ಹಸುಗಳ ಕೊರಳ ಗಂಟೆಯ ಸದ್ದೇ ಬದುಕಿನ ಚೇತನ: ದೇವಕಿ ಭಟ್ ಪನ್ನೆ

ಮಾತೃತ್ವಮ್

ಮನೆಯಲ್ಲಿ ಮೂವತ್ತನಾಲ್ಕು ಹಸುಗಳನ್ನು ಸಾಕುತ್ತಿರುವಾಗಲೇ ಶ್ರೀ ಗುರುಗಳ ಸಮಾಜಮುಖಿ ಕಾರ್ಯಗಳಲ್ಲಿ ಆಸಕ್ತಿ ವಹಿಸಿ ಮಹಿಳಾ ಪರಿಷತ್ ನ ಮೂಲಕ ಸೇವೆ ಸಲ್ಲಿಸಲು ಆರಂಭಿಸಿದ ದೇವಕಿ ಭಟ್ ಪನ್ನೆ ಅವರು ಇಂದು ಕೂಡಾ ಮನೆಯಲ್ಲಿ ಹಸುಗಳನ್ನು ಸಾಕುವ ಜೊತೆಗೆ ಮಠದ ಗೋ ಸಾಕಣೆಗೂ ಕೈ ಜೋಡಿಸಿ ಇತರರಿಗೆ ಮಾದರಿಯಾಗಿರುವವರು.

“ಮುಂಜಾನೆ ನಾಲ್ಕು ಗಂಟೆಗೆ ಎದ್ದು ಹತ್ತು ಹದಿನಾಲ್ಕು ಹಸುಗಳನ್ನು ಕರೆದು, ಅವುಗಳಿಗೆ ಹಿಂಡಿ,ಮೇವು ನೀಡಿ, ಉಳಿದ ಮನೆಗೆಲಸಗಳನ್ನು ಪೂರೈಸಿ ಮನೆಯಿಂದ ಹೊರಡುವವಳು ನಾನು. ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಿ ಇತರರಿಗೆ ಮಾದರಿಯಾದಾಗ ಮಾತ್ರ ಗೋ ಸಂರಕ್ಷಣೆಯ ಬಗ್ಗೆ ನಮಗೂ ಧೈರ್ಯವಾಗಿ ಮಾತನಾಡಲು ಸಾಧ್ಯವಾಗುತ್ತದೆ” ಎಂದು ನುಡಿಯುವ ದೇವಕಿ ಭಟ್ ಅವರು ಐದನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಹಸುವಿನ ಹಾಲು ಕರೆಯಲು ಕಲಿತವರು. ಬಾಲ್ಯದಿಂದಲೇ ಹಸು ಸಾಕಣೆಯಲ್ಲಿ, ಅವುಗಳ ಒಡನಾಟದಲ್ಲಿ ಸಂತಸ ಕಂಡು ಕೊಂಡಿದ್ದ ಅವರ ಮನೆಯಲ್ಲಿ ಇಂದಿಗೂ ಇರುವುದು ಶುದ್ಧ ಭಾರತೀಯ ತಳಿಯ ಹಸುಗಳು.

ಸುಮಾರು ಒಂಭತ್ತು ವರ್ಷಗಳಿಂದ ಶ್ರೀ ಮಠದ ವಿವಿಧ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದ್ದು. ಮುಳ್ಳೇರಿಯ ಮಂಡಲದ ಮುಷ್ಟಿ ಭಿಕ್ಷಾ ವಿಭಾಗ , ಬಿಂದು ಸಿಂಧು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಇವರು ಮಾತೃ ಶಾಖಾ ಪ್ರಧಾನೆಯಾಗಿಯೂ ಕಾರ್ಯವೆಸಗಿದ್ದಾರೆ.

ಕುಂಕುಮಾರ್ಚನೆ, ಬಿಂದು ಸಿಂಧು , ಮುಷ್ಟಿ ಭಿಕ್ಷಾ ಯೋಜನೆಗಳ ಬಗ್ಗೆ ಮಾತೆಯರ ಮನವೊಲಿಸಿ ಶ್ರೀ ಮಠದ ಯೋಜನಗೆ ಮಾತೆಯರು ಸಹಕರಿಸುವಂತೆ ಮಾಡಿದ ದೇವಕಿ ಭಟ್ ಪ್ರಸ್ತುತ ಮುಳ್ಳೇರಿಯ ಮಂಡಲದ ಗುತ್ತಿಗಾರು ವಲಯದ ಮಾತೃ ಪ್ರಧಾನೆಯಾಗಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷಕ್ಕೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಹೊತ್ತು ಮಾಸದ ಮಾತೆಯಾಗಿ ಗುರಿ ತಲುಪಿದವರು. ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕವೂ ಲಕ್ಷಭಾಗಿನಿಯ ಗುರಿಯನ್ನೂ ಮುಟ್ಟಿದ್ದಾರೆ.

