ಶ್ರೀ ಮಠದ ಸೇವೆ ಗೋಸೇವೆ ತಾಯ್ತಂದೆಯರ ಬಳುವಳಿ: ಈಶ್ವರೀ ರಾಮಕೃಷ್ಣ

ಮಾತೃತ್ವಮ್

ಮಾಣಿ ಮಠದ ಶ್ರೀರಾಮದೇವರ ಅರ್ಚಕರಾಗಿ ಸುಮಾರು ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಪೂಜ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ‘ಪ್ರಾಮಾಣಿಕ ಸೇವೆಗಾಗಿ ಪುರಸ್ಕೃತಗೊಂಡ ಪಂಜಿಗುಡ್ಡೆ ನಾರಾಯಣ ಭಟ್ಟರ ಪುತ್ರಿಯಾಗಿರುವ ಕುರಿಯದ ಈಶ್ವರೀ ರಾಮಕೃಷ್ಣ ಅವರಿಗೆ ಗುರುಸೇವೆ, ಗೋಸೇವೆ ತಾಯ್ತಂದೆಯರು ತೋರಿದ ಹಾದಿ. ತಾಯಿ ಕಾವೇರಿ ಅವರು ಸಹಾ ಗೋಸಾಕಣಿಗೆಯಲ್ಲಿ ಶ್ರೀ ಸಂಸ್ಥಾನದವರಿಂದ ಸನ್ಮಾನಿಸಲ್ಪಟ್ಟವರು ಎಂಬುದು ಇವರ ಹೆಮ್ಮೆ.

“ನನ್ನ ಬಾಲ್ಯವೇ ಮಾಣಿಮಠದಲ್ಲಿ. ಅರ್ಚಕರಾದ ತಂದೆಯ ಕಾರ್ಯಕ್ಕೆ ನೆರವಾಗುವ ತಾಯಿಯ ಜೊತೆಯಲ್ಲಿ ನಾವು ಸಹಾ ಕೈ ಜೋಡಿಸಿದವರು. ಎಳವೆಯಲ್ಲಿಯೇ ಹಸುಗಳ ಮೇಲೆ ಪ್ರೀತಿ ಮೂಡಲು ತಾಯಿಯೇ ಕಾರಣ” ಎನ್ನುವ ಈಶ್ವರೀ ರಾಮಕೃಷ್ಣ ಅವರು ಉಪ್ಪಿನಂಗಡಿ ಮಂಡಲದ ದರ್ಭೆ ವಲಯದ ಅಧ್ಯಕ್ಷೆ ಹಾಗೂ ಪುತ್ತೂರು ನಗರ ಮಾತೃತ್ವಮ್  ನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಖಾಸಗಿ ಸಂಸ್ಥೆಯೊಂದರಲ್ಲಿ  ಪಿ.ಆರ್.ಓ. ಆಗಿ ಕೆಲಸ ನಿರ್ವಹಿಸುವ ಜೊತೆಯಲ್ಲಿ ಇವರು  ಹತ್ತು ಹಲವು ಹವ್ಯಾಸಗಳನ್ನು ಸಹಾ ಮೈಗೂಡಿಸಿಕೊಂಡವರು. ಹೊಲಿಗೆ, ಕಸೂತಿ, ಹಾಡು,ಭಜನೆಗಳಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಯಕ್ಷಗಾನದಲ್ಲಿಯೂ ವಿಶೇಷ ಆಸಕ್ತಿಯಿದೆ. ಭಾಗವತಿಕೆಯನ್ನೂ ಹವ್ಯಾಸವಾಗಿರಿಸಿದ ಈಶ್ವರೀ ರಾಮಕೃಷ್ಣ ಅವರು ತಮ್ಮ ತಂಡದೊಂದಿಗೆ ಮಾಣಿ ಮಠದಲ್ಲಿ ಶ್ರೀ ಗುರುಗಳ ಸಮ್ಮುಖದಲ್ಲಿ ತಾಳಮದ್ದಳೆಯಲ್ಲಿ ನಡೆಸಿ ಜನ ಮೆಚ್ಚುಗೆ ಗಳಿಸಿದವರು.

