ಮನೆಯ ಹಸುಗಳಿಗೂ ಮುಕ್ತ ವಾತಾವರಣ ನೀಡಿದ ಮಾಸದ ಮಾತೆ: ವಿಜಯಲಕ್ಷ್ಮಿ ಕಲ್ಲಕಟ್ಟ

ಮಾತೃತ್ವಮ್

ಗೋಸ್ವರ್ಗಕ್ಕೆ ಹೋಗಿ ಬಂದ ಮೇಲೆ ಅಲ್ಲಿ ಹಸುಗಳಿಗೆ ನೀಡಿದ ಮುಕ್ತ ಸ್ವಾತಂತ್ರ್ಯವನ್ನು ಕಂಡು, ಮೆಚ್ಚಿ ತಮ್ಮ ಮನೆಯಲ್ಲಿರುವ ಹಸುಗಳಿಗೂ ಇಂತಹುದೇ ವಾತಾವರಣ ಕಲ್ಪಿಸಿಕೊಟ್ಟವರು ಮುಳ್ಳೇರಿಯ ಮಂಡಲದ ಪೆರಡಾಲ ವಲಯದಿಂದ ಮಾಸದ ಮಾತೆಯಾಗಿ ಗುರಿ ತಲುಪಿದ ವಿಜಯಲಕ್ಷ್ಮಿ ಕಲ್ಲಕಟ್ಟ.

ಕಾಕೆಕೊಚ್ಚಿ ನಾರಾಯಣ ಭಟ್, ಹೊನ್ನಮ್ಮ ದಂಪತಿಗಳ ಪುತ್ರಿಯಾದ ಇವರಿಗೆ ಹೊಲಿಗೆ, ಕಸೂತಿ, ಕರಕುಶಲ ಕಲೆಗಳಲ್ಲಿ ಪರಿಣತಿಯಿದೆ. ಕೃಷಿ, ಹೋದೋಟ ಇಷ್ಟ ಪಡುವ ಅವರ ಮನೆಯ ಮುಂದೆ ಸುಂದರವಾದ ಹೂಗಳು, ತಾವರೆಕೊಳ ಜನಮನ ಸೆಳೆಯುತ್ತಿರುವುದು ಇವರ ಆಸಕ್ತಿಗೆ ಸಾಕ್ಷಿಯಾಗಿದೆ.

ಸುಮಾರು ಒಂದೂವರೆ ದಶಕಗಳಿಂದಲೂ ಶ್ರೀ ಮಠದ ನಿರಂತರ ಸಂಪರ್ಕದಲ್ಲಿರುವ ಇವರು ೨೦೦೬ ರಲ್ಲಿ ನಡೆದ ರಾಮಾಯಣ ಮಹಾಸತ್ರದಲ್ಲಿ ಹತ್ತು ದಿನಗಳ ಕಾಲ ಕಾರ್ಯಕರ್ತೆಯಾಗಿ ಭಾಗವಹಿಸಿದವರು. ೨೦೦೭ ರ ವಿಶ್ವ ಗೋ ಸಮ್ಮೇಳನದಲ್ಲೂ ಸೇವೆ ಸಲ್ಲಿಸಿದ್ದಾರೆ.

“ಮಠದ ಸಂಪರ್ಕಕ್ಕೆ ಬಂದ ಮೇಲೆ ಮನೆಯಲ್ಲಿಯೂ ಭಾರತೀಯ ತಳಿಯ ಹಸುಗಳನ್ನೇ ಸಾಕಲಾರಂಭಿಸಿದೆವು. ದೇಶೀಯ ಗೋವಿನ ಒಡನಾಟವೇ ಮನಸ್ಸಿಗೆ ಹಿತ ನೀಡುತ್ತದೆ. ಮನೆಯಲ್ಲಿಯೂ ಹತ್ತಾರು ಹಸುಗಳನ್ನು ಸಾಕಬೇಕೆಂಬ ಮನಸ್ಸಿದ್ದರೂ ಈ ವಯಸ್ಸಿನಲ್ಲಿ ಅದು ಕಷ್ಟ. ಅದಕ್ಕಾಗಿಯೇ ಈ ರೀತಿಯಲ್ಲಿ ಗೋ ಸೇವೆ ಮಾಡುವ ಯೋಜನೆಗೆ ಕೈ ಜೋಡಿಸಿದೆ ಎನ್ನುತ್ತಾರೆ ವಿಜಯಲಕ್ಷ್ಮಿ ಕಲ್ಲಕಟ್ಟ.

ಹದಿನೈದು ವರ್ಷಗಳಿಂದ ಕಾಸರಗೋಡು ತಳಿಯ ಕಪಿಲೆ ಹಸುಗಳನ್ನು ಸಾಕುತ್ತಿರುವ ಇವರು ಮುಳ್ಳೇರಿಯ ಮಂಡಲದಲ್ಲಿ ಸಾವಿರದ ಸುರಭಿ ಯೋಜನೆಯಡಿಯಲ್ಲಿ ಮಾತಾ ಸಹಸ್ರ ಪೂರೈಸಿದವರಲ್ಲಿ ಮೊದಲಿಗರಾಗಿದ್ದಾರೆ.