ಶ್ರೀ ಮಠದ ಸೇವಾ ಯೋಜನೆಗಳಲ್ಲಿ ಕಾರ್ಯವೆಸಗುವಾಗ ದೊರಕುವ ಸಂತೋಷ, ಸಂತೃಪ್ತಿ ಬೇರೆಲ್ಲೂ ಸಿಗುವುದಿಲ್ಲ ಎನ್ನುವ ಇವರಿಗೆ ದಿನದ ಎರಡೂ ಹೊತ್ತಿನಲ್ಲೂ ತಮ್ಮ ಮನೆಯ ಗೋವುಗಳ ಸೇವೆಯೇ ಅತ್ಯಂತ ಪ್ರಿಯ.
“ನಮ್ಮ ಯಜಮಾನರ ಪೂರ್ಣ ಸಹಕಾರದಿಂದ ಮಾತ್ರ ಈ ರೀತಿಯಲ್ಲಿ ಸೇವೆ ಮಾಡಲು ಸಾಧ್ಯವಾಗುತ್ತಿದೆ. ಅವರೇ ನನಗೆ ಧೈರ್ಯ ತುಂಬಿ ವಾಹನ ಚಾಲನೆ ಕಲಿಸಿದ ಕಾರಣ ಇಂದು ನನಗೆ ಈ ವಯಸ್ಸಿನಲ್ಲೂ ಒಬ್ಬಳೇ ಓಡಾಡಲು ಸಾಧ್ಯವಾಯಿತು. ಮಾತ್ರವಲ್ಲ ನಮ್ಮ ಮನೆಕೆಲಸಗಳಿಗೂ ಸದಾ ಕೈ ಜೋಡಿಸುವ ಇವರಿಗೆ ಮೊದಲ ಮನ್ನಣೆ ಸಲ್ಲಬೇಕು ಎಂದು ತುಂಬು ಹೃದಯದಿಂದ ನುಡಿಯುತ್ತಾರೆ ದೇವಕಿ ಪನ್ನೆ.

ಪ್ರತಿದಿನವೂ ಸಂಜೆ ಹಟ್ಟಿ ಕೆಲಸ ಪೂರೈಸಿ ತಮ್ಮೂರಿನ ಮನೆ ಮನೆಗಳಿಗೆ ಭೇಟಿ ನೀಡಿ ಮಾತೃತ್ವಮ್ ಯೋಜನೆಯ ಬಗ್ಗೆ ವಿವರಿಸಿ ‘ಹನಿ ಹನಿ ಕೂಡಿ ಹಳ್ಳ’ ಎಂಬಂತೆ ಗುರಿ ತಲುಪಿದವರು ದೇವಕಿ ಭಟ್.

” ಐದೂವರೆಗೆ ಮನೆಯಿಂದ ಹೊರಟರೆ ಮರಳಿ ಮನೆಗೆ ಬರುವುದು ರಾತ್ರಿ ಒಂಭತ್ತರ ನಂತರವೇ. ಹಳ್ಳಿಯ ಮನೆಗಳಲ್ಲಿ ಜನರು ಹಗಲು ಇತರ ಕೆಲಸಗಳಿಗೆ ಹೋಗುವ ಕಾರಣ ಈ ಹೊತ್ತಿನಲ್ಲಿ ಹೋದರೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ ಶ್ರೀ ಮಠದ ವಿವಿಧ ಸೇವಾ ಯೋಜನೆಗಳ ಬಗ್ಗೆ ವಿವರಿಸಲು ಸಾಧ್ಯವಾಗುತ್ತದೆ ” ಎಂಬುದು ಇವರ ಅಭಿಪ್ರಾಯ.

ಪತಿ ಗೋಪಾಲಕೃಷ್ಣ ಭಟ್ ಮತ್ತು ಮಗನ ಸಂಪೂರ್ಣ ಪ್ರೇರಣೆ, ಸಹಕಾರಗಳಿಂದ ಶ್ರೀ ಮಠದ ಸೇವೆಯಲ್ಲಿ ಮುಕ್ತವಾಗಿ ಭಾಗವಹಿಸುತ್ತಾ , ಮನೆಯ ಹಿರಿಯರ ಆರೈಕೆಯ ಜೊತೆಗೆ ಮನೆ ಹಸುಗಳ ಸೇವೆಯನ್ನು ಮಾಡುತ್ತಾ ಸಾಮಾಜಿಕ ಕ್ಷೇತ್ರದಲ್ಲೂ ದುಡಿಯುವ ದೇವಕೀ ಭಟ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

“ಹಸುಗಳ ಪಾಲನೆ ಪೋಷಣೆ ಮಾಡಿದವರಿಗೆ ಮಾತ್ರ ಅವುಗಳ ಪ್ರೀತಿಯನ್ನು ಅನುಭವಿಸಲು ಸಾಧ್ಯ. ಊರ ಹಸುಗಳನ್ನು ಸಾಕುವುದು ಬಹಳ ಸುಲಭವಾಗಿಯೇ ಇದ್ದರೂ ಹಿಂದಿನ ಕಾಲದಂತೆ ಹಟ್ಟಿ ತುಂಬಾ ಹಸುಗಳನ್ನು ಸಾಕಲು ಈಗೀಗ ತುಂಬಾ ಕಷ್ಟವಾಗುತ್ತಿದೆ. ಆದರೂ ಪ್ರತಿ ಮನೆಯಲ್ಲೂ ಹಸುವಿನ ಕೊರಳ ಗಂಟೆಯ ನಿನಾದ ಅನುರಣಿಸುತ್ತಿದ್ದರೆ ನಮ್ಮ ಸಮಾಜದಲ್ಲಿ ಮಹತ್ತರವಾದ ಬದಲಾವಣೆ ಕಾಣಲು ಸಾಧ್ಯ. ಹಸು ಕರುಗಳ ಜೊತೆಗಿನ ಒಡನಾಟ ಮಾನವನ ಮನಸ್ಸಿಗೂ ,ಬದುಕಿಗೂ ಚೈತನ್ಯ ತುಂಬುತ್ತದೆ” ದೇವಕೀ ಭಟ್ ಅವರ ಈ ಮಾತುಗಳು ಎಲ್ಲರಿಗೂ ಪ್ರೇರಣಾದಾಯಕ.

Leave a Reply

Your email address will not be published. Required fields are marked *