“ಆಶ್ರಯವರಸಿ ಬಂದ ನಮ್ಮ ತಂದೆಯವರಿಗೆ ಆಶ್ರಯ ನೀಡಿದ  ಗುರುಗಳೇ ನಮಗೆ ಮನೆದೇವರು ಎಂದು ಭಾವಿಸಿದವರು ನಾವು. ಈಗಲೂ ಯಾವುದೇ ಶುಭಕಾರ್ಯಕ್ಕೆ ಹೊರಡುವಾಗ ಶ್ರೀಗುರುಗಳ ಭಾವಚಿತ್ರದ ಮುಂದೆ ತುಪ್ಪ ದೀಪ ಹಚ್ಚಿ ಪ್ರಾರ್ಥಿಸಿಯೇ ಮುಂದುವರಿಯುವುದು. ನಮ್ಮ ಮನೆಯ ಹೆಸರನ್ನು ಸಹಾ ” ಗುರುನಿಲಯ” ಎಂದೇ ಇರಿಸಿದ್ದೇವೆ. ನಮ್ಮ ಬದುಕಿನ ಎಲ್ಲಾ ಕಷ್ಟಗಳಲ್ಲೂ ಕೈಹಿಡಿದು ಮುನ್ನಡೆಸಿದ ಶಕ್ತಿ ಆ ಗುರುಗಳು ಹಾಗೂ ಶ್ರೀರಾಮದೇವರದ್ದು ” ಎಂದು ಭಕ್ತಿ ಭಾವದಿಂದ ನುಡಿಯುತ್ತಾರೆ ಈಶ್ವರೀ ರಾಮಕೃಷ್ಣ.

ತೆಂಕ ಮಾಣಿಪ್ಪಾಡಿಯ ರಾಮಕೃಷ್ಣ ಭಟ್ ( ನಿವೃತ್ತ ಮುಖ್ಯೋಪಾಧ್ಯಾಯರು) ಅವರ ಪತ್ನಿಯಾದ ಈಶ್ವರೀ ಅವರಿಗೆ ತವರುಮನೆಯಂತೆಯೇ ಪತಿಯ ಮನೆಯಲ್ಲೂ ಗೋಸಾಕಣೆಯ ಸೇವೆ ಲಭ್ಯವಾಯಿತು.
” ಹಟ್ಟಿ ತುಂಬಾ ಹಸುಗಳು ಮನೆಯ ಐಶ್ವರ್ಯದ ಪ್ರತೀಕವಾಗಿದ್ದ ಕಾಲವಾಗಿತ್ತದು” ಎಂದು ತಮ್ಮ ಗೋಸೇವೆಯ ಅನುಭವಗಳ ಸುರುಳಿ ಬಿಚ್ಚಿಡುತ್ತಾರೆ ಈಶ್ವರೀ.
“ಹಿಂದೆ ಮಡಿಕೇರಿಯಲ್ಲಿ ಇರುವಾಗಲೂ ಮಾಣಿಮಠದ ಕಾರ್ಯಕ್ರಮಗಳಿಗೆ ಅಲ್ಲಿಂದಲೇ ಬಂದು ಸೇವೆ ಮಾಡಿದ್ದೇನೆ. ತೆಂಗಿನ ಸೋಗೆ ಹೆಣೆಯುವುದು, ಸೆಗಣಿ ಸಾರಿಸುವುದೇ ಮೊದಲಾದ ಕೆಲಸಗಳನ್ನು  ನಮ್ಮ ತಂಡದೊಂದಿಗೆ ಮಾಡಿದ್ದೇನೆ. ಮಠದ ಸೇವೆ ಮಾಡಿದಾಗ ದೊರಕುವ ಸಂತೃಪ್ತಿಗೆ ಸಮನಾದುದು ಬೇರೆ ಯಾವುದೂ ಇಲ್ಲ” ಎಂಬುದು ಇವರ ಅನುಭವದ ಮಾತುಗಳು.

ಅಭಯಾಕ್ಷರ ಅಭಿಯಾನಕ್ಕೆ ಒಂಭತ್ತು ಜನರ ತಂಡದೊಂದಿಗೆ ಬೆಂಗಳೂರಿಗೆ ತೆರಳಿ ಅಲ್ಲಿ ಐದು ದಿನಗಳ ಕಾಲ ಸೇವೆ ಸಲ್ಲಿಸಿ ಬಂದ ಈಶ್ವರೀ ರಾಮಕೃಷ್ಣ ಅವರ ಎಲ್ಲಾ ಕಾರ್ಯಗಳಿಗೂ ಆಸರೆಯಾಗಿ ನಿಂತು ಪ್ರೋತ್ಸಾಹ ನೀಡುವವರು ಪತಿ ರಾಮಕೃಷ್ಣ ಅವರು. ಪತಿಯ ಬೆಂಬಲದಿಂದಲೇ ನನಗೆ ಶ್ರೀ ಮಠದ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ಈಶ್ವರೀ.

ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದ ಈಶ್ವರೀ ಅವರು ಮಾಸದ ಮಾತೆಯಾಗಿ ಮಾತೃತ್ವಮ್ ಯೋಜನೆಯಲ್ಲಿಯೂ ಒಂದು ವರ್ಷಕ್ಕೆ ಒಂದು ಹಸುವಿನ ಪೋಷಣೆಯ ವೆಚ್ಚವನ್ನು ಹೊತ್ತು ತಮ್ಮ ಗುರಿಯನ್ನು ತಲುಪಿದ್ದಾರೆ. ಇವರು ಈ ಮೊತ್ತವನ್ನು ತಮ್ಮ ವಲಯದ ಶಿಷ್ಯ ಬಂಧುಗಳಿಂದಲೇ ಸಂಗ್ರಹಿಸಿ ಗುರಿ ತಲುಪಿದವರು. ತಮ್ಮ ಬಳಗದಲ್ಲಿ ದೇಶೀಯ ಗೋವಿನ ಮಹತ್ವವನ್ನು ತಿಳಿಸಿ ಮನೆ ಮನೆಗಳ ಸಂಪರ್ಕ ಮಾಡಿ ಕಾಲ್ನಡಿಗೆಯಲ್ಲಿಯೇ ಗೋವಿಗಾಗಿ ಅಭಿಯಾನ ನಡೆಸಿದವರು.

“ವಿನಯ,ವಿವೇಕ, ಒಳ್ಳೆಯತನ ನಮ್ಮ ಜೊತೆಗಿದ್ದರೆ ಯಾವುದೇ ಕಾರ್ಯದಲ್ಲೂ ಸೋಲು ಎಂಬುದೇ ಇಲ್ಲ ” ಎಂದು ನುಡಿಯುವ ಇವರಿಗೆ ಹಲವಾರು ಹವ್ಯಕೇತರ ಬಂಧುಗಳು ಸಹಾ ಗೋ ಸೇವೆಗೆ ಸಹಕಾರ ನೀಡಿರುವುದನ್ನು ಹೆಮ್ಮೆಯಿಂದ ಸ್ಮರಿಸುತ್ತಾರೆ.

“ಪತಿಯ ಸಹಕಾರದಿಂದ ಸೇವೆ ಮಾಡುತ್ತಿದ್ದೇನೆ. ವಿದ್ಯಾರ್ಥಿನಿಯಾಗಿರುವ ಮಗಳು ಸಹಾ ಸುರಭಿ ಸೇವಿಕೆಯಾಗಿ ನನ್ನೊಂದಿಗೆ ಕೈ ಜೋಡಿಸುತ್ತಿದ್ದಾಳೆ. ನಮ್ಮ ಮನೆಯಲ್ಲಿ ರಾಮಾಯಣ ಪಾರಾಯಣ, ಕುಂಕುಮಾರ್ಚನೆಯಂತಹ ಸೇವೆಯನ್ನು ನಡೆಸಿದ್ದೇವೆ. ಇತರ ಕಡೆಗಳಲ್ಲೂ ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಭಾಗವಹಿಸಿದ್ದೇವೆ. ಗುರುಸೇವೆ, ಗೋ ಸೇವೆಗಳೇ ನನ್ನ ಜೀವನದ ಗುರಿ” ಎನ್ನುವ ಮಾತುಗಳ ಮೂಲಕ ಈಶ್ವರೀ ರಾಮಕೃಷ್ಣ ಅವರು ನಿರಂತರವಾಗಿ ಸೇವೆ ಗೈಯುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾರೆ. ಈಶ್ವರೀ ರಾಮಕೃಷ್ಣ ಅವರ ಸೇವೆಯು ಇತರ ಮಾಸದ ಮಾತೆಯರಿಗೆ ಮಾದರಿಯಾಗಿದೆ.

Author Details


Srimukha

Leave a Reply

Your email address will not be published. Required fields are marked *