೨೦೧೬ರಿಂದ ಬಿಂದು ಸಿಂಧು ಸಂಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಶ್ರೀ ಮಠದ ಮೇಲಿನ‌ ಭಕ್ತಿ ಶ್ರದ್ಧೆ ಎಷ್ಟಿದೆಯೆಂದರೆ ಈ ಇಳಿ ವಯಸ್ಸಿನಲ್ಲೂ ಹದಿಹರೆಯದ ಉತ್ಸಾಹದೊಂದಿಗೆ ಹಳ್ಳಿಯ ಏರಿಳಿತದ ಹಾದಿಯಲ್ಲಿ ಕಾಲ್ನಡಿಗೆಯ ಮೂಲಕವೇ ಮನೆ ಮನೆಗಳಿಗೆ ಭೇಟಿ ನೀಡಿ ಜನರ ಮನ ಒಲಿಸಿ ಭಾರತೀಯ ತಳಿಯ ಹಸುಗಳ ವಿಶೇಷತೆಯ ಬಗ್ಗೆ ವಿವರಿಸಿ, ಪ್ರತಿ ಮನೆಯಲ್ಲಿಯೂ ಹಸು ಸಾಕಣೆಯ ಮಹತ್ವವನ್ನು ತಿಳಿಸುತ್ತಿದ್ದಾರೆ.

ಕೋಟಿ ನೀರಾಜನ, ಗೋ ಮಂಗಲ ಯಾತ್ರೆಗಳಲ್ಲಿ ಭಾಗವಹಿಸಿದ ಇವರು ಕುಂಕುಮಾರ್ಚನೆ, ಲಕ್ಷ್ಮಿ ಕರಾವಲಂಬ ಸ್ತೋತ್ರಗಳನ್ನು ನಿತ್ಯವೂ ಪಠಿಸುವವರು.

” ಪರಿಚಿತರ, ನೆಂಟರ,ಗೆಳೆಯರ ಸಹಕಾರದಿಂದ ಮಾಸದ ಮಾತೆಯ ಗುರಿ ತಲುಪಿದೆ, ಲಕ್ಷ ಭಾಗಿನಿಯಾಗುವ ಸಂದರ್ಭದಲ್ಲಿ ಉಂಟಾದ ಅನುಭವಗಳು ಮಾಸದ ಮಾತೆಯಾಗಿ ಸೇವೆ ಮಾಡಲು ಧೈರ್ಯ ತುಂಬಿತು. ಹಳ್ಳಿಗಳ ಮನೆ ಮನೆಗಳಿಗೆ ತೆರಳಿ ದೇಶೀಯ ಹಸುಗಳ ಬಗ್ಗೆ ಅರಿವು ಮೂಡಿಸಿದ ಕಾರ್ಯ ಮನಸ್ಸಿಗೆ ತೃಪ್ತಿ ನೀಡಿದೆ” ಎನ್ನುವ ಇವರು ಈಗ ತಮ್ಮ ಮಗಳನ್ನು ಮತ್ತು ಸೊಸೆಯನ್ನು ಮಾಸದ ಮಾತೆಯಾಗಿ ನಿಯೋಜಿಸಿ ಇಡೀ ಕುಟುಂಬವೇ ಗೋ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂಬುದಕ್ಕೆ ಮಾದರಿಯಾದವರು.

ಗೋವುಗಳಿಗೆ ಮನೆಯ ಪರಿಸರದಲ್ಲಿ ಮುಕ್ತ ವಾತಾವರಣ ಒದಗಿಸಿ ಕೊಟ್ಟು ಪುಟ್ಟ ಗೋಸ್ವರ್ಗ ನಿರ್ಮಾಣದ ಕನಸು ಕಾಣುತ್ತಿರುವ ವಿಜಯಲಕ್ಷ್ಮಿ ಕಲ್ಲಕಟ್ಟ ಅವರಿಗೆ ಮುಂದೆ ಎರಡನೇ ವರ್ಷದ ಮಾಸದ ಮಾತೆಯ ಗುರಿ ತಲುಪುವುದರ ಜೊತೆಗೆ ತಮಗೆ ಸಾಧ್ಯವಿರುವಷ್ಟು ಶ್ರೀ ಮಠದ ಗೋಸೇವೆ ಮಾಡ ಬೇಕೆಂಬುದೇ ಗುರಿ. ಗುರುಸೇವೆ , ಗೋ ಸೇವೆಗಳಲ್ಲಿ ಅವರು ತೋರುತ್ತಿರುವ ಉತ್ಸಾಹ, ಹುರುಪು ಎಲ್ಲಾ ಮಾತೆಯರಿಗೂ ದಾರಿದೀಪವಾಗಲಿ.

Leave a Reply

Your email address will not be published. Required fields are marked *