ಗೋಕರ್ಣ: ವಿಶ್ವದಲ್ಲಿ ಕೊರೋನಾ ಅಟ್ಟಹಾಸದ ನಡುವೆಯೇ ರಾಜ್ಯದ ಮಲೆನಾಡು ಭಾಗದಲ್ಲಿ ಹಾಗೂ ನೆರೆ ರಾಜ್ಯಗಳ ಕೆಲವೆಡೆ ಮಂಗನ ಕಾಯಿಲೆ ವ್ಯಾಪಕವಾಗಿ ಹರಡಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ, ಕೊಪ್ಪ ತಾಲೂಕುಗಳಲ್ಲಿ ಈ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ್ದು, 250ಕ್ಕೂ ಹೆಚ್ಚು ಮಂದಿಗೆ ಸೊಂಕು ತಗುಲಿದೆ. ಮೂವರು ಈಗಾಗಲೇ ಈ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.
ಆರು ದಶಕಗಳಿಂದ ಈ ಭಾಗದ ಜನತೆಗೆ ದುಃಸ್ವಪ್ನವಾಗಿ ಕಾಡುತ್ತಿರುವ ಈ ವೈರಸ್ ಸೋಂಕು ಮೈಸೂರು, ಚಾಮರಾಜನಗರ ಸೇರಿದಂತೆ ಇದೀಗ ಇತರ ಪ್ರದೇಶಗಳಿಗೂ ಹಬ್ಬುತ್ತಿರುವುದು ಆತಂಕಕಾರಿ. ಸರ್ಕಾರ ಕೆಎಫ್‍ಡಿ ಸೋಂಕಿತರಿಗೆ ಉಚಿತ ಚಿಕಿತ್ಸೆಯ ಭರವಸೆ ನೀಡಿದ್ದರೂ, ಕಳೆದ ವರ್ಷ ನೀಡಿದ ಚಿಕಿತ್ಸೆ ಬಿಲ್ ಬಾಕಿ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ನೆರೆಯ ಕೇರಳ ಹಾಗೂ ತಮಿಳುನಾಡಿನ ಹಲವೆಡೆ ಕೂಡಾ ಈ ಸೋಂಕು ಕಾಣಿಸಿಕೊಂಡಿದ್ದು, ಸಮಸ್ಯೆ ಇರುವ ಎಲ್ಲ ರಾಜ್ಯಗಳು ಜತೆಯಾಗಿ ಚರ್ಚಿಸಿ ಉನ್ನತ ಸಂಶೋಧನೆಗೆ ಒತ್ತು ನೀಡಬೇಕು. ಕೆಎಫ್‍ಡಿ ತಡೆಗೆ ಲಸಿಕೆ ಇದ್ದರೂ ಅದು ಪರಿಣಾಮಕಾರಿಯಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕಳೆದ ವರ್ಷ ಲಸಿಕೆ ಹಾಕಿಸಿಕೊಂಡವರಿಗೆ ಕೂಡಾ ಹಲವು ಮಂದಿಗೆ ಈ ಬಾರಿ ಮತ್ತೆ ಸೋಂಕು ತಗುಲಿದ ನಿದರ್ಶನವಿದ್ದು, ಲಸಿಕೆ ಸಾಮಥ್ರ್ಯ ವೃದ್ಧಿಗೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದ್ದಾರೆ.
ವರ್ಷದಿಂದ ವರ್ಷಕ್ಕೆ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದ್ದರೂ, ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಘ ಸಂಸ್ಥೆಗಳು ಶಾಶ್ವತ ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿಲ್ಲ. ಶ್ರೀಮಠದ ವತಿಯಿಂದ ಕಳೆದ ವರ್ಷ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಸುಮಾರು ಮೂರು ಸಾವಿರ ಮಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗವ್ಯ ಔಷಧಿಯನ್ನು ನೀಡಲಾಗಿದ್ದು, ಇದು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಬಳಿಕ ಗೋಸ್ವರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಗವ್ಯ ಸಂಶೋಧನಾ ಕೇಂದ್ರದಲ್ಲಿ ಈ ಬಗ್ಗೆ ಆಳವಾದ ಸಂಶೋಧನೆ ಕೈಗೊಳ್ಳಲು ಶ್ರೀಮಠದ ಸಂಶೋಧನಾ ವಿಭಾಗ ಸಿದ್ಧವಿದ್ದು, ಇದಕ್ಕೆ ಅಗತ್ಯ ಸಂಪನ್ಮೂಲ ಹಾಗೂ ತಂತ್ರಜ್ಞಾನದ ನೆರವನ್ನು ಸರ್ಕಾರ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.