸೌಭಾಗ್ಯ ಒದಗಿ ಬಂತು.
ಗೋಸ್ವರ್ಗ ಸ್ಥಾಪನೆಗೊಂಡ ನಂತರ ಅಲ್ಲಿಗೆ ಭೇಟಿ ನೀಡಿದಂದಿನಿಂದ ಅಲ್ಲಿನ ಗೋವುಗಳ ನಿರ್ವಹಣೆಗೆ ಸಹಕಾರ ನೀಡುತ್ತಿದ್ದವರು ವಿದ್ಯಾ ರವಿಶಂಕರ್ ದಂಪತಿಗಳು .ಮುಂದೆ ಮಾತೃತ್ವಮ್ ಯೋಜನೆ ರೂಪುಗೊಂಡಾಗ ವಿದ್ಯಾ ಅವರು ಮಾಸದ ಮಾತೆಯಾಗಿ ಸೇವೆಗೈದು ಆ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸಿದರು.
ಅವರಿಗೆ ಮೊದಲ ದೇಣಿಗೆ ಪತಿಯಿಂದಲೇ ದೊರಕಿತು. ಮುಂದೆ ತವರುಮನೆಯವರು,ಒಡಹುಟ್ಟಿದವರು, ಆತ್ಮೀಯ ಮಿತ್ರರು…..ಹೀಗೆ ಸಹಕಾರ ಕೇಳಿದವರೆಲ್ಲ ಉದಾರ ಮನದಿಂದ ಗೋಸೇವೆಗೆ ಸಹಾಯ ಹಸ್ತ ಚಾಚಿದರು. ಹಿರಿಯರಾದ ಉರಿಮಜಲು ರಾಮ ಭಟ್ಟರಲ್ಲಿ ಮಾತೃತ್ವಮ್ ಯೋಜನೆಯ ಬಗ್ಗೆ ಪ್ರಸ್ತಾಪಿಸಿದಾಗ ಅತ್ಯಂತ ಸಂತಸ ಪಟ್ಟು ತಮ್ಮ ಮನೆಗೆ ಆಹ್ವಾನಿಸಿ
” ನನಗೀಗ ಎಂಭತ್ತು ವರ್ಷ ವಯಸ್ಸಾಯಿತು. ಶ್ರೀಮಠದ ಸೇವೆ ಮಾಡ ಬೇಕೆಂದು ಕೊಂಡರೂ ವೃದ್ಧಾಪ್ಯದ ಕಾರಣದಿಂದ ಸಾಧ್ಯವಾಗುತ್ತಿಲ್ಲ. ನಿಮ್ಮಂಥವರು ಇದನ್ನು ಮುಂದುವರಿಸ ಬೇಕು” ಎಂದು ಆಶೀರ್ವದಿಸಿ ಹಣ ನೀಡಿದ ಘಟನೆ ವಿದ್ಯಾ ರವಿಶಂಕರ್ ಅವರಿಗೆ ಮರೆಯಾರದ ಅನುಭವ.
ಶ್ರೀ ಸೇವಾ ಶ್ರೀ ಬಳಗದ ಮೂಲಕ ಮೂರು ಬಾರಿ ಗುರುಭಿಕ್ಷಾ ಸೇವೆ ಮಾಡಿಸುವ ಸುಯೋಗ ಇವರಿಗೆ ದೊರಕಿದೆ. ಅಕ್ಷರ ದೀಕ್ಷೆಯನ್ನು ದಂಪತಿಗಳು ಸ್ವೀಕರಿಸಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಶ್ರೀ ಮಠದ ಗೋ ಉತ್ಪನ್ನಗಳನ್ನು ತಮ್ಮ ಕ್ಲಿನಿಕ್ ನಲ್ಲಿ ಇರಿಸಿ ಅದರ ಮಹತ್ವವನ್ನು ಜನಮಾನಸಕ್ಕೆ ತಲುಪಿಸುತ್ತಿರುವ ಪತಿ ಡಾ. ರವಿಶಂಕರ್ ಅವರ ಪ್ರೋತ್ಸಾಹ, ಬೆಂಬಲವೇ ಶ್ರೀಮಠದ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕಾರಣ ಎನ್ನುವ ವಿದ್ಯಾ ಅವರಿಗೆ ಗುರುಸೇವೆಯೇ ಜೀವನದ ಗುರಿ. ಶ್ರೀ ಗುರುಗಳ ಆದೇಶವನ್ನು ನಿರಂತರ ಪಾಲಿಸುವ ಮೂಲಕ ಬದುಕನ್ನು ಆದರ್ಶವಾಗಿರಿಸ ಬೇಕೆಂಬುದೇ ಅವರ ಕನಸು.